![]() |
ಅಣಬೆ ಬೇಸಾಯ ಸಲೀಸುಗೊಳಿಸುವ `ರೆಡಿ-ಟು-ಫ್ರೂಟ್ ಚೀಲ
|
ಉಪ್ಪಿನ ಕಾಯಿ, ಸೂಪ್, ಚಟ್ನಿ ಪುಡಿಗಳು, ಪಾನೀಯಗಳು, ಔಷಧ ಹೀಗೆ ಎಲ್ಲದಕ್ಕೂ ಸೈ ಎನಿಸಿರುವ ಅಣಬೆಯನ್ನು ಅನುಪಯುಕ್ತ ಸಾವಯವ ತ್ಯಾಜ್ಯಗಳಿಂದಲೇ ಹೆಚ್ಚಿನ ಬಂಡವಾಳವಿಲ್ಲದೆಯೇ ಬೆಳೆಯಬಹುದು ಎನ್ನುತ್ತಾರೆ ಮೀರಾ. `ಹಣ್ಣು ಮತ್ತು ತರಕಾರಿಗಳಿಗೆ ಹೋಲಿಸಿದರೆ ಅಣಬೆಯಲ್ಲಿ ಹೆಚ್ಚಿನ ಪ್ರೋಟಿನ್ ಅಂಶ ಇದೆ. ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಬಿ2, ವಿಟಮಿನ್ ಡಿ ಜೀವಸತ್ವ ಹೇರಳವಾಗಿದೆ. ಕಬ್ಬಿಣಾಂಶದ ಪ್ರಮಾಣ ಕೂಡ ತರಕಾರಿ ಮತ್ತು ಮಾಂಸಕ್ಕೆ ಹೋಲಿಸಿದರೆ ಅಣಬೆಯಲ್ಲಿ ಅಧಿಕ ಪ್ರಮಾಣದಲ್ಲಿದೆ. ಜತೆಗೆ ಕೊಬ್ಬು, ಸಕ್ಕರೆ ಮತ್ತು ಕ್ಯಾಲೊರಿ ಅಂಶಗಳು ಕಡಿಮೆ ಪ್ರಮಾಣದಲ್ಲಿರುವುದರಿಂದ ಇದು ಮಧುಮೇಹ ಹಾಗೂ ಹೃದ್ರೋಗಿಗಳಿಗೆ ಉತ್ತಮ ಆಹಾರ' ಎನ್ನುವುದು ಅವರ ಅಭಿಮತ.
ಉದ್ಯೋಗ ಸಂಖ್ಯೆ ಹೆಚ್ಚಳ
ಭಾರತದಲ್ಲಿ ಪ್ರತಿ ವರ್ಷ 1.44 ಕೋಟಿ ಟನ್ ಕೃಷಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದನ್ನು ಸುಡಲಾಗುತ್ತಿದೆ ಇಲ್ಲವೇ ಪರಿಸರದಲ್ಲಿ ಕೊಳೆಯಲು ಬಿಡುವ ಮೂಲಕ ಪರಿಸರವನ್ನು ಕಲುಷಿತಗೊಳಿಸಲಾಗುತ್ತಿದೆ. ಇದರಲ್ಲಿ ಶೇ 10ರಷ್ಟು ಅಂದರೆ 14.4 ಲಕ್ಷ ಟನ್ ಕೃಷಿ ತ್ಯಾಜ್ಯವನ್ನು ಸದುಪಯೋಗ ಮಾಡಿಕೊಂಡರೆ ಸುಮಾರು 72 ಲಕ್ಷ ಟನ್ ಅಣಬೆಯನ್ನು ಉತ್ಪಾದಿಸಬಹುದು. ಇದು 1.44 ಟನ್ ಪ್ರೋಟಿನ್ ಉತ್ಪಾದನೆಗೆ ಸಮವಾಗಿದೆ. ಇಷ್ಟು ಪ್ರಮಾಣದ ಅಣಬೆ ಬೇಸಾಯ 43 ಲಕ್ಷ ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ಒದಗಿಸುತ್ತದೆ.
![]() |
| ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ |
ಸದ್ಯಕ್ಕೆ ಬೆಂಗಳೂರು ನಗರವೊಂದರಲ್ಲಿ ದಿನಕ್ಕೆ 5 ಟನ್ ಅಣಬೆ ಬೇಡಿಕೆಯಿದೆ. ಆದರೆ ಪೂರೈಕೆಯಾಗುತ್ತಿರುವುದು ಒಂದು ಟನ್ ಮಾತ್ರ. ಈ ಅಂಕಿ ಅಂಶವೇ ಅಣಬೆಯ ಮಹತ್ವ ಸಾರುತ್ತದೆ. ಬೀಜ ಉತ್ಪಾದನೆ, ಬೇಸಾಯಕ್ಕೆ ಬೇಕಾಗುವ ಪರಿಕರಗಳಾದ ಭತ್ತದ ಹುಲ್ಲು, ಪಾಶ್ಚರೀಕರಿಸಿದ ಮಣ್ಣಿನ ಪೂರೈಕೆ, ನಿರ್ಜಲೀಕರಣ, ಮೌಲ್ಯವರ್ಧಿತ ಪದಾರ್ಥಗಳ ಉತ್ಪಾದನೆ, ಶೀತಲ ಗೃಹಗಳ ನಿರ್ವಹಣೆ, ಆಹಾರೋದ್ಯಮ, ಒಣ ಅಣಬೆ ತಯಾರಿಕೆ ಹೀಗೆ ಬೇಸಾಯವನ್ನು ಹೊರತುಪಡಿಸಿಯೂ ಹತ್ತು ಹಲವು ಉದ್ಯೋಗಗಳಿಗೆ ಇದು ಅವಕಾಶ ಒದಗಿಸುತ್ತದೆ.
ಈ ನಿಟ್ಟಿನಲ್ಲಿ ವರ್ಷದಲ್ಲಿ ಮೂರು ಬಾರಿ ಐಐಎಚ್‌ಆರ್ ಸಂಸ್ಥೆಯು ಅಣಬೆ ಬೀಜ ಉತ್ಪಾದನೆ ಮತ್ತು ಬೇಸಾಯ ಕುರಿತ ತರಬೇತಿಗಳನ್ನು ನಡೆಸುತ್ತ ಬರುತ್ತಿದೆ. ಎರಡು ವರ್ಷಗಳಲ್ಲಿ ಹೆಸರಘಟ್ಟ ಸುತ್ತಮುತ್ತಲಿನ ಹಳ್ಳಿಗಳ ಸುಮಾರು 3 ಸಾವಿರ ಮಹಿಳೆಯರಿಗೆ `ರೆಡಿ-ಟು-ಫ್ರೂಟ್' ಬ್ಯಾಗ್‌ಗಳನ್ನೂ ವಿತರಿಸಿ, ಈ ಮೂಲಕ ಅಣಬೆ ಬಹುಪಯೋಗ ಕುರಿತು ಅರಿವು ಮೂಡಿಸುತ್ತಿದೆ. ಸಂಪರ್ಕಕ್ಕೆ: 080- 28466420 /347
`ರೆಡಿ-ಟು-ಫ್ರೂಟ್' ಬ್ಯಾಗ್
ಎಲ್ಲ ಮಾರುಕಟ್ಟೆಗಳಲ್ಲಿ ತಾಜಾ ಅಣಬೆ ಸಿಗುತ್ತದೆ ಎನ್ನುವುದು ಖಾತ್ರಿಯಿಲ್ಲ. ಆದರಿಂದ ಮನೆಯಲ್ಲಿಯೇ ತಾಜಾ ಅಣಬೆ ಬೆಳೆದುಕೊಳ್ಳಲಿ ಎಂಬ ಆಶಯದೊಂದಿಗೆ ಐಐಎಚ್‌ಆರ್‌ನ ವಿಜ್ಞಾನಿಗಳು `ರೆಡಿ-ಟು-ಫ್ರೂಟ್' ಎಂಬ ಅಣಬೆ ಬ್ಯಾಗ್‌ಗಳನ್ನು ಸಿದ್ಧಪಡಿಸಿದ್ದಾರೆ. ಒಂದು ಕೆ.ಜಿ ತೂಕದ ಈ ಬ್ಯಾಗ್‌ಗಳನ್ನು ಮನೆಯಲ್ಲಿ ನೆರಳಿರುವ ಖಾಲಿ ಸ್ಥಳಗಳಲ್ಲಿ ಇಟ್ಟು ಅಥವಾ ನೇತು ಹಾಕಿ ಸ್ವಲ್ಪ ನೀರು ಚಿಮುಕಿಸಿದರೆ ಸಾಕು, ವಾರದೊಳಗೆ ತಾಜಾ ಅಣಬೆ ಸಿದ್ಧವಾಗುತ್ತದೆ. ಅದನ್ನು ಕತ್ತರಿಸಿ ಮತ್ತೆ ನೀರು ಚಿಮುಕಿಸಿದರೆ ವಾರದೊಳಗೆ ಮತ್ತೊಂದು ಬೆಳೆ ಸಿದ್ಧವಾಗಿರುತ್ತದೆ. ಒಂದು ಬ್ಯಾಗ್‌ನಿಂದ ಎರಡು ಬೆಳೆ ಸೇರಿ 200-250 ಗ್ರಾಂ ತಾಜಾ ಅಣಬೆ ಪಡೆಯಬಹುದು. ಇದಕ್ಕೆ ತಗಲುವ ವೆಚ್ಚ 10 ರೂಪಾಯಿ! ಈ ಬ್ಯಾಗ್‌ಗಳನ್ನು ಮಹಿಳೆಯರೇ ಸಿದ್ಧಪಡಿಸಿ ಅಣಬೆ ಬೆಳೆದು ಮಾರಾಟ ಮಾಡಿಯೂ ಹಣ ಗಳಿಸಬಹುದು.
(ಪ್ರಜಾವಾಣಿ ದಿನಪತ್ರಿಕೆಯ ಕರ್ನಾಟಕ ದರ್ಶನ ಪುರವಣಿಯ ಕೃಷಿ ಪುಟದಲ್ಲಿ ಮಂಗಳವಾರ, ಆಗಸ್ಟ್ 27, 2013 ರಂದು ಪ್ರಕಟವಾದ ಲೇಖನ)


No comments:
Post a Comment