Wednesday, August 21, 2013

ಚಿಣ್ಣರಿಗೊಂದು ವೆಬ್ ತಾಣ!

 
ಮಕ್ಕಳಿಗೂ ಒಂದು ಸಾಮಾಜಿಕ ಜಾಲತಾಣ ಸೃಷ್ಟಿಯಾಗಿದೆ. ಮಕ್ಕಳಲ್ಲಿ ದಿನೇದಿನೇ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ಗೀಳು ಒಂದೆಡೆ. ಅದೇ ರೀತಿ ಜಾಲತಾಣಗಳಿಂದ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ದುಷ್ಪರಿಣಾಮಗಳು ಇನ್ನೊಂದೆಡೆ. ಇವುಗಳ ಮಧ್ಯೆ ತೊಳಲಾಡುವ ಬಹುತೇಕ ಪಾಲಕರ ಸ್ಥಿತಿ ಅತ್ತ ದರಿ, ಇತ್ತ ಪುಲಿ ಎನ್ನುವಂತಿರುತ್ತದೆ.

ಪ್ರಸ್ತುತ ದೇಶದಲ್ಲಿ ಸುಮಾರು 40 ಲಕ್ಷ ಮಕ್ಕಳು ತಮ್ಮನ್ನು ಅಪಾಯಕಾರಿ ಆನ್‌ಲೈನ್ ಚಟುವಟಿಕೆಗಳಿಗೆ ಒಡ್ಡಿಕೊಂಡಿದ್ದಾರೆ. 3.5 ಕೋಟಿ ಮಕ್ಕಳು ಆನ್‌ಲೈನ್‌ನಲ್ಲಿ ಸೈಬರ್ ಬೆದರಿಕೆ ಸ್ವರೂಪದ ಅನುಭವಗಳನ್ನು ಎದುರಿಸಿದ್ದಾರೆ ಎನ್ನುತ್ತದೆ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ವರದಿ.

ಒಂದು ಅಂದಾಜು ಪ್ರಕಾರ ಸದ್ಯ ಭಾರತದಲ್ಲಿ ನಗರ ಪ್ರದೇಶದ ಶೇ 27ಕ್ಕೂ ಅಧಿಕ ಮಕ್ಕಳು ಕಂಪ್ಯೂಟರ್ ಮತ್ತು ಮೊಬೈಲ್ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಅಂತರ್ಜಾಲವನ್ನು ಜಾಲಾಡುತ್ತಿದ್ದಾರೆ. ಈ ಜಾಲದ ಆಕರ್ಷಣೆಗೆ ಸಿಲುಕಿದ ಮಕ್ಕಳನ್ನು ಅದರಿಂದ ವಿಮುಖಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಬಲವಂತದಿಂದ ಅವರನ್ನು ದೂರವಿರಿಸಲೆತ್ನಿಸಿದರೆ ಅದರ ಸಿಟ್ಟನ್ನು ಅವರು ಬೇರೆ ರೂಪದಲ್ಲಿ ಪಾಲಕರ ಮೇಲೆ ತೀರಿಸಿಕೊಳ್ಳುತ್ತಾರೆ ಎನ್ನುತ್ತಾರೆ ಮನಃಶಾಸ್ತ್ರ ತಜ್ಞರು.

ಈ ನಿಟ್ಟಿನಲ್ಲಿ ನಗರ ಪ್ರದೇಶದ ಬಹುತೇಕ ಪಾಲಕರು ಮಕ್ಕಳಿಗಾಗಿ ಆನ್‌ಲೈನ್ ಸುರಕ್ಷತೆ, ಗೌಪ್ಯತೆ ಜತೆಗೆ ಮನರಂಜನೆ ಹಾಗೂ ಶಿಕ್ಷಣಕ್ಕೆ ಪೂರಕವಾದ ಸಾಮಾಜಿಕ ಜಾಲತಾಣಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಇಂತಹ ಪಾಲಕರನ್ನು ಗಮನದಲ್ಲಿರಿಸಿಕೊಂಡು ಜನ್ಮ ತಳೆದದ್ದೆ worldoo.com.

ಏಪ್ರಿಲ್‌ನಲ್ಲಿ ಕಾರ್ಯಾರಂಭ ಮಾಡಿರುವ worldoo.com ವಿಶೇಷವಾಗಿ 6ರಿಂದ 12 ವರ್ಷದ ಭಾರತೀಯ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಿಸರ ವ್ಯವಸ್ಥೆಯ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ಜಾಲತಾಣವಾಗಿದೆ. ಈ ತಾಣದಲ್ಲಿ ಈಗಾಗಲೇ 20,000ಕ್ಕೂ ಅಧಿಕ ಮಕ್ಕಳು ನೋಂದಾಯಿಸಿಕೊಂಡಿದ್ದಾರೆ.

ವಿಶೇಷವಾಗಿ ಮಕ್ಕಳಿಗಾಗಿಯೇ ರೂಪಿಸಿರುವ ಈ ತಾಣದಲ್ಲಿ ದುರುಪಯೋಗತಡೆಯುವ ನಿಟ್ಟಿನಲ್ಲಿ ಬಹು ವಿಧದ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ ಎನ್ನುತ್ತಾರೆ ಈ ಜಾಲತಾಣದ ಮುಖ್ಯಸ್ಥರಾಗಿರುವ ಹರ್ಷವರ್ಧನ್ ದೇವ್.

ಹಲವಾರು ಸಾಮಾಜಿಕ ತಾಣಗಳಲ್ಲಿ ಮಕ್ಕಳು ಸುಳ್ಳು ವಯಸ್ಸು ದಾಖಲಿಸುವ ಮೂಲಕ ಪ್ರವೇಶ ಪಡೆದು ದುರುಪಯೋಗಕ್ಕೆ ಒಳಗಾಗುವುದನ್ನು ಕಾಣಬಹುದು. ಆದರೆ ಈ ತಾಣದಲ್ಲಿ ನೋಂದಣಿ ಮಾಡಿಸಿಕೊಳ್ಳಲು ಅಪೇಕ್ಷಿಸುವ ಮಗು ಇ-ಮೇಲ್ ಮೂಲಕ ಪೋಷಕರು ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ತಾಣವು ಮಕ್ಕಳು ತಮ್ಮ ಪರಿಚಯದಲ್ಲಿ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದನ್ನು ತಡೆಗಟ್ಟುವುದರ ಜತೆಗೇ, ಖಾಸಗಿ ಛಾಯಾಚಿತ್ರಗಳನ್ನು ಅಪ್‌ಲೋಡ್ ಮಾಡುವುದನ್ನು ನಿಯಂತ್ರಿಸುವ ವ್ಯವಸ್ಥೆ ಒಳಗೊಂಡಿದೆ. ಅಲ್ಲದೇ, ಮಕ್ಕಳ ಚಾಟಿಂಗ್ ಮತ್ತಿತರ ಚಟುವಟಿಕೆಗಳ ಮೇಲೆ ಕಣ್ಣಿಡುವ ಜಾಲತಾಣದ ನಿಯಂತ್ರಕರು, ಮಕ್ಕಳ ಗೌಪ್ಯತೆಗೆ ಧಕ್ಕೆ ತರುವಂತಹ ಚಟುವಟಿಕೆಗಳ ನಿಯಂತ್ರಿಸುತ್ತಾರೆ ಎಂದು ಹೇಳುತ್ತಾರೆ ದೇವ್.

ಈ ತಾಣದಲ್ಲಿ ಮಕ್ಕಳು ತಮ್ಮ ಚಟುವಟಿಕೆಗಳಲ್ಲಿ ಕೆಟ್ಟ ಭಾಷೆ ಹಾಗೂ ಅಶ್ಲೀಲ ಪದಗಳನ್ನು ಬಳಕೆ ಮಾಡುವುದರ ಮೇಲೆ ನಿಗಾ ಇಡಲಾಗುತ್ತದೆ. ಜತೆಗೆ ಅಂತಹ ಪದಗಳನ್ನು ಬಳಸಿದವರಿಗೆ ಒಂದೆರಡು ಬಾರಿ ಎಚ್ಚರಿಕೆ ಸಂದೇಶ ಕಳುಹಿಸಲಾಗುತ್ತದೆ. ಅದಕ್ಕೂ ಜಗ್ಗದಿದ್ದಾಗ ಅವರಿಗೆ ತಾಣದ ಪ್ರವೇಶವನ್ನು ರದ್ದುಗೊಳಿಸಲಾಗುತ್ತದೆ.

ಮಕ್ಕಳಿಗೆ ಶಿಕ್ಷಣದೊಂದಿಗೆ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ಈ ಜಾಲತಾಣದ ಕಂಪೆನಿಯು ಹಲವು ಕಾರ್ಟೂನ್ ನೆಟ್‌ವರ್ಕ್‌ಗಳು, ಚಿತ್ರನಿರ್ಮಾಣ ಕಂಪೆನಿಗಳು ಸೇರಿದಂತೆ ಜೀಕ್ಯೂ, ನ್ಯಾಷನಲ್ ಜಿಯೋಗ್ರಾಫಿಕ್ ಮತ್ತು ಜೆಫ್‌ಕಾರ್ವಿನ್ ಮುಂತಾದ ಚಾನೆಲ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ತಾಣದಲ್ಲಿ ಮಕ್ಕಳು ವಿವಿಧ ಬಗೆಯ ಪುಸ್ತಕಗಳ ಜತೆಗೆ ಅಮರ ಚಿತ್ರಕಥಾ, ಕ್ರಾಸ್‌ವರ್ಡ್ಸ್, ಲ್ಯಾಂಡ್ ಮಾರ್ಕ್, ಡ್ರೀಮ್‌ಲ್ಯಾಂಡ್, ಬ್ರಿಟಾನಿಕಾ ಬುಕ್ಸ್, ರಾಬಿನ್‌ಏಜ್ ಮತ್ತು ಚಂಪಕ ಮುಂತಾದವುಗಳಿಂದ ಕಾಮಿಕ್ಸ್‌ಗಳನ್ನು ಓದಬಹುದಾಗಿದೆ. ಪ್ರಾಣಿಗಳು, ಸ್ಥಳಗಳು ಮತ್ತು ಬಹುವಿಧದ ವಸ್ತುಗಳನ್ನು ಕುರಿತು ಮಾಹಿತಿ ಪಡೆಯಬಹುದು.

ಮಕ್ಕಳು ಮನರಂಜನೆಯಿಂದ ಆನಂದ ಪಡೆಯುವ ಜತೆಗೆ ಅವರ ಬೌದ್ಧಿಕ ಬೆಳವಣಿಗೆಗೆ ಅಗತ್ಯವಾದ ಅರ್ಥಪೂರ್ಣ ಮಾಹಿತಿಗಳನ್ನು ಹಾಗೂ ಹೊಸ ವಿಚಾರಗಳನ್ನು ಅವರು ತಿಳಿದುಕೊಳ್ಳುವಂತೆ ನಾವು ಈ ತಾಣವನ್ನು ವಿನ್ಯಾಸಗೊಳಿಸಿದ್ದೇವೆ. ಇದು ಮಕ್ಕಳಿಗೆ ವಿನೋದ, ಜ್ಞಾನ, ಗೆಳೆಯರು, ಆಟ, ಸಿನಿಮಾ ಒದಗಿಸುವ ಜತೆಗೆ ಅವರನ್ನು ಕ್ರಿಯಾಶೀಲರು ಹಾಗೂ ಕಲ್ಪನಾಶೀಲರನ್ನಾಗಿ ಮಾಡುತ್ತದೆ ಎನ್ನುತ್ತಾರೆ ಜಾಲತಾಣದ ಸ್ಥಾಪಕರು.

 (ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯ ತಂತ್ರಜ್ಞಾನ ಪುಟದಲ್ಲಿ ಬುಧವಾರ, ಆಗಸ್ಟ್ 21, 2013 ರಂದು ಪ್ರಕಟವಾದ ಲೇಖನ)

No comments:

Post a Comment