Monday, August 26, 2013

ರಣವೀರ್ ಪಾಕಪಾಠ

 
ಜೇತೆ ತೇಜಶ್ರೀ ಗೌರವ್ ಬಹಮಾನ ನೀಡುತ್ತಿರುವ ರಣವೀರ್ ಬ್ರಾರ್
ಅಲ್ಲಿ ರವಿವಾರದ ರಜೆಯ ಮಜದೊಂದಿಗೆ, ಪ್ರಶಸ್ತಿ ಗೆಲ್ಲಬೇಕೆಂಬ ಹಂಬಲದಿಂದ ನೆರೆದ ನೀರೆಯರೇ ಅಧಿಕವಿದ್ದರು. ಕುಟುಂಬ ಸಮೇತರಾಗಿ ಜತನದಿಂದ ತಂದಿದ್ದ ತರಹೇವಾರಿ ತಿಂಡಿ ತಿನಿಸುಗಳು ಅವರೊಂದಿಗಿದ್ದವು. ಆದರೆ ಅವರ ಕಣ್ಣುಗಳು ಮಾತ್ರ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎನ್ನುವಂತೆ ತಮ್ಮ ಅಕ್ಕಪಕ್ಕದಲ್ಲಿ ಆಸೀನರಾಗಿ ಸ್ಪರ್ಧೆಗೆ ಪದಾರ್ಥಗಳನ್ನು ಅಣಿಗೊಳಿಸುವವರತ್ತಲೇ ಕುತೂಹಲದಿಂದ ಕಳ್ಳನೋಟ ಬೀರುತ್ತಿದ್ದವು; ‘ನಮಗಿಂತ ಮಿಗಿಲೇನಿದೆ ಅಲ್ಲಿ’ ಎನ್ನುವಂತೆ.

ತಂದ ಆಹಾರ ಪದಾರ್ಥಗಳನ್ನು ಸ್ಪರ್ಧೆಗಾಗಿ ಅಲಂಕರಿಸುವುದರ ಮಧ್ಯೆಯೇ ತಮ್ಮ ಅಲಂಕಾರದತ್ತ ಕಣ್ಣುಹಾಯಿಸುತ್ತ, ಗಂಡಂದಿರ ಮೆಚ್ಚುಗೆಗಾಗಿ ತಿರುಗಿ ನೋಡಿದರೆ ಅವರೆಲ್ಲಿ ? ಮನೆಯಲ್ಲಿ ಮಾಡಿದ ಅಲಂಕಾರ ಕೆಡಿಸಿಕೊಳ್ಳಲು ಹಟ ಹಿಡಿದಂತೆ ಸಿಕ್ಕಸಿಕ್ಕಲ್ಲೆಲಾ ಓಡಾಡುತ್ತಿದ್ದ ಮಕ್ಕಳನ್ನು ಹಿಡಿದು ತಂದು ನಿಲ್ಲಿಸುವುದರಲ್ಲಿ ಅವರೂ ಸುಸ್ತೋ ಸುಸ್ತು.

ಈ ದೃಶ್ಯಗಳು ಕಂಡುಬಂದಿದ್ದು ವೈಟ್‌ಫೀಲ್ಡ್‌ನ ‘ಇನ್‌ಆರ್ಬಿಟ್ ಮಾಲ್’ನಲ್ಲಿ. ಗ್ರಾಹಕರಿಗಾಗಿ ಕಾಲಕಾಲಕ್ಕೆ ವಿವಿಧ ಬಗೆಯ ಸ್ಪರ್ಧೆಗಳನ್ನು ಏರ್ಪಡಿಸುವ ಇನ್‌ಆರ್ಬಿಟ್ ಮಾಲ್ ಈ ಬಾರಿ ಝೀ ವಾಹಿನಿಯ ‘ಜೀ ಖಾನಾ ಖಜಾನಾ' ಕಾರ್ಯಕ್ರಮದ ಸಹಯೋಗದೊಂದಿಗೆ ‘ಇನ್‌ಆರ್ಬಿಟ್ ಕಿಚನ್ ಮೆಗಾಸ್ಟಾರ್’ ಎಂಬ ಅಡುಗೆ ಸ್ಪರ್ಧೆ ಮತ್ತು ಪ್ರಾತ್ಯಕ್ಷಿಕೆ ಹಮ್ಮಿಕೊಂಡಿತ್ತು. ಇದರ ನಿರ್ಣಾಯಕರಾಗಿ ಬಂದವರು ‘ಝೀ ಖಾನಾ ಖಜಾನಾ’ ಕಾರ್ಯಕ್ರಮದ ಖ್ಯಾತ ಬಾಣಸಿಗ (ಶೆಫ್) ರಣವೀರ್ ಬ್ರಾರ್.

‘‘ಇನ್ನು ಕೆಲವೇ ಕ್ಷಣಗಳಲ್ಲಿ ನಿಮ್ಮ ಮುಂದೆ ರಣವೀರ್ ಹಾಜರಾಗಲಿದ್ದಾರೆ. ಅಲ್ಲಿಯವರೆಗೆ ‘ಆಕ್ಸಿಜನ್‘ ತಂಡದಿಂದೊಂದು ಪುಟ್ಟ ಡ್ಯಾನ್ಸ್’’ ಎಂದು ಕಾರ್ಯಕ್ರಮದ ನಿರೂಪಕಿ ಘೋಷಿಸುತ್ತಿದ್ದಂತೆ, ಸ್ಪರ್ಧೆಗಾಗಿ ಅಣಿಗೊಳಿಸಿದ ಕೃತಕ ಕಿಚನ್‌ನ ವೇದಿಕೆ ಮುಂದೆ ಶುರುವಾಯಿತು ನೃತ್ಯ. ಬಳುಕುವ ಬಳ್ಳಿಯಂತಿದ್ದ ನರ್ತಕಿಯರ ನೃತ್ಯದ ಮೋಡಿಗೆ ಮೈ ಮರೆತವರೆಲ್ಲ ‘ಹೋ’ ಎಂದು ಕ್ಷಣದಲ್ಲಿ ಹೊರಟ ಚೀತ್ಕಾರಗಳಿಂದ ಕಣ್ಣು ಬಿಟ್ಟರೆ, ನರ್ತಕಿಯರ ಮಧ್ಯೆ ಹೆಜ್ಜೆ ಹಾಕುತ್ತ ಪ್ರತ್ಯಕ್ಷರಾದರು ಹಸನ್ಮುಖಿ ರಣವೀರ್.

ಎಲ್ಲರಿಗೂ ಹಾಯ್ ಹೇಳುತ್ತ ವೇದಿಕೆಯೇರಿದ ರಣವೀರ್, ‘ಅಡುಗೆ ಎನ್ನುವುದೊಂದು ಅದ್ಭುತ ಕಲೆ. ಅದನ್ನು ಹೃದಯಪೂರ್ವಕವಾಗಿ ಮಾಡಿದಾಗಲೇ ಸವಿಯಾದ ರುಚಿ ದೊರೆಯುತ್ತದೆ’ ಎನ್ನುತ್ತಲೇ ಎರಡು ಬಗೆಯ ತಿನಿಸುಗಳನ್ನು ಮಾಡುವ ಬಗೆಯನ್ನು ಹೇಳಲು ಸಿದ್ಧತೆ ನಡೆಸಿದರು.

 ವೇದಿಕೆಯಿಂದ ದೂರದಲ್ಲಿ ಆಸೀನರಾಗಿದ್ದ ಮಹಿಳೆಯರನ್ನೆಲ್ಲ ಹತ್ತಿರಕ್ಕೆ ಕರೆದ ಅವರು ಒಲೆ ಹೊತ್ತಿಸಿ ‘ಪಾಲಕ್ ಪ್ಯಾನ್‌ಕೇಕ್’ ಮತ್ತು ‘ಎಗ್ಲೆಸ್ ಬನಾನಾ ಫ್ರೆಂಚ್ ಟೋಸ್ಟ್’ ಎಂಬ ಭಕ್ಷ್ಯಗಳ ತಯಾರಿಕೆಗೆ ಶುರುವಿಟ್ಟುಕೊಂಡರು. ಅವರ ಪ್ರತಿ ಚಲನವಲನದ ಮೇಲೆ ಕಣ್ಣಿಟ್ಟ ಮಾನಿನಿಯರೆಲ್ಲ ಮೊಬೈಲ್, ಪೆನ್, ಕಾಗದ ಕೈಗೆತ್ತಿಕೊಂಡು ಪಾಕಸೂತ್ರದ ಪ್ರತಿ ವಿವರದ ದಾಖಲೀಕರಣಕ್ಕೆ ಮುಂದಾದರು.

ಈರುಳ್ಳಿ ಹೆಚ್ಚುತ್ತ, ಅಗತ್ಯ ಪದಾರ್ಥಗಳ ಮಿಶ್ರಣ ಮಾಡುತ್ತ ಪಾಕವಿಧಾನದ ವಿವರಣೆ ನೀಡುತ್ತಿದ್ದ ರಣವೀರ್‌ಗೆ ಈ ವೇಳೆ ‘ಅಡುಗೆ ತಯಾರಿಕೆಯಲ್ಲಿ ನೀವು ಮಾಡುವ ಜಾದೂ ಏನು?’ ಎಂಬೊಂದು ಪ್ರಶ್ನೆ ವೇದಿಕೆ ಸುತ್ತ ನೆರೆದವರಿಂದ ತೂರಿ ಬಂತು. ಅದಕ್ಕೆ ಮುಗುಳ್ನಗುತ್ತಲೇ ಉತ್ತರಿಸಿದ ಅವರು, ‘ಮಾಟಾನೂ ಇಲ್ಲ, ಮಂತ್ರವೂ ಇಲ್ಲ. ಎಲ್ಲ ಇರೋದು ಬರೀ ಚಿಟಿಕೆ ಉಪ್ಪಲ್ಲಿ’ ಎನ್ನುತ್ತ ಕಾದಿದ್ದ ಹೆಂಚಿನ ಮೇಲೆ ಮಿಶ್ರಣವನ್ನು ಸುರಿದರು.

ಋತುಮಾನಗಳ ಅನುಸಾರ ಬದಲಾಯಿಸಬೇಕಾದ ಆಹಾರ ಕ್ರಮಗಳು, ಅಡುಗೆಗೆ ಬಳಸುವ ಎಣ್ಣೆಗಳ ಆಯ್ಕೆ ಕುರಿತಂತೆ ಹೇಳುತ್ತ, ಹೆಂಚಿನ ಮೇಲೆ ಕೈಯಾಡಿಸುತ್ತಲೇ ‘ಎನಿ ಮೋರ್ ಕ್ವೆಶ್ಚನ್ಸ್?’ ಎಂಬಂತೆ ಸಭಿಕರತ್ತ ನೋಡಿದರು ರಣವೀರ್. ಬೆನ್ನಹಿಂದೆಯೇ ಕೇಳಿಬಂತು, ‘ನಿಮಗೆ ಚೆನ್ನಾಗಿ ರೋಟಿ ಮಾಡಲು ಬರುತ್ತದೆಯೇ?’ ಎಂಬ ಪ್ರಶ್ನೆ. ಇದಕ್ಕೆ ‘ನನ್ನ ದುರದೃಷ್ಟಕ್ಕೆ ಹೆಂಡತಿ ರೋಟಿ ಪೇಟೆಂಟ್ ತೆಗೆದುಕೊಂಡಿರುವುದರಿಂದ ನನಗೆ ರೋಟಿ ಮಾಡಲು ಬರುವುದಿಲ್ಲ. ಅದು ತುಂಬಾ ಶ್ರಮ ಮತ್ತು ಸಮಯ ಬೇಡುವ ಪದಾರ್ಥ’ ಎನ್ನುತ್ತ ಬಲು ಮೋಜಿನ ಉತ್ತರ ನೀಡಿದ ಅವರು ಮಾತಿನ ಮಧ್ಯೆಯೇ ಅಡುಗೆ ಕಾರ್ಯ ಮುಗಿಸಿದ್ದರು. ಆಗ ನೆರೆದಿದ್ದವರೆಲ್ಲ ‘ವಾವ್!’ ಎನ್ನುತ್ತಲೇ ಕರತಾಡನ ಮಾಡಿದರಲ್ಲದೆ, ಅದರಲ್ಲಿ ಕೆಲವರು ತಮ್ಮ ಮೂಗರಳಿಸಿ ರಣವೀರ್ ತಯಾರಿಸಿದ ಭಕ್ಷ್ಯಗಳ ಘಮ ಸವಿದರು.

ನಂತರ ರಣವೀರ್ 24 ಸ್ಪರ್ಧಾಳುಗಳು ತಂದಿದ್ದ ತಿಂಡಿಗಳನ್ನು ಸವಿದು, ಅವರಲ್ಲಿ ನಾಲ್ವರನ್ನು ಸೆಮಿಫೈನಲ್‌ಗೆ ಆಯ್ಕೆ ಮಾಡಿದರು. ಸೆಮಿಫೈನಲ್ ಸುತ್ತಿನಲ್ಲಿ ನಾಲ್ವರೊಂದಿಗೆ ಪ್ರಶ್ನೋತ್ತರ ನಡೆಸಿ ಅದರಲ್ಲಿ ಇಬ್ಬರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿದರು. ಅಂತಿಮ ಸುತ್ತು ಅಡುಗೆ ಮಾಡುವದಾಗಿತ್ತು. ಇದರಲ್ಲಿ ‘ಪ್ರೆಂಚ್ ಟೊಸ್ಟ್’ ತಯಾರಿಸಿದ ಆರ್ಯನ್ ಅವರಿಗೆ ರನ್ನರ್ ಅಪ್ ಪ್ರಶಸ್ತಿ ಒಲಿಯಿತು. ‘ಟ್ವಿಸ್ಟೆಡ್ ಚೀಲಾ’ ಸಿದ್ಧಪಡಿಸಿದ ತೇಜಶ್ರೀ ಗೌರವ್ ಅವರು ‘ಅಂತಿಮ ವಿಜೇತೆ’ ಎಂಬ ಗೌರವಕ್ಕೆ ಪಾತ್ರರಾಗುವುದರ ಜತೆಗೆ 20 ಸಾವಿರ ರೂಪಾಯಿಗಳ ‘ಗಿಫ್ಟ್ ಕಾರ್ಡ್’ನೊಂದಿಗೆ ಝೀ ವಾಹಿನಿಯ ‘ಖಾನಾ ಖಜಾನಾ’ ಅಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡರು.

(ಪ್ರಜಾವಾಣಿ ದಿನಪತ್ರಿಕೆ ಮೆಟ್ರೊ ಪುರವಣಿಯಲ್ಲಿ ಮಂಗಳವಾರ, ಆಗಸ್ಟ್ 27, 2013 ರಂದು ಪ್ರಕಟವಾದ ಲೇಖನ)

No comments:

Post a Comment