ತರಹೆವಾರಿ ಕುರುಕಲು ತಿಂಡಿಗಳಿಗೆ ದಾಸರಾಗುತ್ತಿರುವ ಇಂದಿನ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ
ಪೌಷ್ಟಿಕಾಂಶದ್ದೇ ದೊಡ್ಡ ಕೊರತೆ. ಯುನಿಸೆಫ್ ವರದಿಯೊಂದರ ಪ್ರಕಾರ ಭಾರತದ ಮಕ್ಕಳಲ್ಲಿ ಇದು ಗಂಭೀರ
ಸಮಸ್ಯೆ; ಬಹುತೇಕ ಮಕ್ಕಳು ವಯಸ್ಸಿಗೆ ತಕ್ಕ ತೂಕ ಹೊಂದಿರುವುದಿಲ್ಲ ಎಂದು ಹೇಳಲಾಗಿದೆ.
ಪೌಷ್ಟಿಕಾಂಶ ಕೊರತೆ ನೀಗಲು ಮಕ್ಕಳು ತರಕಾರಿ ಮತ್ತು ಹಣ್ಣು ಸೇವಿಸುವುದು ಅವಶ್ಯ. ದೈಹಿಕವಾಗಿ ಸದೃಢರಾದ ಮಕ್ಕಳು ಮಾತ್ರ ಆಟ, ಪಾಠದಲ್ಲಿ ಉತ್ತಮ ಸಾಧನೆ ತೋರಬಲ್ಲರು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಔಷಧಿ ಗಿಡಮೂಲಿಕಾ ಮಂಡಳಿಯು ಉತ್ಕೃಷ್ಟ ಪೋಷಕಾಂಶಗಳ ಆಗರವಾದ ಬೆಟ್ಟದ ನೆಲ್ಲಿಯ ಸಸಿಗಳನ್ನು ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳಿಗೆ ಉಚಿತವಾಗಿ ನೀಡುತ್ತಿದೆ. ಈ ಮೂಲಕ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಮತ್ತು ಅದರ ಪ್ರಯೋಜನ ತಿಳಿಸುವ ರಾಷ್ಟ್ರೀಯ `ಬೆಟ್ಟದ ನೆಲ್ಲಿ` ಪ್ರಚಾರಾಂದೋಲನ ಆರಂಭಿಸಿದೆ.
ಬೆಟ್ಟದ ನೆಲ್ಲಿಯ ಸಸ್ಯ ಸಂಪತ್ತನ್ನು ಪೋಷಿಸಿ ಜನಪ್ರಿಯಗೊಳಿಸಲು 2009ರಲ್ಲಿ ಆರಂಭವಾದ ಈ ಅಭಿಯಾನ ಆಂಧ್ರ ಪ್ರದೇಶ, ಛತ್ತಿಸ್‌ಗಡ್, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗೂ ರಾಜಸ್ತಾನದ ನಂತರ 2011ರ ಜನವರಿಯಿಂದ ಕರ್ನಾಟಕಕ್ಕೆ ಕಾಲಿಟ್ಟಿದೆ.
ಇದು ಮೂರು ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ ಜಾರಿಗೆ ಬರಲಿದ್ದು, ರಾಷ್ಟ್ರೀಯ ಔಷಧಿ ಗಿಡಮೂಲಿಕಾ ಮಂಡಳಿ ಇದಕ್ಕಾಗಿ 2.95 ಕೋಟಿ ರೂಪಾಯಿ ತೆಗೆದಿಟ್ಟಿದೆ. ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಹಾಗೂ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಮೇಲ್ವಿಚಾರಣೆ ವಹಿಸಿವೆ.
ಬೆಂಗಳೂರು ನಗರ, ಗ್ರಾಮೀಣ, ಮೈಸೂರು, ಕೊಡಗು, ದಾವಣಗೆರೆ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಸೇರಿದಂತೆ 19 ಜಿಲ್ಲೆಗಳಲ್ಲಿ ಕೃಷಿ ವಿವಿಗಳು, ಕೃಷಿ ವಿಜ್ಞಾನ ಕೇಂದ್ರಗಳು, ತೋಟಗಾರಿಕಾ ಕಾಲೇಜುಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಪಡೆಯಲಾಗುತ್ತಿದೆ. ಆದರೆ ಇದು ಐಚ್ಛಿಕ ಅಭಿಯಾನ. ಹೀಗಾಗಿ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ ಒಳಗೊಂಡು 9 ಜಿಲ್ಲೆಗಳ ಕೃಷಿ ವಿಜ್ಞಾನ ಕೇಂದ್ರಗಳು ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ.
ಶಾಲೆಯ ಸುತ್ತಲಿನ ಪರಿಸರದಲ್ಲಿ ಬೆಟ್ಟದ ನೆಲ್ಲಿ ಸಸಿ ನೆಟ್ಟು ಪಾಲನೆ ಮಾಡುವುದರಿಂದ ಮಕ್ಕಳಲ್ಲಿ ಎಳವೆಯಲ್ಲಿಯೇ ಪರಿಸರ ಪ್ರಜ್ಞೆ, ಪೌಷ್ಟಿಕಾಂಶದ ಅರಿವು ಮೂಡುತ್ತದೆ. ಜತೆಗೆ ಪೋಷಕಾಂಶಗಳ ಕೊರತೆ ಕಡಿಮೆ ಮಾಡಲು ಸಹಾಯಕವಾಗಲಿದೆ ಎನ್ನುತ್ತಾರೆ ರಾಜ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಈ ಅಭಿಯಾನದ ಮೇಲ್ವಿಚಾರಕ ಯು.ವಿ.ಸಿಂಗ್.
ರಾಜ್ಯದ ಹಲವಾರು ಭಾಗಗಳಿಗೆ ಹೊಂದಾಣಿಕೆಯಾಗುವಂತಹ ಮತ್ತು ಅಧಿಕ `ಸಿ` ಜೀವಸತ್ವ ಹೊಂದಿರುವ ತಳಿಗಳನ್ನು ಬೆಳೆಸುವುದು, ಬೆಟ್ಟದ ನೆಲ್ಲಿಯ ಸುಸ್ಥಿರ ಕೃಷಿ ಮತ್ತು ಸಂಸ್ಕರಣೆಗೆ ಒತ್ತು, ತರಬೇತಿ, ಕರಪತ್ರ ಮತ್ತು ದೃಶ್ಯ ಮಾಧ್ಯಮಗಳ ಮುಖಾಂತರ ಬೆಟ್ಟದ ನೆಲ್ಲಿಯ ಉಪಯೋಗಗಳ ಬಗ್ಗೆ ಅರಿವು ಮೂಡಿಸುವುದು ಇದರ ಧ್ಯೇಯೋದ್ದೇಶಗಳು. ಅಭಿಯಾನದಡಿ ರಾಜ್ಯದಲ್ಲಿ ಒಟ್ಟು 19 ಬೆಟ್ಟದ ನೆಲ್ಲಿ ನರ್ಸರಿ ಸ್ಥಾಪಿಸಿ 1.07 ಲಕ್ಷ ಸಸಿ ಬೆಳೆಸಲಾಗಿದೆ.
ಆಯುರ್ವೇದದಲ್ಲಿ ನೈಸರ್ಗಿಕ ಧನ್ವಂತರಿ ಎಂದು ಕರೆಯುವ, ಹಲವಾರು ಔಷಧಿಯ ಗುಣಗಳನ್ನು ಹೊಂದಿರುವ ಬೆಟ್ಟದ ನೆಲ್ಲಿಯು ವಾತ, ಪಿತ್ತ, ಕಫ ನಿವಾರಿಸುವುದಲ್ಲದೇ ಉಸಿರಾಟದ ತೊಂದರೆ, ಉರಿಯೂತ, ಚರ್ಮ ರೋಗ, ಕೂದಲಿನ ಸಮಸ್ಯೆ, ದೃಷ್ಟಿ ದೋಷ, ರಕ್ತದೊತ್ತಡ, ಹೃದಯ ರೋಗ, ಸಂಧಿವಾತ, ಯಕೃತ್ತಿನ ಕಾಯಿಲೆಗೆ ಒಳ್ಳೆಯ ಔಷಧವೂ ಹೌದು.
ಇದು ಬಾಯಿಯನ್ನು ಶುಚಿಗೊಳಿಸಿ, ಹಲ್ಲುಗಳನ್ನು ಗಟ್ಟಿ ಮಾಡುತ್ತದೆ. ಉದರದ ಆಮ್ಲವನ್ನು ಸಮತೋಲನದಲ್ಲಿಟ್ಟು ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ. ರೋಗ ನಿರೋಧಕ ಶಕ್ತಿ ಹೊಂದಿದೆ ಎನ್ನುತ್ತಾರೆ ಅಭಿಯಾನದ ಪ್ರಧಾನ ಸಂಯೋಜಕ ಮತ್ತು ಐಐಎಚ್‌ಆರ್‌ನ ಹಿರಿಯ ವಿಜ್ಞಾನಿ ಡಾ.ಟಿ. ವಸಂತ ಕುಮಾರ್.
ವಿಶೇಷವಾಗಿ `ಸಿ` ಜೀವಸತ್ವದ ಬೆಟ್ಟದ ನೆಲ್ಲಿಗೆ ಆರೋಗ್ಯ ಕೈಗಾರಿಕೆಗಳಲ್ಲಿ ಬಹು ಬೇಡಿಕೆ. ಔಷಧಿ, ಚೂರ್ಣ, ಉಪ್ಪಿನಕಾಯಿ, ಮೊರಬ್ಬ, ಕ್ಯಾಂಡಿ, ಜಾಮ್, ಚಟ್ನಿ, ಒಣಗಿಸಿದ ಸುಪಾರಿ, ಪೌಡರ್ ಹಾಗೂ ಕೇಶವರ್ಧಕ ಎಣ್ಣೆ, ಶ್ಯಾಂಪೂ ಮತ್ತು ಬಣ್ಣ ಇತ್ಯಾದಿಗಳಲ್ಲಿ ಬಳಕೆಯಾಗುತ್ತದೆ.
ಉಚಿತ ಬೆಟ್ಟದ ನೆಲ್ಲಿ ಸಸಿಗಳಿಗಾಗಿ ಆಸಕ್ತ ಶಾಲಾ ಕಾಲೇಜುಗಳು ಹಾಗೂ ಸಂಘಸಂಸ್ಥೆಗಳು ಸಮೀಪದ ಕೃಷಿ ವಿವಿ, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಕಾಲೇಜು ಸಂಪರ್ಕಿಸಬಹುದು. ಅಲ್ಲದೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ನಾಲ್ಕನೇ ಮಹಡಿ, ವನವಿಕಾಸ, ಮಲ್ಲೇಶ್ವರಂ 18ನೇ ಮುಖ್ಯರಸ್ತೆ, ಬೆಂಗಳೂರು 560 003 ಇಲ್ಲಿ ಸಂಪರ್ಕಿಸಬಹುದು. ಮಾಹಿತಿಗೆ 080 2346 6431, 2346 4089.
( ಪ್ರಜಾವಾಣಿ ದಿನಪತ್ರಿಕೆಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಮಂಗಳವಾರ, ಆಗಸ್ಟ್ 28 , 2012ರಂದು ಪ್ರಕಟವಾದ ಲೇಖನ)

No comments:
Post a Comment