Sunday, September 2, 2012

3ಜಿ ದತ್ತಾಂಶ ಪ್ರವಾಹ!


ಇತ್ತೀಚೆಗೆ ನೋಕಿಯಾ ಸೀಮೆನ್ಸ್ ನೆಟ್‌ವರ್ಕ್ಸ್ (ಎನ್‌ಎಸ್‌ಎನ್) ಮೂರನೆಯ ತಲೆಮಾರಿನ ತರಂಗಾಂತರ (3ಜಿ) ಸೇವೆ ದತ್ತಾಂಶ ಬಳಕೆಗೆ ಸಂಬಂಧಿಸಿದ ವರದಿಯೊಂದನ್ನು ಪ್ರಕಟಿಸಿದೆ. ಪ್ರಸಕ್ತ ವರ್ಷ ಮೊದಲ ಆರು ತಿಂಗಳಿನಲ್ಲಿ 3ಜಿ ದತ್ತಾಂಶ ಬಳಕೆ ಪ್ರಮಾಣವು ಶೇ 78ರಷ್ಟು ಹೆಚ್ಚಿದೆ ಎನ್ನುವುದು ಈ ಅಧ್ಯಯನ.

3ಜಿ ದರ ಕಡಿತದಿಂದ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇದರಿಂದ 2011ರ ಡಿಸೆಂಬರ್‌ನಿಂದ 2012ರ ಮೇ ವರೆಗೆ ಶೇ7 ರಷ್ಟಿದ 3ಜಿ ಬೆಳವಣಿಗೆ ದರವು ಮೇ ತಿಂಗಳಲ್ಲಿ ಶೇ17ಕ್ಕೆ ಏರಿಕೆ ಕಂಡಿದೆ.

3ಜಿ ಜತೆಗೆ 2ಜಿ ದತ್ತಾಂಶ ಬಳಕೆ ಶೇ47ರಷ್ಟು ವೃದ್ದಿಯಾಗಿರುವುದಿಂದ ದೇಶದ ಒಟ್ಟಾರೆ ಮೊಬೈಲ್ ದತ್ತಾಂಶ ಪ್ರವಾಹ ಶೇ 54ರಷ್ಟು ಹೆಚ್ಚಿದೆ. ಅಲ್ಲದೇ, 2ಜಿ ಗ್ರಾಹಕರಿಗೆ ಹೊಲಿಸಿದರೆ 3ಜಿ ಗ್ರಾಹಕರು ನಾಲ್ಕು ಪಟ್ಟು ಹೆಚ್ಚಿದ್ದಾರೆ ಎನ್ನುತ್ತದೆ `ಎನ್‌ಎಸ್‌ಎನ್` ಸಿದ್ಧಪಡಿಸಿದ ಎಂಬಿಟ್ ಸೂಚ್ಯಂಕ ವರದಿ.

`ದತ್ತಾಂಶ ಸೇವೆ ಬಳಕೆಯ ಅಗಾಧ ಹಸಿವುಳ್ಳ ಭಾರತದಲ್ಲಿ ಉನ್ನತ ಗುಣಮಟ್ಟದ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆವಿಸ್ತರಿಸುವ ಅಗತ್ಯವಿರುವುದು ನಮ್ಮ ವರದಿಯಲ್ಲಿ ಕಂಡುಬಂದ ಪ್ರಮುಖ ಅಂಶವಾಗಿದೆ` ಎನ್ನುತ್ತಾರೆ ಎನ್‌ಎಸ್‌ಎನ್‌ನ ಭಾರತ ವಿಭಾಗದ ಮುಖ್ಯಸ್ಥರಾದ ಸಂದೀಪ್ ಗಿರೋತ್ರಾ.

`ಮೊಬೈಲ್ ಬ್ರಾಡ್‌ಬ್ಯಾಂಡ್‌ಗೆ ಸಂಬಂಧಿಸಿದಂತೆ 2ಜಿ ಸೇವೆ ಭಾರತದಲ್ಲಿ ಯಶಸ್ವಿಯಾಗಿದೆ. ಇದೀಗ ಇದೇ ಹಾದಿಯಲ್ಲಿ 3ಜಿ ಕೂಡ ಮುನ್ನುಗುತ್ತಿದೆ ಎನ್ನುತ್ತಾರೆ ಅವರು.

ಸದ್ಯ 3ಜಿ ಗ್ರಾಹಕರು ಪ್ರತಿ ತಿಂಗಳು ಸರಾಸರಿ 400 ಎಂ.ಬಿಗಳಷ್ಟು ದತ್ತಾಂಶ ಬಳಸುತ್ತಿದ್ದಾರೆ. 2ಜಿ ಗ್ರಾಹಕರಿಗೆ ಹೊಲಿಸಿದರೆ ಇದು 100 ಎಂಬಿಗಳಷ್ಟು ಹೆಚ್ಚಿದೆ. ಅಲ್ಲದೇ, 3ಜಿ ಸೇವೆಯು ರಾತ್ರಿ 10 ರಿಂದ 11ಗಂಟೆಯ ಮಧ್ಯದಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದು, ಇದು ದೊಡ್ಡ ಪ್ರಮಾಣದ ಜನ ಸಮೂಹ ಮನೆಯಲ್ಲೇ ಕುಳಿತು 3ಜಿ ಸೇವೆ ಪಡೆಯುತ್ತಿರುವುದನ್ನು ಸೂಚಿಸುತ್ತದೆ ಎನ್ನುತ್ತದೆ ಈ ವರದಿ.

ಜಾಗತಿಕ ಮೊಬೈಲ್ ಬಳಕೆ ಕುರಿತು`ಇನ್ ಮೊಬಿ` ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ವಿಶೇಷವಾಗಿ ಭಾರತದಲ್ಲಿ ಶೇ33 ಚಂದಾದಾರರು ಮೊಬೈಲ್ ಮೂಲಕವೇ ಸುದ್ದಿ ಹಾಗೂ ಮಾಹಿತಿಗಳನ್ನು ನೋಡುತ್ತಾರೆ. ಟಿವಿ ಮೂಲಕ ಸುದ್ದಿ ನೋಡುವ ಪ್ರಮಾಣಕ್ಕೆ ಹೋಲಿಸಿದರೆ ಇದು ಶೇ27 ರಷ್ಟು ಹೆಚ್ಚಿದೆ.

ಜನರು ಪ್ರತಿ ದಿನ ಸರಾಸರಿ 94 ನಿಮಿಷಗಳನ್ನು ಮೊಬೈಲ್‌ಗಳಲ್ಲಿ ಮಾಹಿತಿ ನೋಡಲು ಬಳಸುತ್ತಿದ್ದು, ಇದು ಕರೆ ಮಾಡಲು ಬಳಸುವ ಸಮಯಕ್ಕಿಂತಲೂ ಅಧಿಕವಾಗಿದೆ. ಇನ್ನು ಟಿವಿಯಲ್ಲಿ ಶೇ26 ಜನರು ಮನರಂಜನೆ ಕಾರ್ಯಕ್ರಮ ನೋಡಿದರೆ, ಶೇ41ರಷ್ಟು ಜನರು ಇದಕ್ಕೆ ಮೊಬೈಲ್ ಬಳಸುತ್ತಾರೆ.

ಇದರಲ್ಲಿ ಯುವ ಜನತೆ ಲ್ಯಾಪ್‌ಟಾಪ್ ಮತ್ತು ಟಿವಿಯಲ್ಲಿ ಮನರಂಜನೆಯನ್ನು ನೋಡುವುದಕ್ಕಿಂತ ಹೆಚ್ಚು ಮೊಬೈಲ್‌ಗಳಲ್ಲಿಯೇ ನೋಡಲು ಇಷ್ಟಪಡುತ್ತಾರೆ ಎಂದೂ ಈ ವರದಿ ಗಮನ ಸೆಳೆದಿದೆ.

ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಹಾಗೂ ಜನಸಾಮಾನ್ಯರ ಕೈಗೆಟುಕದ ಬೆಲೆಯ ಮಧ್ಯಯೂ 3ಜಿ ಈವರೆಗೆ ದಾಖಲಿಸಿರುವ ಈ ಬೆಳವಣಿಗೆ ಗಮನಾರ್ಹ.ಈ ನಡುವೆ 3ಜಿ ಉತ್ತರಾಧಿಕಾರಿಯಾಗಿ ಭಾರತಕ್ಕೆ ಕಾಲಿಟ್ಟಿರುವ 4ಜಿ ಸೇವೆಯನ್ನು ಕಳೆದ ಏಪ್ರಿಲ್‌ನಲ್ಲಿ ಏರ್‌ಟೆಲ್ ಕಂಪೆನಿ ಬಳಕೆಗೆ ತಂದಿದೆ.

3ಜಿಗಿಂತ ಐದು ಪಟ್ಟು ವೇಗದ ಜತೆಗೆ ತಾಂತ್ರಿಕತೆಯಲ್ಲೂ ಕೂಡ ಮುಂದಿರುವ 4ಜಿ ಸಂವಹನ ಕ್ಷೇತ್ರದಲ್ಲಿ ಹೇಗೆ ಸಂಚಲನ ಸೃಷ್ಟಿಸಲಿದೆ ಎನ್ನುವುದು ಸದ್ಯದ ಕುತೂಹಲ.

( ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಆಗಸ್ಟ್ 29, 2012ರಂದು ಪ್ರಕಟವಾದ ಲೇಖನ)


No comments:

Post a Comment