Thursday, October 13, 2011

'ಆಟೋಗ್ರಾಫ್' ಎಂಬ ಆಪ್ತಮಿತ್ರ

ಗೆಳೆಯಾ,  ನಿನ್ನ ಉಡುಪುಗಳನ್ನು ಬದಲಿಸು,ನಿನ್ನ ಹವ್ಯಾಸಗಳನ್ನು ಬದಲಿಸು ನಿನ್ನ ಜೀವನ ಶೈಲಿ   ಬದಲಿಸು ಆದರೆ, ನನ್ನ ಅಮ್ಯೂಲವಾದ ಸ್ನೇಹವನಲ್ಲ...ಅನೇಕ ಬಾರಿ ನನ್ನನ್ನು ಕಾಡುವ ಒಂಟಿತನ ದೂರಮಾಡಿ, ಕಳೆದ ಮಧುರ ಕ್ಷಣಗಳನ್ನು ಮತ್ತೆ ಮತ್ತೆ ನೆನಪಿಸುತ್ತ, ಸಂಗಾತಿಯಾಗಿ  ನನ್ನೊಂದಿಗಿರುವ ‘ಆಟೋಗ್ರಾಫ್’, ನನ್ನ ಆಪ್ತಮಿತ್ರ. ಪ್ರಿಯ ಸಖನಾಗಿ, ನನ್ನ ಗೆಳೆಯರೆಲ್ಲರ ಪ್ರತಿನಿಧಿಯಾಗಿ ನನ್ನಲ್ಲಿ ಹೊಸತನ ತುಂಬುತ್ತಾ, ಧೈರ್ಯ ಹೇಳುತ್ತಾ, ಭವಿಷ್ಯದ ಹೊಣೆಗಾರಿಕೆಗೆ ನನ್ನನ್ನು ಸಿದ್ಧಗೊಳಿಸುವಾಗಲೆಲ್ಲ  ನನಗೆ ಹೆಮ್ಮೆ ಎನಿಸುತ್ತದೆ.

ನನ್ನ ವಿದ್ಯಾರ್ಥಿ ಜೀವನದಲ್ಲಿ ಅಪರಿಚಿತರಾಗಿ ಭೇಟಿಯಾಗಿ, ಸ್ನೇಹಿತರಾಗಿ ಕಾಲ ಕಳೆದು, ಚಿರಪರಿಚಿತರಾಗಿ ಅನಿವಾರ್ಯದ ಅಗಲುವಿಕೆಯ ಸಮಯದಲ್ಲಿ ಪಡೆದುಕೊಂಡ ಸ್ನೇಹದ ಕುರುಹು ಈ ‘ಆಟೋಗ್ರಾಫ್’.

ಪ್ರತಿ ಪುಟದಲ್ಲಿ ವಿವಿಧ ಬಗೆಯ ಬಣ್ಣ ಬಣ್ಣದ ಪೆನ್ಸಿಲ್‌ಗಳಿಂದ ಸ್ಫುಟವಾಗಿ ಗೆಳೆಯ/ಗೆಳೆತಿಯರೆಲ್ಲ ಬರೆದಿರುವ ಚಿತ್ರಗಳು, ಶ್ರೇಷ್ಠ ದಾರ್ಶನಿಕರ, ಚಿಂತಕರ, ಕವಿ, ಸಾಹಿತಿಗಳ ಸಂದೇಶ, ಉಕ್ತಿಗಳು, ವಚನ, ಶಾಯಿರಿಗಳು, ಸ್ವರಚಿತ ಕವನಗಳು, ಜೋಕುಗಳು, ಅಗಲುವಾಗಿನ ದೃಶ್ಯಕ್ಕೆ ಪೂರಕವಾದ ಚಲನಚಿತ್ರ ಗೀತೆಗಳು ಜೊತೆಗೆ ಹಲವರು ಅಂಟಿಸಿರುವ ಅವರ ಭಾವಚಿತ್ರಗಳನ್ನು  ನೋಡುತ್ತಿದ್ದರೆ, ಸಾಹಿತ್ಯ ಸಮ್ಮೇಳನದಲ್ಲಿ ಒಂದು ಸುತ್ತು ಹಾಕಿ ದೂರದಲ್ಲಿರುವ ಗೆಳೆನೊಬ್ಬನ ಜತೆ ಮಾತನಾಡಿ ಬಂದ ಅನುಭೂತಿ! ಗುಂಪಿನಲ್ಲಿ ನೂರು ಜನ ಸ್ನೇಹಿತರಿದ್ದರೂ ‘ಆಟೋಗ್ರಾಫ್’ ಬರಹದಲ್ಲಂತೂ ಬರೆಸಿಕೊಂಡವನೇ ಅಚ್ಚುಮೆಚ್ಚಿನ ಗೆಳೆಯ.

ಬುದ್ಧಿಜೀವಿಗಳಂತೆ,  ಕವಿಗಳಂತೆ, ವಿಮರ್ಶಕರಂತೆ, ಸಾಹಿತಿಗಳಂತೆ, ಅಪ್ಪಟ ಪೋಲಿಗಳಂತೆ ಅವರವರ ಬುದ್ಧಿಮಟ್ಟ, ಚಿಂತನೆ, ಸಿದ್ಧಾಂತದ ಹಿನ್ನೆಲೆಯಲ್ಲಿ ಸೃಜನಶೀಲತೆಯಿಂದ ಮನದಾಳದ ಮಾತುಗಳನ್ನು ಬರೆದಿರುವ ಆ ಎಲ್ಲ ಗೆಳೆಯರ ಬರಹಗಳನ್ನು ಕಂಡಾಗಲ್ಲೆಲ್ಲಾ ಮನಸು ತುಂಬಿ ಬರುತ್ತದೆ. ಹಿರಿಯ ವಿದ್ಯಾರ್ಥಿಗಳ ಹಿತವಚನ, ಬುದ್ಧಿಮಾತು, ಜೀವನ ಅನುಭವ, ಸಮಯದ ಸದ್ಬಳಿಕೆ, ತಲುಪಬೇಕಾಗಿರುವ ಗುರಿ  ಕುರಿತಾಗಿರುವ ಪ್ರತಿ ವಾಕ್ಯಗಳು ಎಲ್ಲ ಕಾಲಕ್ಕೂ ನನಗೆ ಹಿರಿಯ ಮಾರ್ಗದರ್ಶಕರಂತೆ ಕಾಣಿಸುತ್ತವೆ. 


ಹಾರೈಕೆ, ಪ್ರಾರ್ಥನೆ, ನಂಬಿಕೆ, ಪ್ರಾಮಾಣಿಕತೆ, ಹೃದಯವಂತಿಕೆ, ಹಾಗೂ ಸಂಬಂಧಗಳನ್ನು ಕುರಿತಾಗಿ ಸಹಪಾಠಿಗಳ ಬರಹಗಳನ್ನು  ಕಂಡಾಗ ನಮಗಾಗಿ ಪ್ರಾರ್ಥಿಸುವ, ಒಳಿತನ್ನು ಬಯಸುವ, ಆ ಸ್ನೇಹಿತರ ಕುರಿತು ಹೆಮ್ಮೆಯೆನಿಸುತ್ತದೆ.ಪಿಯುಸಿಯಲ್ಲಿ ಜೊತೆಯಾದ ಸ್ನೇಹಿತನೊಬ್ಬ ಪದವಿ ಮೊದಲ ವರ್ಷ ಹೊತ್ತಿಗೆ ಅಕಾಲಮೃತ್ಯವಿಗೆ ಈಡಾದಾಗ ಆ ಸಾವನ್ನು ಅರಗಿಸಿಕೊಳ್ಳುವುದು ನಮ್ಮೆಲ್ಲ ಗೆಳೆಯರಿಗೂ ತುಂಬಾ ಕಷ್ಟವಾಗಿತ್ತು. ಆತ ಸತ್ತು ಸುಮಾರು ಆರು ವರ್ಷಗಳಾದರೂ ಒಂದು  ‘ಹಸ್ತಾಕ್ಷರ’ದಿಂದಾಗಿ ನನ್ನೊಂದಿಗೆ  ಆತ ಇಂದಿಗೂ ಜೀವಂತವಾಗಿದ್ದಾನೆ.


ಆತ ಬರೆದ ಪುಟ ತೆರೆದಾಗ ಆತನೊಂದಿಗೆ ಆಡಿದ ಆಟ, ಮಾಡಿದ ಊಟ, ತುಂಟಾಟ ಎಲ್ಲ ಕಣ್ಮುಂದೆ ಚಲಿಸಿ ಎಲ್ಲ ಗೆಳೆಯರಂತೆ ಆತನೂ ದೂರದ ಯಾವುದೋ ಊರಿನಲ್ಲಿದ್ದಾನೆ ಎಂಬ ಭಾವ ಒಸರುತ್ತದೆ ವಿನಾಃ ಆತ ಸತ್ತಿದ್ದಾನೆಂದು ನನಗೆ ಅನಿಸುವುದಿಲ್ಲ. ಕೆಲಸ, ಮದುವೆ, ಸಂಸಾರದ ಜಂಜಾಟದಲ್ಲಿ ಕಳೆದು ಹೋಗಿರುವ ಗೆಳೆಯರು/ ಗೆಳತಿಯರು ಭೇಟಿಯಾಗುವುದು ಅಪರೂಪವೇ ಸರಿ.


ಭೇಟಿಯಾದರೂ ಹಲವರಲ್ಲಿ ಮೊದಲಿನ ಆ ಉತ್ಸುಕತೆ, ಆತ್ಮೀಯತೆ, ಸಲುಗೆ ವಿದ್ಯಾರ್ಥಿ ಜೀವನದಲ್ಲಿದ್ದಷ್ಟು ಕಾಣುವುದಿಲ್ಲ.ಆದರೆ ಅದೇ ಅವರನ್ನು  ‘ಆಟೋಗ್ರಾಫ್’ನ ಮೂಲಕ ನೋಡಿದಾಗ ಅದೇ ತುಂಟತನ, ಆಡಿದ ಆಟ, ಪೋಲಿ ಜೋಕು, ಕ್ಲಾಸಿನ ಚಕ್ಕರ್, ಗ್ಲಾಸ್‌ಹೌಸ್, ಬೈ ಟು ಕಾಫಿ, ಸಿನಿಮಾ ಒಂದೇ ಎರಡೇ.. ಅದೊಂದು ರೀತಿಯ ಬಹಳ ದಿನಗಳ ನಂತರ ನೋಡಿದ ಮದುವೆ ಸಮಾರಂಭದ ಸಿ.ಡಿಯಂತೆ ಕಾಣುತ್ತದೆ.


ಕಳೆದು ಹೋಗಿರುವ ನನ್ನ ಜೀವನದ ಅಮೂಲ್ಯ ದಿನಗಳನ್ನು ನೆನಪಿಸುವ ಜತೆಗೆ ನಾನು ಬಯಸಿದಾಗಲೆಲ್ಲಾ ನನ್ನ ಮುಂದೆ ಗೆಳೆಯರೆಲ್ಲರನ್ನು ಪೆರೇಡ್ ಮಾಡಿಸುತ್ತ,ಮನಸ್ಸಿಗೆ ಆವರಿಸಿದ ಖಿನ್ನತೆಯನ್ನು ಕಳೆದು ಜೊತೆಗಾರನಾಗಿ ‘ಆಟೋಗ್ರಾಫ್’ ನೀಡುತ್ತಿರುವ ಅವರ್ಣನೀಯ ಆನಂದದ ಅನುಭವ ಅನನ್ಯ.


( ಪ್ರಜಾವಾಣಿ ದಿನಪತ್ರಿಕೆಯ ಯುವಜನ ಪುಟದಲ್ಲಿ ಬುಧವಾರ, ಡಿಸೆಂಬರ 22, 2010 ರಂದು ಪ್ರಕಟವಾದ ಲೇಖನ)

No comments:

Post a Comment