ಎರಡು ವರ್ಷದ ಆ ಮಗುವಿನದು ಬೆರಳು ತೋರಿಸಿದರೆ ಕೈಯನ್ನೆ ನುಂಗುವ ತುಂಟತನ. ಬಯಸಿದ್ದನ್ನು ಪಡದೇ ತೀರಬೇಕೆನ್ನುವ ಹಟ. ಒಂದು ದಿನ ಆಕೆ ಎಲ್ಲೋ ಜಾದೂ ಪ್ರದರ್ಶನ ನೋಡಿ ಬಂದವಳೇ ಅಪ್ಪಾ ನಾನು ಜಾದೂ ಕಲಿತೀನಿ ಎಂದರೆ ಆ ತಂದೆ ಅದು ಮಗಳ ತಮಾಷೆಯೆಂದೇ ತಿಳಿದಿದ್ದರು. ತಾಯಿಗೆ ಮಾತ್ರ ಹುಡುಗಿಯ ಸ್ವಭಾವ ಕಂಡು ಭವಿಷ್ಯ ನೆನೆದು ಒಳಗೊಳಗೆ ಭಯ! ಈ ಬಾಲಕಿಯೇ ಮುಂದೆ ಜಾದೂ ಜಗತ್ತಿನಲ್ಲಿ ದಾಪುಗಾಲಿಟ್ಟ ಆರ್.ಇಂದುಶ್ರೀ.
ಜಾದೂ ಜತೆಯಲ್ಲೇ ತುಟಿಗಳ ಚಲನೆಯಿಲ್ಲದೇ ಮಾತನಾಡುವ ‘ಧ್ವನಿಮಾಯೆ’ (ವೆಂಟ್ರಿಲಾಕ್ವಿಸಂ) ಕಲೆಯಲ್ಲಿ ಪರಿಣತಿ ಸಾಧಿಸಿ ‘ಲಿಮ್ಕಾ ಬುಕ್ ಆಫ್ ರೆಕಾಡರ್‌ಸ್’ನಲ್ಲಿ ‘ಭಾರತದ ಮೊಟ್ಟಮೊದಲ ಧ್ವನಿಮಾಯೆ ಕಲಾವಿದೆ’ ಎಂಬ ಸ್ಥಾನಪಡೆದಿರುವ ಕನ್ನಡತಿ. ಇತ್ತೀಚೆಗೆ ಜಾದೂ ಲೋಕದ ಅಪಾಯಕಾರಿ ಸಾಹಸವೆಂದೇ ಹೇಳಲಾಗುವ ‘ಸಜೀವ ದಹನ’ದ ಚಮತ್ಕಾರಿ ಪ್ರದರ್ಶನ ನೀಡಿ ಯಶಸ್ವಿಯಾಗಿ ಪಾರಾಗಿ ಬರುತ್ತಿದ್ದಂತೆ ಮಗಳ ಸಾಧನೆ ಕಂಡ ಆ ಪಾಲಕರ ಕಣ್ಣಲ್ಲಿ ಆನಂದಬಾಷ್ಪ ಜಿನುಗುತ್ತಿತ್ತು.
ವಿಶ್ವದಾದ್ಯಂತ ಖ್ಯಾತನಾಮರಾದ ಜಾದೂಗಾರರು ಪ್ರದರ್ಶಿಸುವ ಅಪಾಯಕಾರಿ ‘ಸಜೀವ ದಹನ’ (ಬರ್ನ್ಟ್ ಅಲೈವ್) ಪ್ರದರ್ಶನದ ‘ಗ್ರೇಟ್ ಎಸ್ಕೇಪ್’ ಕಲೆಯನ್ನು ಇಂದುಶ್ರೀ ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಡಿಸೆಂಬರ್ 10 ರಂದು ಬೆಂಗಳೂರಿನ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಪ್ರದರ್ಶಿಸಿದರು. ತನ್ಮೂಲಕ ‘ಸಜೀವದಹನ’ ದಂತಹ ಅಪಾಯಕಾರಿ ಪ್ರದರ್ಶನ ನೀಡಿದ ‘ಪ್ರಥಮ ಭಾರತೀಯ ಮಹಿಳೆ’ ಎಂಬ ಕೀರ್ತಿಗೆ ಪಾತ್ರರಾದರು.
ಚಿಕ್ಕಂದಿನಲ್ಲಿಯೇ ಜಾದೂ ಹಾಗೂ ಧ್ವನಿಮಾಯೆ’ (ವೆಂಟ್ರಿಲಾಕ್ವಿಸಂ) ಕಲೆಯಲ್ಲಿ ಆಸಕ್ತಿ ತಳೆದ ಇಂದುಶ್ರೀಯನ್ನು ಕಂಡು ಇದೇನಿದು ಕೋತಿಯಾಟ ಎಂದವರೇ ಹೆಚ್ಚು. ಹುಡುಗರು ಮಾತ್ರ ಕಲಿಯಬಹುದಾದ ಕಲೆಯೆಂದು ತಂದೆ ತಿಳಿಸಿ ಹೇಳಿದರೂ ಕೇಳದ ಇಂದುಶ್ರೀ ಇವುಗಳನ್ನು ಸವಾಲಾಗಿ ಸ್ವೀಕರಿಸಿದಳು.
ಕೊನೆಗೆ ಪರಿಚಯದ ಗುರುವೊಬ್ಬರಿಂದ ‘ಧ್ವನಿಮಾಯೆ’ ಕುರಿತಾಗಿ ಪ್ರಾಥಮಿಕ ಪಾಠ. ನಂತರದಲ್ಲಿ ಈ ಕಲೆಯಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ಸಾಧಕರ ವಿಡಿಯೋ ಸಿಡಿಗಳನ್ನು ನೋಡಿ ಏಕಲವ್ಯನಂತೆ ಶ್ರದ್ಧೆಯಿಟ್ಟು, ಶ್ರಮದಿಂದ ಕಲಿತರು. ಇವರ ಈ ಪರಿಶ್ರಮವೇ ಇವರನ್ನು ಅಮೆರಿಕದ ಕೆಂಟುಕಿಯಲ್ಲಿನ ಡ್ರಾಬ್ರಿಜ್ ಇನ್‌ನಲ್ಲಿ ನಡೆದ ವಿಶ್ವ ವೆಂಟ್ರಿಲಾಕ್ವಿಸಮ್ ಕಲಾವಿದರ ಸಮಾವೇಶದಲ್ಲಿ ನಿಲ್ಲಿಸಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಏಕೈಕ ಭಾರತೀಯಳು ಎಂಬ ಹೆಗ್ಗಳಿಕೆಯೂ ಆಕೆಯ ಮುಡಿಗೇರಿತು.
‘ಡಿಂಕು ಮೇಡಂ’ ಎಂದೇ ಖ್ಯಾತರಾಗಿರುವ ಇಂದುಶ್ರೀ ಇಂದು ಅಂತರ ರಾಷ್ಟ್ರೀಯ ಮಟ್ಟದ ಜಾದೂಗಾರ್ತಿಯಾಗಿ ಬೆಳೆದಿರುವುದರ ಹಿಂದೆ ಅವರ ತಂದೆಯಾದ ರವೀಂದ್ರ, ತಾಯಿ ಮಂಜುಳ ಪಾತ್ರ ಬಹು ದೊಡ್ಡದು. ಬೆಂಗಳೂರಿನ ಕೇಂದ್ರೀಯ ವಿದ್ಯುತ್ ಸಂಶೋಧನಾಲಯ ಸಂಸ್ಥೆಯಲ್ಲಿ (ಸಿಪಿಆರ್‌ಐ) ಉದ್ಯೋಗಿಯಾಗಿರುವ ರವೀಂದ್ರ, ಆ ಪುಟ್ಟ ಬಾಲೆಯ ದಿಟ್ಟ ಕನಸುಗಳಿಗೆ ಬೆನ್ನೆಲುಬಾಗಿ ನಿಂತು ಸದಾ ಪ್ರೋತ್ಸಾಹ ನೀಡುತ್ತ ಅವಳ ಎಲ್ಲ ಬೇಕು ಬೇಡಗಳನ್ನು ಈಡೇರಿಸುತ್ತ, ಅವಳ ಕನಸು ಸಾಕಾರಗೊಳಿಸಲು ದೊಡ್ಡ ಕೊಡುಗೆ ನೀಡಿದ್ದಾರೆ.
ಅಂತೆಯೇ ತಾಯಿ ಮಂಜುಳ ಕೂಡ ಮೊದಮೊದಲು ಮಗಳ ಕಲೆಯ ಪ್ರದರ್ಶನದ ವೇದಿಕೆಗಳಿಗಾಗಿ ಅದೆಷ್ಟೋ ಜನರಲ್ಲಿ ಅಂಗಲಾಚಿರುವುದನ್ನು ನೆನೆಯುವ ಇಂದುಶ್ರೀ ಇಂದು ‘ನನ್ನದೆನ್ನುವುದೆಲ್ಲ ಅವರ ದಾನ’ ಎನ್ನುತ್ತಾರೆ.
ಮೊದಲು ಜಾನಿ ಹೆಸರಿನ ಕೋತಿ ಬೊಂಬೆಯಿಂದ ಪ್ರದರ್ಶನ ನೀಡುತ್ತಿದ್ದ ಇಂದುಶ್ರೀ ನಂತರದಲ್ಲಿ ಡಿಂಕು ಅದರ ನಂತರ ರಿಂಕು ಹೀಗೆ ಒಟ್ಟಿಗೆ ಮೂರು ಬೊಂಬೆಗಳೊಂದಿಗೆ ಪ್ರದರ್ಶನ ನೀಡುವ ಮಟ್ಟಿಗೆ ಇಂದು ಸಫಲತೆ ಸಾಧಿಸಿದ್ದಾರೆ. ಅವರ ಮೂರು ಬೊಂಬೆಗಳ ಪ್ರದರ್ಶನವೇ ದಾಖಲೆಯಾಗಿ ‘ಲಿಮ್ಕಾ ಬುಕ್ ಆಫ್ ರೇಕಾರ್ಡ್ಸ್’ ಸೇರಿದೆ.
ಆದರೂ ದಣಿವರಿಯದ ಇಂದುಶ್ರೀ ಇದೀಗ ನಾಲ್ಕು ಬೊಂಬೆಗಳ ಪ್ರದರ್ಶನ ನೀಡುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಅರಳು ಹುರಿದಂತೆ ಮಾತನಾಡುತ್ತ ಪ್ರದರ್ಶನ ನೀಡುವ ಇಂದುಶ್ರೀ ಗಿನ್ನೆಸ್ ದಾಖಲೆ ಪ್ರಯತ್ನಕ್ಕಾಗಿ ಹತ್ತೂ ಅಡಿ ಎತ್ತರದ ಮಹಿಷಾಸುರನ ಬೊಂಬೆ ಪ್ರದರ್ಶನ ಸಹ ನೀಡಿದ್ದಾರೆ.
ಅಮೆರಿಕ, ಸಿಂಗಾಪುರ, ಥಾಯ್ಲೆಂಡ್ ಹಾಗೂ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಈವರೆಗೆ ಒಟ್ಟು 3000 ಪ್ರದರ್ಶನಗಳನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ಕನ್ನಡ ಎಲ್ಲ ಟಿವಿ ವಾಹಿನಿಗಳು ಸೇರಿದಂತೆ ಹಿಂದಿಯ ಪ್ರಮುಖ ವಾಹಿನಿಯಲ್ಲೂ ಬೊಂಬೆ ಪ್ರದರ್ಶನ ನೀಡಿ ರಾಷ್ಟ್ರಮಟ್ಟದಲ್ಲಿ ಮನೆಮಾತಾಗಿದ್ದಾರೆ.
ಚಿತ್ರಕಲಾ ಪದವಿ ಜತೆಗೆ ಅನಿಮೇಷನ್‌ನಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ಬಹುಮುಖ ಪ್ರತಿಭೆ ಎಂದು ಕರೆಯಬಹುದಾದ ಇಂದುಶ್ರೀ ಹಲವಾರು ಸಂಗೀತ ವಾದ್ಯಗಳನ್ನು ನುಡಿಸಬಲ್ಲರು, ಸೊಗಸಾಗಿ ಹಾಡಬಲ್ಲರು. ಚಿತ್ರ ರಚಿಸಬಲ್ಲರು, ಅಷ್ಟೇ ಅಲ್ಲ ಇದೀಗ ‘ಗ್ರೇಟ್ ಎಸ್ಕೇಪ್’ ಪ್ರದರ್ಶನ ನೀಡುವ ಮೂಲಕ ಮ್ಯಾಜಿಕ್ ಜಗತ್ತಿನಲ್ಲಿ ಯಾರಿಗೂ ಸಾಟಿಯಾಗಿ ನಿಲ್ಲಬಲ್ಲ ಜಾದೂಗಾರ್ತಿಯಾಗಿ ತಮ್ಮನ್ನು ಗುರ್ತಿಸಿಕೊಂಡಿದ್ದಾರೆ.
( ಪ್ರಜಾವಾಣಿ ದಿನಪತ್ರಿಕೆಯ ಬೆಂಗಳೂರು ಭೂಮಿಕಾ ಪುರವಣಿಯಲ್ಲಿ ಶನಿವಾರ, ಜನವರಿ 15, 2010 ರಂದು ಪ್ರಕಟವಾದ ಲೇಖನ)
ಜಾದೂ ಜತೆಯಲ್ಲೇ ತುಟಿಗಳ ಚಲನೆಯಿಲ್ಲದೇ ಮಾತನಾಡುವ ‘ಧ್ವನಿಮಾಯೆ’ (ವೆಂಟ್ರಿಲಾಕ್ವಿಸಂ) ಕಲೆಯಲ್ಲಿ ಪರಿಣತಿ ಸಾಧಿಸಿ ‘ಲಿಮ್ಕಾ ಬುಕ್ ಆಫ್ ರೆಕಾಡರ್‌ಸ್’ನಲ್ಲಿ ‘ಭಾರತದ ಮೊಟ್ಟಮೊದಲ ಧ್ವನಿಮಾಯೆ ಕಲಾವಿದೆ’ ಎಂಬ ಸ್ಥಾನಪಡೆದಿರುವ ಕನ್ನಡತಿ. ಇತ್ತೀಚೆಗೆ ಜಾದೂ ಲೋಕದ ಅಪಾಯಕಾರಿ ಸಾಹಸವೆಂದೇ ಹೇಳಲಾಗುವ ‘ಸಜೀವ ದಹನ’ದ ಚಮತ್ಕಾರಿ ಪ್ರದರ್ಶನ ನೀಡಿ ಯಶಸ್ವಿಯಾಗಿ ಪಾರಾಗಿ ಬರುತ್ತಿದ್ದಂತೆ ಮಗಳ ಸಾಧನೆ ಕಂಡ ಆ ಪಾಲಕರ ಕಣ್ಣಲ್ಲಿ ಆನಂದಬಾಷ್ಪ ಜಿನುಗುತ್ತಿತ್ತು.
| ಮೈನವಿರೇಳಿಸುವ ಅಪಾಯಕಾರಿ ಪ್ರದರ್ಶನದ ಒಂದು ನೋಟ... |
ಕೊನೆಗೆ ಪರಿಚಯದ ಗುರುವೊಬ್ಬರಿಂದ ‘ಧ್ವನಿಮಾಯೆ’ ಕುರಿತಾಗಿ ಪ್ರಾಥಮಿಕ ಪಾಠ. ನಂತರದಲ್ಲಿ ಈ ಕಲೆಯಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ಸಾಧಕರ ವಿಡಿಯೋ ಸಿಡಿಗಳನ್ನು ನೋಡಿ ಏಕಲವ್ಯನಂತೆ ಶ್ರದ್ಧೆಯಿಟ್ಟು, ಶ್ರಮದಿಂದ ಕಲಿತರು. ಇವರ ಈ ಪರಿಶ್ರಮವೇ ಇವರನ್ನು ಅಮೆರಿಕದ ಕೆಂಟುಕಿಯಲ್ಲಿನ ಡ್ರಾಬ್ರಿಜ್ ಇನ್‌ನಲ್ಲಿ ನಡೆದ ವಿಶ್ವ ವೆಂಟ್ರಿಲಾಕ್ವಿಸಮ್ ಕಲಾವಿದರ ಸಮಾವೇಶದಲ್ಲಿ ನಿಲ್ಲಿಸಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಏಕೈಕ ಭಾರತೀಯಳು ಎಂಬ ಹೆಗ್ಗಳಿಕೆಯೂ ಆಕೆಯ ಮುಡಿಗೇರಿತು.
‘ಡಿಂಕು ಮೇಡಂ’ ಎಂದೇ ಖ್ಯಾತರಾಗಿರುವ ಇಂದುಶ್ರೀ ಇಂದು ಅಂತರ ರಾಷ್ಟ್ರೀಯ ಮಟ್ಟದ ಜಾದೂಗಾರ್ತಿಯಾಗಿ ಬೆಳೆದಿರುವುದರ ಹಿಂದೆ ಅವರ ತಂದೆಯಾದ ರವೀಂದ್ರ, ತಾಯಿ ಮಂಜುಳ ಪಾತ್ರ ಬಹು ದೊಡ್ಡದು. ಬೆಂಗಳೂರಿನ ಕೇಂದ್ರೀಯ ವಿದ್ಯುತ್ ಸಂಶೋಧನಾಲಯ ಸಂಸ್ಥೆಯಲ್ಲಿ (ಸಿಪಿಆರ್‌ಐ) ಉದ್ಯೋಗಿಯಾಗಿರುವ ರವೀಂದ್ರ, ಆ ಪುಟ್ಟ ಬಾಲೆಯ ದಿಟ್ಟ ಕನಸುಗಳಿಗೆ ಬೆನ್ನೆಲುಬಾಗಿ ನಿಂತು ಸದಾ ಪ್ರೋತ್ಸಾಹ ನೀಡುತ್ತ ಅವಳ ಎಲ್ಲ ಬೇಕು ಬೇಡಗಳನ್ನು ಈಡೇರಿಸುತ್ತ, ಅವಳ ಕನಸು ಸಾಕಾರಗೊಳಿಸಲು ದೊಡ್ಡ ಕೊಡುಗೆ ನೀಡಿದ್ದಾರೆ.
ಅಂತೆಯೇ ತಾಯಿ ಮಂಜುಳ ಕೂಡ ಮೊದಮೊದಲು ಮಗಳ ಕಲೆಯ ಪ್ರದರ್ಶನದ ವೇದಿಕೆಗಳಿಗಾಗಿ ಅದೆಷ್ಟೋ ಜನರಲ್ಲಿ ಅಂಗಲಾಚಿರುವುದನ್ನು ನೆನೆಯುವ ಇಂದುಶ್ರೀ ಇಂದು ‘ನನ್ನದೆನ್ನುವುದೆಲ್ಲ ಅವರ ದಾನ’ ಎನ್ನುತ್ತಾರೆ.
ಮೊದಲು ಜಾನಿ ಹೆಸರಿನ ಕೋತಿ ಬೊಂಬೆಯಿಂದ ಪ್ರದರ್ಶನ ನೀಡುತ್ತಿದ್ದ ಇಂದುಶ್ರೀ ನಂತರದಲ್ಲಿ ಡಿಂಕು ಅದರ ನಂತರ ರಿಂಕು ಹೀಗೆ ಒಟ್ಟಿಗೆ ಮೂರು ಬೊಂಬೆಗಳೊಂದಿಗೆ ಪ್ರದರ್ಶನ ನೀಡುವ ಮಟ್ಟಿಗೆ ಇಂದು ಸಫಲತೆ ಸಾಧಿಸಿದ್ದಾರೆ. ಅವರ ಮೂರು ಬೊಂಬೆಗಳ ಪ್ರದರ್ಶನವೇ ದಾಖಲೆಯಾಗಿ ‘ಲಿಮ್ಕಾ ಬುಕ್ ಆಫ್ ರೇಕಾರ್ಡ್ಸ್’ ಸೇರಿದೆ.
ಆದರೂ ದಣಿವರಿಯದ ಇಂದುಶ್ರೀ ಇದೀಗ ನಾಲ್ಕು ಬೊಂಬೆಗಳ ಪ್ರದರ್ಶನ ನೀಡುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಅರಳು ಹುರಿದಂತೆ ಮಾತನಾಡುತ್ತ ಪ್ರದರ್ಶನ ನೀಡುವ ಇಂದುಶ್ರೀ ಗಿನ್ನೆಸ್ ದಾಖಲೆ ಪ್ರಯತ್ನಕ್ಕಾಗಿ ಹತ್ತೂ ಅಡಿ ಎತ್ತರದ ಮಹಿಷಾಸುರನ ಬೊಂಬೆ ಪ್ರದರ್ಶನ ಸಹ ನೀಡಿದ್ದಾರೆ.
ಅಮೆರಿಕ, ಸಿಂಗಾಪುರ, ಥಾಯ್ಲೆಂಡ್ ಹಾಗೂ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಈವರೆಗೆ ಒಟ್ಟು 3000 ಪ್ರದರ್ಶನಗಳನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ಕನ್ನಡ ಎಲ್ಲ ಟಿವಿ ವಾಹಿನಿಗಳು ಸೇರಿದಂತೆ ಹಿಂದಿಯ ಪ್ರಮುಖ ವಾಹಿನಿಯಲ್ಲೂ ಬೊಂಬೆ ಪ್ರದರ್ಶನ ನೀಡಿ ರಾಷ್ಟ್ರಮಟ್ಟದಲ್ಲಿ ಮನೆಮಾತಾಗಿದ್ದಾರೆ.
ಚಿತ್ರಕಲಾ ಪದವಿ ಜತೆಗೆ ಅನಿಮೇಷನ್‌ನಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ಬಹುಮುಖ ಪ್ರತಿಭೆ ಎಂದು ಕರೆಯಬಹುದಾದ ಇಂದುಶ್ರೀ ಹಲವಾರು ಸಂಗೀತ ವಾದ್ಯಗಳನ್ನು ನುಡಿಸಬಲ್ಲರು, ಸೊಗಸಾಗಿ ಹಾಡಬಲ್ಲರು. ಚಿತ್ರ ರಚಿಸಬಲ್ಲರು, ಅಷ್ಟೇ ಅಲ್ಲ ಇದೀಗ ‘ಗ್ರೇಟ್ ಎಸ್ಕೇಪ್’ ಪ್ರದರ್ಶನ ನೀಡುವ ಮೂಲಕ ಮ್ಯಾಜಿಕ್ ಜಗತ್ತಿನಲ್ಲಿ ಯಾರಿಗೂ ಸಾಟಿಯಾಗಿ ನಿಲ್ಲಬಲ್ಲ ಜಾದೂಗಾರ್ತಿಯಾಗಿ ತಮ್ಮನ್ನು ಗುರ್ತಿಸಿಕೊಂಡಿದ್ದಾರೆ.
( ಪ್ರಜಾವಾಣಿ ದಿನಪತ್ರಿಕೆಯ ಬೆಂಗಳೂರು ಭೂಮಿಕಾ ಪುರವಣಿಯಲ್ಲಿ ಶನಿವಾರ, ಜನವರಿ 15, 2010 ರಂದು ಪ್ರಕಟವಾದ ಲೇಖನ)

No comments:
Post a Comment