‘ಮಾನವರಾಗಿ ಹುಟ್ಟಿದ ಮೇಲೆ ಮಾನವೀಯತೆಯಿಂದ ಮತ್ತೊಬ್ಬರಿಗೆ ಕೈಲಾದ ಸಹಾಯ ಮಾಡಬೇಕೆನ್ನುವ ಉದ್ದೇಶದಿಂದಲೇ ಅಂಧರಿಗೆ ಈಜು ಕಲಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಹೇಳುತ್ತಲೇ ಮಾತಿಗಿಳಿದರು ವಸಂತ ಕುಮಾರ್. ಮೂಲತಃ ಸಕಲೇಶಪುರದವರಾದ ವಸಂತಕುಮಾರ್ ಪದವೀಧರರು. ಉದ್ಯೋಗಕ್ಕಾಗಿ ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಇದೀಗ ಪದ್ಮನಾಭನಗರದಲ್ಲಿ ನೆಲೆಸಿದ್ದಾರೆ. ವಸಂತ್ ಕಳೆದ 6 ತಿಂಗಳ ಹಿಂದೆ ಸ್ವಂತದೊಂದು ಫಾರ್ಮಾಸ್ಯೂಟಿಕಲ್ ಏಜೆನ್ಸಿ ಪ್ರಾರಂಭಿಸಿದ್ದಾರೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ಈಜುಕೊಳದಲ್ಲಿ ಪ್ರತಿದಿನ ಒಂದು ತಾಸು ಐದು ಜನರಿಗೆ ಈಜು ತರಬೇತಿ ನೀಡುತ್ತಾರೆ. ಅದರ ಶುಲ್ಕವನ್ನು ತಾವೇ ಭರಿಸುತ್ತಾರೆ. ಇವರಿಂದ ಈಜು ಕಲಿಯುತ್ತಿರುವ ಮಕ್ಕಳು ಈಗಾಗಲೇ 50 ಮೀಟರ್ ಉದ್ದ ಈಜುವ ಸಾಮರ್ಥ್ಯ ಗಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಆಳವಾದ ನೀರಿನಲ್ಲಿ ಈಜುವ ಪರಿಣತಿ ತಿಳಿಸಿ ಕೊಡುವ ಆಲೋಚನೆ ನಡೆಸಿದ್ದಾರೆ.
‘ನೀರೆಂದರೆ ಮೊದಲು ಹೆಚ್ಚು ಭಯವಾಗುತ್ತಿತ್ತು. ಈಗ ಅಭ್ಯಾಸವಾಗಿದೆ. ನಿತ್ಯ ದೊರೆಯುವ ತರಬೇತಿಯಿಂದ ಮಾನಸಿಕ ಸ್ಥೈರ್ಯ ಹೆಚ್ಚಾಗಿದೆ. ಇದೇ ರೀತಿ ನನ್ನಂತೆ ಅಂಧರೆಲ್ಲರಿಗೂ ಈಜು ಕಲಿಸುವ ವ್ಯವಸ್ಥೆ ಮಾಡಿದರೆ ನಮ್ಮಲ್ಲಿನ ಮಾನಸಿಕ ಕೀಳಿರಿಮೆ ದೂರವಾಗುತ್ತದೆ. ಅಂಧಕಾರದಲ್ಲಿ ಬೆಳಕಿನ ಕಿರಣ ಮೂಡಲು ಸಹಕಾರಿಯಾಗುತ್ತದೆ’ ಎನ್ನುತ್ತಾರೆ ಚಂದ್ರಶೇಖರ್.
’ಅಂಧರಿಗೆ ಈಜು ಮಾತ್ರ ಕಲಿಸುವುದರಿಂದ ಮಾತ್ರ ಅವರಿಗೆ ಸಂಪೂರ್ಣ ಸಹಾಯ ಮಾಡಿದಂತಾಗುವುದಿಲ್ಲ ಇದರೊಂದಿಗೆ ಟ್ರಸ್ಟ್ ಆರಂಭಿಸಿ ಅವರಿಗೆ ಉದ್ಯೋಗ ಒದಗಿಸುವ ಮೂಲಕ ‘ಅಂಧರೆಂದರೆ ಅನುಕಂಪ ಬಯಸುವ ಅವಲಂಬಿಗಳು ಎನ್ನುವುದನ್ನು ತೊಡೆದುಹಾಕಿ ಸ್ವಾವಲಂಬಿಗಳನ್ನಾಗಿ’ ಮಾಡುವ ಕನಸು ಹೊಂದಿದ್ದಾಗ ವಸಂತ್ ಹೇಳುತ್ತಾರೆ.
ತನ್ನಿಂದ ಐದು ಜನರಿಗೆ ಈಜು ಕಲಿಸಲು ಸಾಧ್ಯವಾಗುತ್ತಿರುವಾಗ ಅದೇ ತನ್ನಂತೆ ಇನ್ನೂ ಹಲವರು ಜೊತೆಗೂಡಿದರೆ ಬಹಳಷ್ಟು ಜನ ಅಂಧರಿಗೆ ಈಜು ಕಲಿಸಿ ಜತೆಗೆ ಅವರಿಗೆ ಸ್ವಉದ್ಯೋಗ ಅಗತ್ಯವಿರುವ ಕೌಶಲ ಕಲಿಸುವ ಹಾಗೂ ಉದ್ಯೋಗ ಪಡೆಯಲು ಪೂರಕವಾದ ಸಹಾಯ ಒದಗಿಸುವ ಸಂಸ್ಥೆ ಸ್ಥಾಪಿಸುವ ರಚಿಸುವ ಯೋಜನೆಯನ್ನು ಅವರು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ‘ಅಂಧರಿಗಾಗಿ ಕನಸುಗಳ ಸಾಕಾರ’ ಎನ್ನುವ ಧ್ಯೇಯವುಳ್ಳ’ ‘ಸಾಕಾರ’ ಹೆಸರಿನ ಟ್ರಸ್ಟ್ ಸ್ಥಾಪಿಸಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಇದೀಗ ಸಮಾನ ಮನಸ್ಕರರ ಹಾಗೂ ಸಂಘ ಸಂಸ್ಥೆಗಳ ನೆರವು ಅವಶ್ಯಕತೆ ಇದೆ.
( ಪ್ರಜಾವಾಣಿ ದಿನಪತ್ರಿಕೆಯ ಕ್ರೀಡಾ ಪುರವಣಿಯಲ್ಲಿ ಸೋಮವಾರ, ಡಿಸೆಂಬರ 20, 2010 ರಂದು ಪ್ರಕಟವಾದ ಲೇಖನ)
No comments:
Post a Comment