Thursday, September 22, 2011

ಒಂದು ಮಾದರಿ ತೋಟದ ಸುತ್ತ...

ಬೇಸಾಯ ಎಂದರೆ ಸಾಕು ಈಗ ರೈತರು ಬೆಚ್ಚಿಬೀಳುತ್ತಾರೆ. ಆದರೆ ಹೊಸದಾಗಿ ಬೇಸಾಯ, ತೋಟಗಾರಿಕೆ ಮಾಡುವವರಲ್ಲಿ ಹುಮ್ಮಸ್ಸು ಕಾಣುತ್ತದೆ. ಬೀಳು ಭೂಮಿ ಖರೀದಿಸಿ ಅದನ್ನು ಸಾಗುವಳಿ ಯೋಗ್ಯ ಮಾಡಲು ಶಕ್ತಿ ಮೀರಿ ದುಡಿಯುತ್ತಾರೆ. ಬಯಲು ಸೀಮೆಯಲ್ಲಿ ಪಡಾ ಭೂಮಿ ಖರೀದಿಸಿ ಅದನ್ನು ಸಾಗುವಳಿ ಭೂಮಿಯಾಗಿ ಪರಿವರ್ತಿಸಿ ಯಶಸ್ವಿಯಾದ `ಭಗೀರಥ'ನಂಥ ರೈತನೊಬ್ಬನ ಯಶೋಗಾಥೆ ಇದು.


ಎಲೆಕ್ಟ್ರಿಕಲ್ ಸ್ವೀಚ್ ಬೋರ್ಡ್‌ಗಳನ್ನು ತಯಾರಿಸಿ ಮಾರಾಟ ಮಾಡುವ ವೃತ್ತಿ ಮಾಡುತ್ತಿದ್ದ ಹುಬ್ಬಳ್ಳಿಯ ಬಸಲಿಂಗಪ್ಪ ಛಟ್ನಿ ಅವರೇ ಈ ಯಶಸ್ವಿ ರೈತ. ಸ್ವೀಚ್ ಬೋರ್ಡ್‌ಗಳಿಗೆ ಬೇಕಾದ ಕಟ್ಟಿಗೆ (ಮರ) ಬೆಳೆಯಲು ಹತ್ತು ವರ್ಷಗಳ ಹಿಂದೆ ಮಾಡಿದ ಪ್ರಯತ್ನ ಈಗ `ಛಟ್ನಿಸ್ ಫಾರಂ'ನ ರೂಪ ಪಡೆದುಕೊಂಡಿದೆ.


ಧಾರವಾಡ ಜಿಲ್ಲೆಯ ಭೋಗೇನಾಗರಕೊಪ್ಪ ಸಮೀಪದಲ್ಲಿರುವ ಈ ಫಾರಂನಲ್ಲಿ ಏನಿದೆ? ಎನ್ನುವುದಕ್ಕಿಂತ ಏನಿಲ್ಲ ಎಂದು ಕೇಳಬೇಕು. ಅಷ್ಟು ಸಮೃದ್ಧವಾಗಿ ಬೆಳೆದು ನಿಂತಿರುವ ಫಾರಂನಲ್ಲಿ ಅಡಿಕೆ, ಬಾಳೆ, ತೆಂಗು, ಕಾಳು ಮೆಣಸು, ವೆನಿಲಾ, ಏಲಕ್ಕಿ, ಶುಂಠಿ, ಚಿಕ್ಕು, ಪೇರಲ, ನೆಲ್ಲಿ, ಮಾವು, ಹುಣಸೆ, ಹಲಸು, ಜಾಜಿಕಾಯಿ, ಸಾಗವಾನಿ, ಚೊಗಚಿ ಮತ್ತಿತರ ಬೆಳೆ ಹಾಗೂ ಗಿಡ ಮರಗಳಿವೆ. ತೋಟಕ್ಕೆ ರಕ್ಷಣೆಗಾಗಿ ಸುತ್ತಲೂ ಹಲಸು, ಅಕೇಶಿಯಾಗಳ ಬೇಲಿ ಇದೆ. ತೋಟ ನೋಡಿದರೆ ಮರಭೂಮಿಯಲ್ಲಿ `ಓಯಸಿಸ್' ಕಂಡ ಅನುಭವ ಆಗುತ್ತದೆ.


ಪ್ರಾರಂಭದಲ್ಲಿ ಛಟ್ನಿ ಅವರು ತಮ್ಮ ಭೂಮಿಯಲ್ಲಿ ಮ್ಯಾನ್ಜಿಂ, ಅಕೇಶಿಯಾ ಗಿಡಗಳನ್ನು ನಾಟಿ ಮಾಡಿದರು. ಮ್ಯಾನ್ಜಿಂ ಗಿಡಗಳಿಂದ ಭೂಮಿಗೆ ಆಗುವ ಹಾನಿ ಬಗ್ಗೆ ಗೊತ್ತಾದ ನಂತರ ಅವನ್ನೆಲ್ಲ ಕಿತ್ತು ಅವುಗಳ ಸ್ಥಾನದಲ್ಲಿ ಅಡಿಕೆ ಬೆಳೆಯಲು ತೀರ್ಮಾನಿಸಿದರು. ಅಡಿಕೆ ಬೇಸಾಯದ ಮಾರ್ಗದರ್ಶನಕ್ಕಾಗಿ ಹರಿಹರ, ದಾವಣಗೆರೆ, ಚೆನ್ನಗಿರಿ, ಮಧುಗಿರಿ, ತೀರ್ಥಹಳ್ಳಿ, ಶಿರಸಿ ಸೇರಿದಂತೆ ಹಲವಾರು ಊರುಗಳಿಗೆ ಹೋಗಿ ಅಲ್ಲಿನ ರೈತರು, ಕೃಷಿ ಪರಿಣಿತರೊಂದಿಗೆ ಸಮಾಲೋಚನೆ ನಡೆಸಿ ಅಂತಿಮವಾಗಿ ತೀರ್ಥಹಳ್ಳಿ ಅಡಿಕೆ ಸಸಿಗಳನ್ನು ನಾಟಿ ಮಾಡಲು ನಿರ್ಧರಿಸಿದರು.


ಚೆನ್ನಗಿರಿಯ ಅಶೋಕ ನಗರದಿಂದ ಪರಿಣಿತ ಕಾರ್ಮಿಕರನ್ನು ಕರೆಯಿಸಿ ನಾಟಿ ಮಾಡಿಸಿದರು. ತೋಟಗಾರಿಕೆಯಿಂದ ಬರುವ ಲಾಭಕ್ಕಿಂತ ಹಸಿರು ಗಿಡಗಳಿಂದ ಸಿಗುವ ಆರೋಗ್ಯ, ಶಾಂತಿ, ನೆಮ್ಮದಿ ದೊಡ್ಡದು ಎಂದು ಛಟ್ನಿ ಅವರು ಹೇಳುತ್ತಾರೆ.


ಅಡಿಕೆ ಮಧ್ಯೆ ಮಿಶ್ರ ಬೆಳೆಯಾಗಿ ಬಾಳೆ, ಕರಿ ಮೆಣಸು, ವೆನಿಲಾ, ಏಲಕ್ಕಿ ನಾಟಿ ಮಾಡಿದ್ದರು. ಕರಿಮೆಣಸು, ವೆನಿಲಾ, ಏಲಕ್ಕಿ ಹವಾಮಾನದ ವೈಪರಿತ್ಯದಿಂದಾಗಿ ಸರಿಯಾಗಿ ಬೆಳೆಯಲಿಲ್ಲ. ಈಗ ಅವುಗಳ ಬದಲು ಬಾಳೆ ಜಾಯಿ(ಜಿ) ಕಾಯಿ ಬೆಳೆದರು. ಈಗ ಅವು ಛಟ್ನಿ ಅವರ ಬೆಂಬಲಕ್ಕೆ ನಿಂತಿವೆ.


ಮೂವತ್ತೈದು ಎಕರೆ ಫಾರಂನ 19 ಎಕರೆ ಪ್ರದೇಶದಲ್ಲಿ ತೋಟದ ಬೆಳೆಗಳಿವೆ. 14 ಎಕರೆಯಲ್ಲಿ ಅಡಿಕೆ, ಬಾಳೆ, ಜಾಯಿಕಾಯಿ, ಆರೂವರೆ ಎಕರೆಯಲ್ಲಿ ಶುಂಠಿ ಬೆಳೆದಿದ್ದಾರೆ. ಉಳಿದ ಎಂಟು ಎಕರೆಯಲ್ಲಿ ತೆಂಗು, ಚಿಕ್ಕು, ಪೇರಲ ಮತ್ತಿತರ ಹಣ್ಣಿನ ಸಸಿಗಳಿವೆ. ಎರಡು ಎಕರೆಯಲ್ಲಿ  ಸಾಗವಾನಿ ಮರಗಳಿವೆ. ವಿವಿಧ ತಳಿಯ 25 ಮಾವಿನ ಗಿಡಗಳನ್ನು  ಹಾಗೂ ಪೈಸ್ಲಾಬಾದ್ ತಳಿಯ ನೆಲ್ಲಿ ಮರಗಳನ್ನು ಅಲ್ಲಲ್ಲಿ ಬೆಳೆಸಿದ್ದಾರೆ.


ನೀರಿಗಾಗಿ ಕೊಳವೆ ಭಾವಿ ಕೊರೆಸಿ ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ಮಳೆಯ ನೀರು ಭೂಮಿಯಲ್ಲೇ ಹಿಂಗುವಂತೆ ಮಾಡಲು ಅಲ್ಲಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ತೋಟದ ಪಕ್ಕದಲ್ಲಿಯೇ ಹರಿಯುವ ಹುಬ್ಬಳ್ಳಿಯ ಚರಂಡಿ ನೀರಿನ ಹಳ್ಳ ಅವರಿಗೆ ವರದಾನವಾಗಿದೆ. ಚರಂಡಿ ನೀರನ್ನು ಶುದ್ಧಿಕರಿಸಿ ತೋಟಕ್ಕೆ ಹಾಯಿಸುತ್ತಾರೆ.


ಸುತ್ತಲಿನ ಹಳ್ಳಿಗಳಲ್ಲಿ ಸಿಗುವ ಸಾವಯವ ಗೊಬ್ಬರ ಖರೀದಿಸಿ ಬಳಸುತ್ತಾರೆ. ಅದರೊಂದಿಗೆ ತೋಟದ ತ್ಯಾಜ್ಯವನ್ನು ನೈಸರ್ಗಿಕ ಗೊಬ್ಬರವಾಗಿ ಬಳಸುತ್ತಾರೆ. ರೋಗಗಳ ನಿಯಂತ್ರಣಕ್ಕೆ ಬೇವಿನ ಬೀಜದ ಕಷಾಯ ಬಳಸುತ್ತಾರೆ. ಈ ವರ್ಷ 20,000 ಎಳೆನೀರು ಮಾರಾಟ ಮಾಡಿದ್ದಾರೆ. ತೋಟದ ಉತ್ಪನ್ನಗಳಿಂದ ಬರುವ ಆದಾಯದ ಬಹುಪಾಲನ್ನು ತೋಟದ ಅಭಿವೃದ್ಧಿಗೆ ಬಳಸುತ್ತಾರೆ. ಮುಂದೆ ಅದು ಲಾಭವಾಗಿ ಕೈಸೇರುತ್ತದೆ ಎನ್ನುವುದು ಛಟ್ನಿ ಅವರ ಲೆಕ್ಕಾಚಾರ.


ನಿಮ್ಮ ತೋಟದ ಆದಾಯ ಎಷ್ಟು ಎಂದು ಯಾರಾದರೂ ಕೇಳಿದರೆ `ಮಕ್ಕಳು ಬೆಳೆಯೋ ವಯಸ್ಸಿನ್ಯಾಗ ಅವರಿಂದ ಲಾಭ ನಿರೀಕ್ಷೆ ಮಾಡ್ತಾರೇನ್ರಿ, ದೊಡ್ಡವರಾದ ಮ್ಯಾಲ ನಾಂವ ಕೇಳೋದ ಬ್ಯಾಡ, ತಾವ ದುಡದ ಹಾಕತಾರ' ಎನ್ನುವ ಛಟ್ನಿ ತೋಟವನ್ನು ತಮ್ಮ ಕುಟುಂಬ ಎಂದೇ ಭಾವಿಸಿದ್ದಾರೆ !


ಈ ತೋಟದಲ್ಲಿ ಎರಡು ಮನೆಗಳನ್ನು ನಿರ್ಮಿಸಿದ್ದಾರೆ. ಅಲ್ಲಿ ಎರಡು ಕೃಷಿ ಕಾರ್ಮಿಕರ ಕುಟುಂಬಗಳಿಗೆ ಆಶ್ರಯ ಕೊಟ್ಟಿದ್ದಾರೆ. ಹುಬ್ಬಳ್ಳಿಯ `ರೈತ ಸಂತೆ'ಯ ಮಾರುಕಟ್ಟೆಯಲ್ಲಿ ಮಾರಾಟ ಮಳಿಗೆ ಹೊಂದಿದ್ದಾರೆ. ತೋಟದಲ್ಲಿ ಬೆಳೆದ ಉತ್ಪನ್ನಗಳನ್ನು ಅಲ್ಲಿ ಇಟ್ಟು ಮಾರಾಟ ಮಾಡುತ್ತಾರೆ.


ಜೀವಂತ ಬೇಲಿ...
ಸಾಮಾನ್ಯವಾಗಿ ಜಮೀನಿನ ರಕ್ಷಣೆಗೆ ಮುಳ್ಳು ತಂತಿಗಳ ಬೇಲಿ ಹಾಕುವ ರೂಢಿ ಇದೆ. ಆದರೆ ಛಟ್ನಿ ಫಾರಂ ರಕ್ಷಣೆಗೆ ಜೀವಂತ ಬೇಲಿ ಇದೆ. ಜೀವಂತ ಬೇಲಿ ಎಂದರೆ ಲಾಭ ತರುವ ಮರ-ಗಿಡಗಳೇ ಆಗಿವೆ. ಭೂಮಿ ಖರೀದಿಸುತ್ತಿದ್ದಂತೆ ಅದನ್ನು ಅಳತೆ ಮಾಡಿಸಿದ ಛಟ್ನಿ ಅವರು ಅದರ ಸುತ್ತಲೂ ಐದು ಅಡಿ ಅಗಲ ಮೂರು ಅಡಿ ಆಳದ ಗುಂಡಿಯನ್ನು ನಿರ್ಮಿಸಿದರು. ಗುಂಡಿಯಿಂದ ತೆಗೆದ ಮಣ್ಣನ್ನು ತೋಟದ ಸುತ್ತಲೂ ಹಾಕಿ ಅದರ ಮೇಲೆ ಪ್ರತಿ ಒಂಬತ್ತುಇಂಚುಗಳ ಅಂತರದಲ್ಲಿ ಅಕೇಶಿಯಾ ಸಸಿ ನೆಡಸಿದರು.


ಅಕೇಶಿಯಾ ಗಿಡಗಳು ದಟ್ಟವಾಗಿ ಬೆಳೆದು ಕಾಡು ಪ್ರಾಣಿಗಳು ಮತ್ತು ಕಳ್ಳ ಕಾಕರಿಂದ ರಕ್ಷಣೆ ಒದಗಿಸುತ್ತಿದೆ. ಮುಂದೆ ಅಕೇಶಿಯಾ ಮರಗಳನ್ನು ಕಡಿದು ಮಾರಾಟ ಮಾಡಿದರೂ ಅದರಿಂದ ಸಾಕಷ್ಟು ಲಾಭ ಸಿಗುತ್ತದೆ. ಅಕೇಶಿಯಾ ಗಿಡಗಳು ತೋಟಕ್ಕೆ ಬೇಲಿಯಾದಂತೆ ಭವಿಷ್ಯದಲ್ಲಿ ಛಟ್ನಿ ಅವರಿಗೆ ಭಾರೀ ಲಾಭ ತಂದುಕೊಡಲಿದೆ.


ಬಸವಲಿಂಗಪ್ಪ ಛಟ್ನಿ ಅವರ ಮೊಬೈಲ್ ಫೋನ್ ಸಂಖ್ಯೆ : 94481 24079


(ಪ್ರಜಾವಾಣಿ ದಿನಪತ್ರಿಕೆಯ `ಕರ್ನಾಟಕ ದರ್ಶನ ಪುರವಣಿಯಲ್ಲಿ ಗುರುವಾರ, 21 ಆಗಸ್ಟ್ 2008 ರಂದು ಪ್ರಕಟವಾದ ಲೇಖನ)

No comments:

Post a Comment