Saturday, September 24, 2011

ಒಂದು ಮಾದರಿ ಡೇರಿ

ಹೈನುಗಾರಿಕೆ ಹೆಸರು ಕೇಳಿದರೇ ಕೆಲವು ರೈತರು ಬೆಚ್ಚಿ ಬೀಳುತ್ತಾರೆ. ಕೆಲವರು ಬರೀ ಸಮಸ್ಯೆಗಳನ್ನೇ ಹೇಳುತ್ತಾರೆ.


ಇನ್ನು ಕೆಲವು ಉತ್ಸಾಹಿಗಳು ಹೈನುಗಾರಿಕೆ ಮಾಡಲು ಬ್ಯಾಂಕ್ ಸಾಲ ಮಾಡಿ, ಸೂಕ್ತ ಮಾರ್ಗದರ್ಶನವಿಲ್ಲದೆ, ಉತ್ತಮ ತಳಿಯ ಜಾನುವಾರುಗಳನ್ನು ಖರೀದಿಸದೆ, ಕೈಸುಟ್ಟುಕೊಂಡು ಅದು ನಿಲುಕದ `ದ್ರಾಕ್ಷಿ ಹುಳಿ' ಎನ್ನುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ.


ಆದರೆ ಧಾರವಾಡದ ಮಾಜಿ ಶಾಸಕ ವಿನಯ ಕುಲಕರ್ಣಿ ಸೊಗಸಾದ ಡೇರಿ ಮಾಡಿದ್ದಾರೆ. ಹೈನುಗಾರಿಕೆ ಹೇಗೆ ಮಾಡಬೇಕು ಎಂದು ತಿಳಿಯಲು ಬಯಸುವವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಳಿಯ ಹತ್ತಿಕೊಳ್ಳದಲ್ಲಿರುವ ಅವರ `ವಿನಯ ಡೈರಿ'ಯನ್ನೊಮ್ಮೆ ನೋಡಬೇಕು.


ವಿನಯ್ ಕೃಷಿ ಬಿ.ಎಸ್ಸಿ ಪದವೀಧರರು. ಹೈನುಗಾರಿಕೆಯಲ್ಲಿ ಅವರಿಗೆ ವಿಶೇಷ ಆಸಕ್ತಿ.ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಯಕನೂರಿನವರಾದ ವಿನಯ ಕುಲಕರ್ಣಿಯವರಿಗೆ ದನಕರುಗಳ ಬಗ್ಗೆ ಬಾಲ್ಯದಿಂದಲೂ ವಿಶೇಷ ಪ್ರೀತಿ.


1993 ರಲ್ಲಿ ನಾಯಕನೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಆಕಳುಗಳನ್ನು ಸಾಕುವ ಮೂಲಕ ಹೈನುಗಾರಿಕೆ ಆರಂಭಿಸಿದರು.  ಸುಮಾರು ಹತ್ತು ವರ್ಷಗಳ ಕಾಲ ಹೈನುಗಾರಿಕೆಯ ಎಲ್ಲ ಸೂಕ್ಷ್ಮಗಳನ್ನು ಅಧ್ಯಯನ ಮಾಡಿದರು. ಅದನ್ನು ವಿಸ್ತರಿಸುವ ಯೋಜನೆ ರೂಪಿಸಿ ಕಾರ್ಯೋನ್ಮುಖರಾದರು. 1995 ರಲ್ಲಿ ಗುಜರಾತಿನಿಂದ ಜಾಫರಾಬಾದಿ ತಳಿಯ 23 ಎಮ್ಮೆ ಹಾಗೂ ಹರಿಯಾಣದಿಂದ ಮುರ‌್ರಾ ತಳಿಯ 25 ಎಮ್ಮೆಗಳನ್ನು ಖರೀದಿಸಿ ತಂದು ಧಾರವಾಡದಲ್ಲಿ ದೊಡ್ಡ ಪ್ರಮಾಣದಲ್ಲಿ ಡೈರಿ ಆರಂಭಿಸಿದರು.


ಹಸಿರು ಪರಿಸರದ 45 ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಈ ಡೈರಿಯಲ್ಲಿ ಇಂದು ಮುರ‌್ರಾ, ಜಾಫರಾಬಾದಿ, ಬನಿ ಜಾತಿಯ 110 ಎಮ್ಮೆಗಳಿವೆ. ನೂರು ಎಮ್ಮೆ ಕರುಗಳಿವೆ. ಆರು ಕೋಣಗಳಿವೆ. ಒಟ್ಟು ಎಮ್ಮೆಗಳಲ್ಲಿ 60 ಎಮ್ಮೆಗಳು ಗರ್ಭ ಧರಿಸಿದರೆ, ಉಳಿದಂತೆ 50 ಎಮ್ಮೆಗಳಿಂದ ನಿತ್ಯ ಎರಡು ವೇಳೆ ಒಟ್ಟು 700 ಲೀಟರ್ ಹಾಲು ಸಿಗುತ್ತದೆ.


ಡೇರಿಯಲ್ಲಿ ದೇವಣಿ, ಕಿಲಾರಿ, ಕಾಂಕ್ರೋಜ, ಗುಜರಾತಿನ ಜರ್ಸಿ, ಎಚ್‌ಎಫ್ ತಳಿಗಳಿಗೆ ಸೇರಿದ ಸುಮಾರು 65ಕ್ಕೂ ಅಧಿಕ ಆಕಳುಗಳಿವೆ. ಅವುಗಳೊಂದಿಗೆ ಸುಮಾರು 20 ಕರುಗಳಿವೆ. ಸವಾಲ್ ತಳಿಯ ಒಂದು ಹೋರಿ ಇದೆ. ನಿತ್ಯ ಆಕಳುಗಳಿಂದ 800 ಲೀಟರ್‌ನಷ್ಟು ಹಾಲು ಕರೆಯುತ್ತಾರೆ. ಎಮ್ಮೆಗಳ ಉಸ್ತುವಾರಿ ನೋಡಿಕೊಳ್ಳಲೆಂದೇ ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಬಂದ ನುರಿತ ಕಾರ್ಮಿಕರಿದ್ದಾರೆ.


ಉತ್ತರ ಪ್ರದೇಶದ ಕೆಲಸಗಾರ ಸಂಜಯ ದುಬೆ ಹೇಳುವಂತೆ ಡೈರಿಯ ದೈನಂದಿನ ಕೆಲಸಗಳು ಪ್ರಾರಂಭವಾಗುವುದು ನಸುಕಿನ ಮೂರು ಘಂಟೆಗೆ. ಮೊದಲು ಕೊಟ್ಟಿಗೆ ಸ್ವಚ್ಛಗೊಳಿಸಿ ನಂತರ ಅಕ್ಕಿ ತೌಡು, ಶೆಂಗಾ ಫೀಡ್ಸ್, ಕಡಲೆ, ಹೆಸರು, ತೊಗರಿ, ಬಾರ್ಲಿ ಮುಂತಾದವುಗಳ ಮಿಶ್ರಣದ ಆಹಾರವನ್ನು ಪ್ರತಿ ಹಸು / ಎಮ್ಮೆಗೆ ಮೂರು ಕೆಜಿಯಂತೆ ನೀಡಿದ ನಂತರ ಹಾಲು ಕರೆಯುತ್ತಾರೆ.


ಎಮ್ಮೆ ಹಾಲನ್ನು ಕೆಲಸಗಾರರು ಕರೆದರೆ, ಆಕಳುಗಳ ಹಾಲು ಕರೆಯಲು ಯಂತ್ರಗಳನ್ನು ಬಳಸುತ್ತಾರೆ. ಮಧ್ಯಾಹ್ನದ ವೇಳೆಯಲ್ಲಿ ಎಮ್ಮೆಗಳನ್ನು ಡೈರಿಯ ಆವರಣದಲ್ಲಿ ನಿರ್ಮಿಸಿರುವ ಕೆರೆಯಲ್ಲಿ ಬಿಡುತ್ತಾರೆ. ಆಕಳುಗಳ ಮೈಯನ್ನು ಕೊಟ್ಟಿಗೆಯಲ್ಲಿ ತೊಳೆಯುತ್ತಾರೆ.
ಡೈರಿಯ ಉಸ್ತುವಾರಿ ನೋಡಿಕೊಳ್ಳುವ ಕೆಂಪೇಗೌಡರು ಹೇಳುವ ಪ್ರಕಾರ ಪ್ರತಿ ಜಾನುವಾರಿಗೆ ದಿನವೊಂದಕ್ಕೆ 30 ಕೆಜಿಯಂತೆ ಒಟ್ಟು ದಿನಕ್ಕೆ ಒಂದು ಟನ್ ಆಹಾರ ಬೇಕಾಗುತ್ತದೆ. ಹಸು, ಎಮ್ಮೆಗಳಿಗೆ ಬೇಕಾದ ಔಷಧಿಗಳ ಸಂಗ್ರಹವೂ ಸಹ ಡೇರಿಯಲ್ಲಿದೆ. ಚಿಕ್ಕ ಪುಟ್ಟ ಕಾಯಿಲೆಗಳಿಗೆ ಇಲ್ಲಿನ ಕಾರ್ಮಿಕರೇ ಚಿಕಿತ್ಸೆ ನೀಡುತ್ತಾರೆ. ತೀವ್ರ ಸ್ವರೂಪದ ತೊಂದರೆಗಳಿಗೆ ವೈದ್ಯರನ್ನು ಕರೆಸುತ್ತೇವೆ ಎಂದು ಅವರು ಹೇಳುತ್ತಾರೆ.


ನಿತ್ಯ ಇಲ್ಲಿ ಸುಮಾರು ಎರಡು ಟ್ರ್ಯಾಕ್ಟರ್‌ನಷ್ಟು ಸೆಗಣಿ ದೊರೆಯುತ್ತದೆ. ಅದರಲ್ಲಿ ಸ್ವಲ್ಪ ಭಾಗವನ್ನು ಗೊಬ್ಬರ ಅನಿಲ ಘಟಕಕ್ಕೆ ಬಳಸುತ್ತಾರೆ. ಉಳಿದುದನ್ನು ದೊಡ್ಡ ಪ್ರಮಾಣದಲ್ಲಿ ಎರೆಹುಳು ಗೊಬ್ಬರ ತಯಾರಿಸಲು ಉಪಯೋಗಿಸುತ್ತಾರೆ. ಕೊಟ್ಟಿಗೆ ಸ್ವಚ್ಛಗೊಳಿಸಿದ ನೀರು ಹಾಗೂ ಗಂಜಲನ್ನು ಹೊಲಕ್ಕೆ ಹಾಯಿಸಿ ಹಸಿರು ಮೇವನ್ನು ಬೆಳೆಯುತ್ತಾರೆ. ವರ್ಷಕ್ಕೆ 200 ಟ್ರ್ಯಾಕ್ಟರ್‌ನಷ್ಟು ಜೋಳದ ಒಣ ಮೇವನ್ನು ಸಂಗ್ರಹಿಸುತ್ತೇವೆ ಎನ್ನುತ್ತಾರೆ ಉಸ್ತುವಾರಿ ನೋಡಿಕೊಳ್ಳುವ ನಟರಾಜ್.


ಡೈರಿಯಲ್ಲಿನ ಸುಮಾರು ನಲವತ್ತು ಎಕರೆಯಲ್ಲಿ ತಬಾನಾ, ಹಾಥಿಗ್ರಾಸ್, ಬ್ರೇಕೆರಿಯಾ, ಗ್ರೇಜಿಂಗ್ ಗಿನ್ನೆ, ಆಫ್ರಿಕನ್ ಟಾಲ್, ಡಿಎಚ್‌ಎನ್-07 ಇತ್ಯಾದಿ ವಿವಿಧ ಮೇವಿನ ತಳಿಗಳನ್ನು ಮತ್ತು ಜೋಳ, ಮುಸುಕಿನ ಜೋಳವನ್ನೂ ಬೆಳೆದಿದ್ದಾರೆ.ಡೇರಿ ಕೆಲಸ ಕಾರ್ಯಗಳನ್ನು ನಿರ್ವಹಣೆಗಾಗಿ ಮೂವತ್ತೈದು ಮಂದಿ ಕೆಲಸಗಾರರಿದ್ದಾರೆ. ಡೈರಿಯ ಹಾಲನ್ನು ಧಾರವಾಡದಲ್ಲಿರುವ ಪೇಡಾ ತಯಾರಕರೊಬ್ಬರಿಗೆ ಮಾರಾಟ ಮಾಡುತ್ತಾರೆ.


ಹೈನುಗಾರಿಕೆ ಯಶಸ್ಸಿನ ಗುಟ್ಟೇನು ಎಂಬ ಪ್ರಶ್ನೆಗೆ ಕುಲಕರ್ಣಿ `ಎಲ್ಲದರಲ್ಲೂ `ಗುಣಮಟ್ಟ'ಕ್ಕೆ ಮಹತ್ವ ನೀಡಿದ್ದೇನೆ. ನಮ್ಮ ರೈತರೂ ಉತ್ತಮ ಗುಣಮಟ್ಟದ ಜಾನುವಾರುಗಳನ್ನು ಸಾಕಿ ಪಾಲನೆ, ಪೋಷಣೆ ಮಾಡಿದರೆ ಲಾಭವಿದೆ' ಎನ್ನುತ್ತಾರೆ.


ಧಾರವಾಡದ ಕೆಎಂಎಫ್‌ನವರು ತಮ್ಮಲ್ಲಿಗೆ ತರಬೇತಿಗಾಗಿ ಬರುವ ರೈತರನ್ನು ವಿನಯ ಅವರ ಡೇರಿಗೆ ಕರೆದುಕೊಂಡು ಹೋಗಿ ತೋರಿಸುತ್ತಾರೆ. ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆ ಮಾಡಬೇಕೆನ್ನುವವರು ವಿನಯ ಅವರ ಡೇರಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿ ಬೇಕಿದ್ದವರು ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್ -94481 15601


(ಪ್ರಜಾವಾಣಿ ದಿನಪತ್ರಿಕೆಯ `ಕರ್ನಾಟಕ ದರ್ಶನ ಪುರವಣಿಯಲ್ಲಿ ಗುರುವಾರ, 29 ಜನವರಿ 2009 ರಂದು ಪ್ರಕಟವಾದ ಲೇಖನ)

No comments:

Post a Comment