Tuesday, March 4, 2014

ಮನಸ್ಸಿನ ಏಕಾಗ್ರತೆ ಹೆಚ್ಚಿಸುವ ಆ್ಯಪ್ಸ್‌

ಮನಸ್ಸು ಸದಾ ಚಂಚಲ. ಒಮ್ಮೊಮ್ಮೆ ಸಾವಿರ ಯೋಚನೆಗಳ ಹೊಯ್ದಾಟದ ಹುಚ್ಚು ಹೊಳೆ ಹರಿಸುವುದರೊಂದಿಗೆ ಏಕಾಗ್ರತೆಗೆ ಭಂಗ ತರುತ್ತದೆ. ಹಾಗಾಗಿಯೇ ಮನಸ್ಸನ್ನು ಮರ್ಕಟಕ್ಕೆ ಹೋಲಿಸಿದ್ದಾರೆ 12ನೇ ಶತಮಾನದಲ್ಲಿ ಸಮಾಜ ಸುಧಾರಕರಾಗಿದ್ದ ಬಸವಣ್ಣನವರು.

ಟಿ.ವಿ, ಸಿನೆಮಾ, ಅಂತರ್ಜಾಲ, ದೂರವಾಣಿ... ಹೀಗೆ ಅತಿಯಾದ ಆಧುನಿಕತೆಯ ಸೊಂಕಿನಿಂದ ಮನಸ್ಸಿನ ಏಕಾಗ್ರತೆಗೆ ಭಂಗ ಬಂದಿದೆ ಎನ್ನುವ ಅನುಭವಿಕರು, ಮಾನಸಿಕ ಏಕಾಗ್ರತೆ ಗಾಗಿ ಕ್ರೀಡೆ, ಯೋಗ, ಧ್ಯಾನ, ಪ್ರಾರ್ಥನೆಗೆ ಮೋರೆ ಹೋಗಿ ಎಂದು ಕಿರಿಯರಿಗೆ ಸಲಹೆ ನೀಡುತ್ತಾರೆ.
ಮೊಬೈಲ್‌ ಫೋನ್‌ ಎಂಬುದು ಮನಸ್ಸಿನ ಏಕಾಗ್ರತೆಗೆ ಮಾರಕ ಎಂದೇ ಕೆಲವರ ಅಭಿಮತ. ಇಂತಹ ಮೊಬೈಲ್‌ನಿಂದಲೇ ಏಕಾಗ್ರತೆ ಹೆಚ್ಚಿಸಬಹುದು. ಜತೆಗೆ ಮನಸ್ಸಿನ ಸಮಾಧಾನವನ್ನೂ ದುಪ್ಪಟ್ಟಾಗುತ್ತದೆ ಎಂಬ ವಿಸ್ಮಯಕಾರಿ ವಿಷಯವನ್ನು ಪ್ರತಿಪಾದಿಸಿದ್ದಾರೆ ಭಾರತೀಯ ಮೂಲದ ಅಮೆರಿಕದ ಒಬ್ಬ ಸಂಶೋಧಕ. 
ಈ ವಿಚಿತ್ರ ಹೊಳಹಿನ ಪ್ರತಿಪಾದಕರಾದ ಮಿಚಿಗನ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಜಸ್‌ಪ್ರಿತ್ ಸಿಂಗ್, ಸ್ಮಾರ್ಟ್‌ಫೋನ್‌ನಿಂದ ಬಳಕೆ ದಾರರು ತಮ್ಮ ನಿರ್ದಿಷ್ಟ ಗುರಿ ಈಡೇರಿಕೆಗೆ ಅಗತ್ಯ ವಾದ ಏಕಾಗ್ರತೆಯನ್ನು ಕೆಲಸದ ಸ್ಥಳದಲ್ಲಿ ಅಥವಾ ಮನೆಯಲ್ಲಿ ಕುಳಿತೆ ಗಳಿಸಬಹುದು ಎನ್ನುತ್ತಾರೆ.
‘ಇಂದಿನ ವೇಗದ ಜೀವನಶೈಲಿಯಲ್ಲಿ ನಾವು ಆಹಾರ, ಯಂತ್ರೋಪಕರಣ ಅಥವಾ ಜ್ಞಾನದ ಕೊರತೆ ಕಾಣುತ್ತಿಲ್ಲ. ಬದಲು ಮನಸ್ಸಿನ ಏಕಾಗ್ರತೆಗಂತೂ ಭಾರಿ ಭಂಗವಾಗಿ ರುವುದನ್ನು ಕಾಣುತ್ತಿದ್ದೇವೆ’ ಎನ್ನುತ್ತಾರೆ ಜಸ್‌ಪ್ರಿತ್.
ಮನುಷ್ಯರು ವಿಶೇಷವಾಗಿ ಒತ್ತಡಕ್ಕೆ ಒಳಗಾದಾಗ ಮರೆವಿಗೆ ತುತ್ತಾಗುತ್ತಾರೆ. ಆದರೆ ಸ್ಮಾರ್ಟ್‌ಫೋನ್‌ಗಳಿಗೆ ಇಂತಹ ಪ್ರಶ್ನೆಯೇ ಬರುವುದಿಲ್ಲ ಎನ್ನುವ ಜಸ್‌ಪ್ರಿತ್, ಒಂದು ಬಾರಿ ತಮ್ಮ ತರಗತಿಯಲ್ಲಿ ಈ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಏಕಾಗ್ರತೆಗೆ ಅನುಕೂಲ ವಾಗುವಂತಹ ಮೊಬೈಲ್ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸುವಂತೆ ತಮ್ಮ ವಿದ್ಯಾರ್ಥಿಗಳಿಗೆ ಸವಾಲು ಒಡ್ಡಿದ್ದರು. ಜಸ್‌ಪ್ರಿತ್‌ರ ಸವಾಲನ್ನು ಜಯಿಸಿರುವ ವಿದ್ಯಾರ್ಥಿಗಳ ತಂಡ, ಸ್ಮಾರ್ಟ್‌ಫೋನ್ ಬಳಕೆದಾರರ ಏಕಾಗ್ರತೆಗೆ ಅಗತ್ಯವಾದ ವಿಡಿಯೊಗಳು ಮತ್ತು ಸಂದೇಶಗಳನ್ನು ಕಳುಹಿಸುವಂತಹ ಕೆಲ ಅಪ್ಲಿಕೇಷನ್‌ ಗಳನ್ನೂ ವಿನ್ಯಾಸ ಗೊಳಿಸಿದ್ದಾರೆ.
‘ಬ್ಯಾಲನ್ಸ್’ ಆ್ಯಪ್
ನಿತ್ಯ ಚಟುವಟಿಕೆಗಳಿಂದ ವಿಮುಖರಾಗುವ ಹಿರಿಯ ನಾಗರಿಕರಿಗೆ ಅವುಗಳನ್ನು ಸುಲಭವಾಗಿ ನಿರ್ವಹಿಸುವ ಮತ್ತು ಸಮನ್ವಯ ಭಾವವನ್ನು ವೃದ್ಧಿಸುವಂತಹ ಚಿಕ್ಕ ವ್ಯಾಯಾಮಗಳ  ವಿಡಿಯೊಗಳನ್ನು ರವಾನಿಸುವ ಮೂಲಕ ಈ ಅಪ್ಲಿಕೇಷನ್ ಕಾರ್ಯ ನಿರ್ವಹಿಸುತ್ತದೆ.
‘ವಿಅಡಿಷನ್’ ಆ್ಯಪ್
ಈ ಅಪ್ಲಿಕೇಷನ್ ಗರ್ಭಿಣಿಯರಿಗೆ ಅಗತ್ಯವಾದ ದೈಹಿಕ ಚಟುವಟಿಕೆಗಳ ವ್ಯಾಯಾಮಗಳ ವಿಡಿಯೊಗಳನ್ನು, ಹಾಡುಗಳನ್ನು ಮತ್ತು ಸಂಗೀತವನ್ನು ಕಳುಹಿಸುವ ಮೂಲಕ ಮಾನಸಿಕ ಏಕಾಗ್ರತೆಗೆ ಮಾರ್ಗದರ್ಶನ ನೀಡುತ್ತದೆ.
‘ಕಾಲೇಜ್ ಗ್ರ್ಯಾನಿ’ ಆ್ಯಪ್
ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಗಮನದಲ್ಲಿಟ್ಟು ಕೊಂಡು ವಿನ್ಯಾಸಗೊಳಿಸ ಲಾಗಿರುವ ಈ ಅಪ್ಲಿಕೇಷನ್ ವಿದ್ಯಾರ್ಥಿಗೆ ಮಲಗುವ ಸರಿಯಾದ ಸಮಯ, ಓದಿನಿಂದ ವಿರಾಮ ಪಡೆಯುವ ಸಮಯದೊಂದಿಗೆ ಕುಡಿತದ ಮಿತಿಯನ್ನು ನೆನಪಿಸುವ ಜತೆಗೆ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಓದಿನಲ್ಲಿ ಏಕಾಗ್ರತೆ ಸಾಧಿಸಲು ಅಗತ್ಯವಾದ ಮಾರ್ಗದರ್ಶನದ ಸಂದೇಶಗಳನ್ನು ರವಾನಿಸುತ್ತದೆ. ನಾವೇನು ತಿಳಿದುಕೊಂಡಿರುತ್ತೇವೆ ಮತ್ತು ನಾವೇನು ಮಾಡುತ್ತೇವೆ ಎಂಬ ಈ ಎರಡು ಅಂಶಗಳ ಮಧ್ಯ ಸಾಮರಸ್ಯ ತರುವುದು ತಮ್ಮ ಈ ಕೋರ್ಸ್‌ನ ಉದ್ದೇಶ ಎನ್ನುತ್ತಾರೆ ಜಸ್‌ಪ್ರಿತ್.
(ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಜನವರಿ 22, 2014 ರಂದು ಪ್ರಕಟವಾದ ಲೇಖನ)

No comments:

Post a Comment