Tuesday, March 4, 2014

ಕಚೇರಿ ಸ್ಥಳಾವಕಾಶ 2014 ಆಶಾದಾಯಕ

ಹೊಸವರ್ಷದ ಆಗಮನದೊಂದಿಗೆ ದೇಶದ ಅರ್ಥವ್ಯವಸ್ಥೆಯಲ್ಲಿ ಆಶಾ ದಾಯಕವಾದ ಪುನಶ್ಚೇತನದ ಗಾಳಿ ಬೀಸುತ್ತಿದ್ದು, ಮಾಹಿತಿ ತಂತ್ರಜ್ಞಾನದ (ಐಟಿ) ಹೆಜ್ಜಾಲವಾಗಿರುವ ಬೆಂಗಳೂರು 2014ರಲ್ಲಿ ಕಚೇರಿ ಸ್ಥಳಾವಕಾಶ ಬೇಡಿಕೆಯಲ್ಲಿ ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿಯೇ ಎರಡನೇ ಅತ್ಯಧಿಕ ಬೇಡಿಕೆಯುಳ್ಳ ನಗರವಾಗುವ ನಿರೀಕ್ಷೆ  ಇದೆ.
ಕುಷ್ಮನ್ ಆ್ಯಂಡ್ ವೆಕ್ಫೀಲ್ಡ್ ಎಂಬ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ  ಈ ಅಂಶ ಪ್ರಮುಖವಾಗಿ ವ್ಯಕ್ತವಾಗಿದೆ.ಕಚೇರಿ ಸ್ಥಳಾವಕಾಶಕ್ಕೆ ಇರುವ ಬೇಡಿಕೆಯ ಪ್ರಮಾಣವನ್ನು ಒಳಗೊಂಡ ಮಹಾ ನಗರಗಳ ಪಟ್ಟಿಯೊಂದನ್ನು ಈ ಸಲಹಾ ಸಂಸ್ಥೆ ಸಿದ್ಧಪಡಿಸಿದೆ. ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಟೋಕಿಯೋ ಇದ್ದರೆ ಎರಡನೇ ಸ್ಥಾನದಲ್ಲಿ ಬೆಂಗಳೂರು ಇದೆ.
‘ಐಟಿ ಹಾಗೂ ಐಟಿ ಸೇವಾ ಸಂಸ್ಥೆಗಳು ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ನಡೆಸುವ ವಿಸ್ತರಣೆ ಕಾರ್ಯದಿಂದಾಗಿ ಬೆಂಗಳೂರು ಪ್ರಸಕ್ತ ಸಾಲಿನಲ್ಲಿ ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿಯೇ ಕಚೇರಿ ಸ್ಥಳಾವಕಾಶ ವನ್ನು ಕಬಳಿಸುವ ಎರಡನೇ ಅತಿದೊಡ್ಡ ನಗರವಾಗುವ ನಿರೀಕ್ಷೆಯಿದೆ’ ಎನ್ನುತ್ತದೆ ಸಮೀಕ್ಷೆ ವರದಿ.
ಏಷ್ಯಾದ ಪ್ರಮುಖ 30 ನಗರಗಳ ಪೈಕಿ 76 ಲಕ್ಷ ಚದರಡಿಗಳಷ್ಟು ಕಚೇರಿ ಸ್ಥಳಾವಕಾಶವನ್ನು ಉಪಯೋಗಿಸಿಕೊಳ್ಳುವ ಮೂಲಕ ಟೋಕಿಯೊ ಮಹಾ ನಗರ 2014ರಲ್ಲಿ ಮೊದಲ ಸ್ಥಾನ ಕಾಯ್ದುಕೊಳ್ಳುವ ನಿರೀಕ್ಷೆ ಇದೆ. ಅದೇ ರೀತಿ ಅನುಕ್ರಮ ವಾಗಿ ಬೆಂಗಳೂರು ಮತ್ತು ಮನಿಲಾ ನಗರಗಳು 63 ಲಕ್ಷ ಚದರಡಿ ಹಾಗೂ 60 ಲಕ್ಷ ಚದರಡಿಗಳಷ್ಟು ವಿಸ್ತಾರದ ಕಚೇರಿ ಸ್ಥಳಾವಕಾಶದ ಬೇಡಿಕೆಯನ್ನು ಪೂರೈಸುವ ಮೂಲಕ ಎರಡನೇ ಮತ್ತು ಮೂರನೇ ನಗರಗಳಾಗುತ್ತವೆ ಎನ್ನುವ ಆಶಯ ಹೊಂದಲಾಗಿದೆ.
ಏಷ್ಯಾ ಪೆಸಿಫಿಕ್ ಪ್ರಾಂತ್ಯದೊಳಗಿನ ಪ್ರಮುಖವಾದ ಎಲ್ಲ 30 ನಗರಗಳಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆಯು 6 ಕೋಟಿ ಚದರಡಿ ತಲುಪುವ ಸಾಧ್ಯತೆ ಇದೆ ಎನ್ನುತ್ತದೆ ಈ ಸಲಹಾ ಸಂಸ್ಥೆ.ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ಎಂದೇ ಗುರ್ತಿಸುವ ದೆಹಲಿ ಸುತ್ತಲಿನ ಪ್ರದೇಶದಲ್ಲಿ ಈ ಸಾಲಿನಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆಯು ಕಳೆದ ವರ್ಷಕ್ಕಿಂತ ಅಂದಾಜು ಶೇ 10 ಹೆಚ್ಚಳವಾಗುವ ಮೂಲಕ 37 ಲಕ್ಷ ಚದರಡಿ ಪ್ರದೇಶ ವನ್ನು ಆವರಿಸಿಕೊಳ್ಳಲಿದೆ ಎನ್ನುವ ಲೆಕ್ಕಾಚಾರವಿದೆ.
‘2014ರ ನಂತರ ದೇಶದ ಮತ್ತು ಜಾಗತಿಕ ಆರ್ಥಿಕ ವ್ಯವಸ್ಥೆಯು ಪುನಶ್ಚೇತನ ಕಾಣುವುದೆಂಬ ಆಶಾವಾದವಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆಗಾಗಿಯೇ ಮೀಸಲಿರುವ  ಕಚೇರಿ ಸ್ಥಳಾವಕಾಶಕ್ಕಾಗಿ ಬರುವ ಬೇಡಿಕೆಯು 2014–15ನೇ  ಸಾಲಿನಲ್ಲಿ ಗಗನಮುಖಿಯಾಗುವ ನಿರೀಕ್ಷೆಯಿದೆ. ಇದರಿಂದಾಗಿ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಕಚೇರಿ ಸ್ಥಳಾವಕಾಶವು ಅಗತ್ಯಕ್ಕಿಂತ ಅಧಿಕವಾಗಿ ಸರಬರಾಜಾಗುವ ಒಲವಿದೆ’ ಎನ್ನುವುದು ಕುಷ್ಮನ್ ಅಂಡ್ ವೆಕ್ಫೀಲ್ಡ್  ಸಂಸ್ಥೆಯ ದಕ್ಷಿಣ ಏಷ್ಯಾ ವಿಭಾಗದ ಕಾರ್ಯನಿರ್ವಾಹಕ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ದತ್ ಅವರ ಅನುಭವದ ನುಡಿ.
ಅಷ್ಟೇ ಅಲ್ಲದೆ, ಬದಲಾಗುವ ಜಾಗತಿಕ ಆರ್ಥಿಕ ವ್ಯವಸ್ಥೆಯ ಚಿತ್ರಣವು ಐಟಿ ಮತ್ತು ಅದರ ಸೇವಾ ವಲಯದ ಬೆಳವಣಿಗೆ ಮೇಲೆ ತೀವ್ರತರದ ಪರಿಣಾಮ ಬೀರಲಿದೆ.ರೂಪಾಯಿ ವಿನಿಮಯ ದರವು ಡಾಲರ್‌ಗೆ ಅನುಕೂಲಕರವಾಗುವುದ ರೊಂದಿಗೆ  ಜಾಗತಿಕ ಅರ್ಥವ್ಯವಸ್ಥೆಯ ಚಿತ್ರಣದಲ್ಲಿ ಪ್ರಗತಿ ಕಂಡುಬರಲಿದೆ. ಇದರಿಂದಾಗಿ ದೇಶದ ಐ.ಟಿ ಸೇವೆಗಳ ರಫ್ತಿನಲ್ಲಿ ಹೆಚ್ಚಳವಾಗುವುದರೊಂದಿಗೆ ಅದರ ಲಾಭವು ಕಚೇರಿ ಸ್ಥಳಾವಕಾಶ ಕ್ಷೇತ್ರಕ್ಕೆ ತಟ್ಟಲಿದೆ ಎನ್ನುತ್ತಾರೆ ದತ್.
2014ರ ದ್ವಿತೀಯಾರ್ಧದಲ್ಲಿನ ಒಟ್ಟಾರೆ ಅರ್ಥವ್ಯವಸ್ಥೆ ಪರಿಸ್ಥಿತಿಯ ನಿರೀಕ್ಷಿತ ಪ್ರಗತಿ ಮೇಲೆ ಕಣ್ಣು ನೆಟ್ಟಿರುವ ಕಂಪೆನಿಗಳು ಸದ್ಯ, ಸಂಸ್ಥೆಯ ಹೆಚ್ಚಿನ ವಿಸ್ತರಣೆ ಕಾರ್ಯಕ್ಕೆ ಸಂಬಂಧಿಸಿದ ಕಚೇರಿ ಸ್ಥಳಾವಕಾಶ ಕುರಿತ ತಮ್ಮ ಬೇಡಿಕೆಯನ್ನು ಸಲ್ಲಿಸುವುದನ್ನೂ ಮುಂದೂಡುತ್ತಿವೆ.
ಬೆಂಗಳೂರು, ಮುಂಬೈ, ದೆಹಲಿ ‘ಎನ್‌ಸಿಆರ್’ ಮತ್ತು ಪುಣೆ ಸೇರಿದಂತೆ ಪ್ರಮುಖ ನಗರಗಳಲ್ಲಿ 2013ರಲ್ಲಿ 2.95 ಕೋಟಿ ಚದರಡಿಗಳಷ್ಟು  ಇದ್ದ ಕಚೇರಿ ಸ್ಥಳಾವಕಾಶವು ಮಾರುಕಟ್ಟೆಗೆ ಪೂರೈಕೆಯಾಗಿತ್ತು. ಆದರೆ, ಬಳಕೆ ಮತ್ತು ಬೇಡಿಕೆ ಪ್ರಮಾಣದ ಅಷ್ಟೇನೂ ಆಶಾದಾಯಕವಾಗಿರಲಿಲ್ಲ.
ಇತ್ತೀಚೆಗೆ ಮಾತ್ರ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು ಎನ್ನುವ ಆಸಕ್ತಿಯು ಖಾಸಗಿ ಹೂಡಿಕೆದಾರರಲ್ಲಿ ಹೆಚ್ಚುತ್ತಿದೆ. ಇನ್ನೊಂದೆಡೆ, ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಹೂಡಿಕೆ ಮಾಡಲು ಬಯಸುವ ವಿದೇಶಿ ಹೂಡಿಕೆದಾರರಿಗಂತೂ ಬೆಂಗಳೂರು ಅಚ್ಚು ಮೆಚ್ಚಿನ ತಾಣ ಎನಿಸಿದೆ. ಈ ಎರಡೂ ಅಂಶಗಳು 2014ರಲ್ಲಿ ಬೆಂಗಳೂರು ಸೇರಿದಂತೆ ಕೆಲವು ಮಹಾ ನಗರಗಳಲ್ಲಿ ಕಚೇರಿ ಸ್ಥಳಾವಕಾಶ ಬೇಡಿಕೆಯನ್ನು ನಿಧಾನವಾಗಿಯಾದರೂ ಪಡೆದುಕೊಳ್ಳಲಿವೆ ಎಂಬುದು ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ, ಅದರಲ್ಲೂ ವಾಣಿಜ್ಯ ಉದ್ದೇಶಗಳ ಕಟ್ಟಡ ನಿರ್ಮಾಣ ಕಂಪೆನಿಗಳಲ್ಲಿ ಆಶಾವಾದ ಚಿಗುರುವಂತೆ ಮಾಡಿದೆ.

(
ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಫೆಬ್ರುವರಿ 05, 2014 ರಂದು ಪ್ರಕಟವಾದ ಲೇಖನ)

No comments:

Post a Comment