Friday, November 22, 2013

ಪಾರ್ಶ್ವವಾಯುಗೆ ವಿಡಿಯೊ ಗೇಮ್ ಚಿಕಿತ್ಸೆ


ಹಠಾತ್ ಆಗಿ ದಾಳಿ ಮಾಡಿ ದೇಹದ ನಿರ್ದಿಷ್ಟ ಅಂಗವನ್ನು ನಿಷ್ಕ್ರಿಯಗೊಳಿಸುವ ಮೂಲಕ ಕ್ರಿಯಾಶೀಲ ವ್ಯಕ್ತಿಯನ್ನು ಬಲಹೀನ­ನ್ನಾಗಿಸಿ ನರಳಿಸಿ ಬೀಡುವ ಕಾಯಿಲೆ ಪಾಶ್ವವಾಯು.
ನೇರವಾಗಿ ಮೆದುಳಿನ ಮೇಲೆ ದಾಳಿ ಮಾಡುವ ಈ ಆಗಂತು­ಕನಿಂದ, ನೆನಪು, ಮಾತು, ದೈಹಿಕ ಸಮತೋಲನ ಕಳೆದುಕೊಳ್ಳುವು­ದರ ಜತೆಗೇ ಹತ್ತಾರು ತೊಂದರೆಗಳಿಗೆ ಒಳಗಾಗುವ ಮನುಷ್ಯ ಜೀವಂತ ಶವದಂತಾಗಿ ಬಿಡುವ ಸಾಧ್ಯತೆ ಕೂಡ ಇದೆ.
ವಿಶ್ವದಲ್ಲಿ ಪ್ರತಿ ಆರು ಸೆಕೆಂಡ್‌ಗೆ ಒಬ್ಬನನ್ನು ತನ್ನ ತೆಕ್ಕೆಗೆ ತೆಗೆದುಕೊ­ಳ್ಳುವ ಈ ಮಾರಕ ಕಾಯಿಲೆಯಿಂದ ನರಳುವವರ ನೋವಿಗೆ ಉಪಶಮನ ನೀಡುವ ನಿಟ್ಟಿನಲ್ಲಿ ಇದೀಗ ತಂತ್ರಜ್ಞರು ‘3ಡಿ ವಿಡಿಯೊ ಗೇಮ್‌’ ಅಭಿವೃದ್ಧಿ ಪಡಿಸಿದ್ದಾರೆ.
ಈ 3ಡಿ ವಿಡಿಯೋ ಗೇಮ್‌ ಸಹಾಯದಿಂದ ಪಾರ್ಶ್ವವಾಯು ಪೀಡಿತರಿಗೆ ಮನೆಯಲ್ಲಿಯೇ ಶೇ 80ರಷ್ಟು ಪರಿಣಾಮಕಾರಿ ಚಿಕಿತ್ಸೆ ನೀಡಬಹುದು ಎನ್ನುತ್ತಾರೆ ಈ ತಂತ್ರಜ್ಞರು.
ಮನುಷ್ಯನ ಎಲ್ಲ ಚಟುವಟಿಕೆಗಳ ಮೇಲೆ ಸವಾರಿ ಮಾಡುವ ಮೂಲಕ ಆತನನ್ನು ದೈಹಿಕವಾಗಿ ಅಸಮರ್ಥ ನನ್ನಾಗಿಸುವ ಈ ಘಾತುಕ ರೋಗಕ್ಕೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಓಹಿಯೋ ಸ್ಟೇಟ್ ವಿಶ್ವವಿದ್ಯಾಲಯದ ವೆಕ್ಸ್‌ನೆರ್ ವೈದ್ಯಕೀಯ ಕೇಂದ್ರದ ಸಂಶೋಧಕರು ನಡೆಸಿದ ಸಂಶೋಧನೆ ಯ ಫಲವೇ ಈ 3ಡಿ ವಿಡಿಯೊ ಗೇಮ್.
ಸಾಮಾನ್ಯವಾಗಿ ಪಾರ್ಶ್ವವಾಯು ಪೀಡಿತರಿಗೆ ವೈದ್ಯರು ದೈಹಿಕ ಕಾರ್ಯ ಚಟುವಟಿಕೆಗಳ ಸುಧಾರಣೆಗಾಗಿ ‘ಸಿಐ ಚಿಕಿತ್ಸೆ’ಯನ್ನು (Constraint- induced movement therapy) ಶಿಫಾರಸು ಮಾಡುತ್ತಾರಾದರೂ ಇದರ ಪ್ರಯೋಜನ ಪಡೆಯುವವರು ಶೇ 1ರಷ್ಟು ರೋಗಿಗಳು ಮಾತ್ರ.
ಬಹಳ ಉಪಯುಕ್ತವಾದ ಈ ಚಿಕಿತ್ಸೆಯು ಮಾಹಿತಿ ಕೊರತೆ, ಸಾರಿಗೆ ಅಲಭ್ಯತೆ ಮತ್ತು ದುಬಾರಿ ವೆಚ್ಚ ಮತ್ತಿತರ ಕಾರಣಗಳಿಂದಾಗಿ ಬಹು­ತೇಕರಿಗೆ ಗಗನ ಕುಸುಮದಂತೆ ಆಗಿದೆ. ಇದಕ್ಕೆ ಪರ್ಯಾ­ಯವಾಗಿ ನಮ್ಮ ತಂಡವು ಜನಸಾಮಾನ್ಯರಿಗೂ ಸಿಐ ಚಿಕಿತ್ಸೆ ಮನೆಯಲ್ಲೇ ಲಭ್ಯವಾಗಲಿ ಎನ್ನುವ ದೃಷ್ಟಿಯಿಂದ ಈ 3ಡಿ ಗೇಮ್ ಅಭಿವೃದ್ಧಿಪಡಿಸಿದೆ ಎನ್ನುತ್ತಾರೆ ಓಹಿಯೋ ಸ್ಟೇಟ್ ವೈದ್ಯಕೀಯ ಕಾಲೇಜಿನ ದೈಹಿಕ ಚಿಕಿತ್ಸೆ ಮತ್ತು ಪುರ್ನ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಿನ್ ಗೌತಿಯರ್.
ಈ ಯೋಜನೆಯಲ್ಲಿನ ಪ್ರಮುಖ ಸಂಶೋಧಕ ಹಾಗೂ ನರವಿಜ್ಞಾನಿ ಕೂಡ ಆಗಿದ್ದಾರೆ ಗೌತಿಯರ್. ಅವರ ನೇತೃತ್ವದಲ್ಲಿ ವೈದ್ಯರು, ಕಂಪ್ಯೂಟರ್ ತಜ್ಞರು, ಎಲೆಕ್ಟ್ರಿಕಲ್ ಎಂಜಿನಿಯರ್‌ಗಳು ಮತ್ತು ಜೀವರಸಾಯನಶಾಸ್ತ್ರಜ್ಞರನ್ನು ಒಳಗೊಂಡ ಬಹು ಶಿಸ್ತಿನ ತಂಡವೊಂದು ಪರಿಶ್ರಮವಹಿಸಿ ಸಿಐ ಚಿಕಿತ್ಸೆಯ ಪರಿಣಾಮಕಾರಿ ಅಂಶಗಳನ್ನು ಸಂಯೋಜಿಸಿ ಈ ವಿಡಿಯೊ ಗೇಮ್ ರೂಪಿಸಿದೆ.
ಎರಡು ವಾರಗಳ ಅವಧಿಗಾಗಿ 30 ಗಂಟೆಗಳ ಕೋರ್ಸ್ ಹೊಂದಿರುವ ಈ ಗೇಮ್ ಬಳಸುವಾಗ  ಪಾರ್ಶ್ವವಾಯು ಪೀಡಿತ ರೋಗಿಯು ನದಿ ಕಣಿವೆಯ ಪರಿಸರದಲ್ಲಿರುವಂತೆ ಅನುಭೂತಿ ಪಡೆಯಲಿದ್ದು, ಈ ವ್ಯಾಯಾಮದಿಂದ ಕೈ ಹಾಗೂ ಬಾಹುಗಳು ಕ್ರೀಯಾಶೀಲ ವಾಗಲಿವೆ.
ಅಷ್ಟೇ ಅಲ್ಲದೇ, ಈ ಗೇಮ್‌ನ ಹಲವಾರು ದೃಶ್ಯಗಳು  ಈ ಕಾಯಿಲೆಯಿಂದ ಸವಾಲುಗಳನ್ನು ಎದುರಿಸುತ್ತಿರುವವರು ಚೇತರಿಸಿಕೊಳ್ಳಲು ಪೂರಕ ವಾದ ಪ್ರಯೋಜನಕಾರಿ  ಅಂಶಗಳನ್ನು ಹೊಂದಿವೆ ಎನ್ನತ್ತದೆ ಈ ಸಂಶೋಧಕರ ತಂಡ.
ಉದಾಹರಣೆಗೆ; ನದಿಯಲ್ಲಿ ದೋಣಿ ಪೆಡಲ್ ಮಾಡುವುದು, ಗುಹೆ ಯೊಳಗಿನ ಬಾವಲಿಗಳನ್ನು ಓಡಿ ಸುವುದು, ನೀರಿನೊಳಗಿನ ಬಾಟಲಿ ತಡಕಾಡಿ ಪಡೆಯುವುದು, ಮೀನು ಹಿಡಿಯುವುದು, ವೇಗವಾಗಿ ತೂರಿ ಬರುವ ಕಲ್ಲುಗಳಿಂದ ತಪ್ಪಿಸಿಕೊಳ್ಳು ವುದು, ಪ್ಯಾರಾಚ್ಯೂಟ್‌ನಿಂದ ಧುಮುಕು ವುದು, ದೊಡ್ಡ ಪೆಟ್ಟಿಗೆ ತುಂಬಿರುವ ನಿಧಿಯನ್ನು ಅವುಚಿಕೊಳ್ಳುವುದು... ಹೀಗೆ ಹಲವಾರು ಪರಿಣಾಮಕಾರಿ ದೃಶ್ಯಗಳನ್ನು ರೋಗಿಗಳು  ಅನುಸರಿಸು ವುದರಿಂದ ಅವರಿಗರಿವಿಲ್ಲದಂತೆಯೇ ಅವರಲ್ಲಿ ಹೊಸತನ ಮೂಡುತ್ತದೆ ಎನ್ನುವುದು ಈ ಸಂಶೋಧಕರ ತಂಡದ ಪ್ರತಿಪಾದನೆ.
ಈ ಗೇಮ್‌ನ ಚಿಕಿತ್ಸೆಯ ವೇಳಾಪಟ್ಟಿಯುದ್ದಕ್ಕೂ ರೋಗಿಯು  ಕಾಯಿಲೆ ಪೀಡಿತ ಕೈಗೆ ಮೆತ್ತನೆಯ ತೆರೆದ ಬೆರಳುಗಳ ಕೈಗವುಸು ಧರಿಸಬೇಕು. ಇದರಿಂದ ಚಿಕಿತ್ಸೆಯು ಬಹಳ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಸಂಶೋಧಕರು.
ದೈನಂದಿನ ಚಟುವಟಿಕೆಗಳನ್ನು ಪುನಃ ಕಲ್ಪಿಸಿಕೊಡುವ ಈ ಉಪಯುಕ್ತ ಗೇಮ್ ಚಿಕಿತ್ಸೆಯು ರೋಗಿಗೆ ದುರ್ಬಲಗೊಂಡ ಅಂಗಗಳ ಬಳಕೆಗೆ ಪ್ರಚೋದಿಸುವುದ ರೊಂದಿಗೆ ನಿತ್ಯ ಚಟುವಟಿಕೆಗಳಿಗೆ ನಿಷ್ಕ್ರಿಯಗೊಂಡಿರುವ ಕೈ, ತೋಳುಗಳನ್ನು ಉಪಯೋಗಿಸಲು ಪ್ರೇರೇಪಿಸಿ ಸಮಸ್ಯೆಗೆ ಪರಿಹಾರ ಒದಗಿಸಲು ಸಹಾಯಕವಾಗುತ್ತದೆ.
ಈ ವಿನೂತನ ಮಾದರಿಯ ಗೇಮ್‌ ಚಿಕಿತ್ಸೆ ಪಡೆದುಕೊಂಡವರನ್ನು ಪರೀಕ್ಷೆಗೆ ಒಳಪಡಿಸಿದಾಗ ಸಾಂಪ್ರದಾಯಿಕ ಸಿಐ ಚಿಕಿತ್ಸೆಯಷ್ಟೇ ಸಕಾರಾತ್ಮಕವಾದ ಪರಿಣಾಮಗಳು ಕಂಡುಬಂದಿವೆ. ಸ್ನಾಯುಗಳ ಚಲನೆಯಲ್ಲಿಯೂ ವೇಗ ವೃದ್ಧಿಸಿರುವುದು ಪತ್ತೆಯಾಗಿದೆ ಎನ್ನುತ್ತಾರೆ ಗೌತಿಯರ್.
ಈ ಚಿಕಿತ್ಸೆಯು ರೋಗಿಗೆ ತನ್ನ ಸ್ವಗೃಹದಲ್ಲಿಯೇ ಉನ್ನತ ಗುಣಮಟ್ಟದ ಸ್ನಾಯು ಚಲನೆಯ ಅಭ್ಯಾಸವನ್ನು ಒದಗಿಸಲಿದೆ. ಇದರಿಂದ ಹೆಚ್ಚಿನ ಪ್ರೇರಣೆ, ಬೇಗ ಸಮಯವನ್ನು ಕಳೆ ಯುವುದು ಸೇರಿದಂತೆ ಉತ್ತೇಜಕ ಸವಾಲುಗಳನ್ನು ಬೇಸರವಿಲ್ಲದೆ ಎದುರಿ ಸಲು ಕಲಿತಿರುವುದಾಗಿ ಹಲವಾರು ರೋಗಿಗಳು ತಿಳಿಸಿದ್ದಾರೆ.
(ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ನವೆಂಬರ್ 20, 2013 ರಂದು ಪ್ರಕಟವಾದ ಲೇಖನ)

No comments:

Post a Comment