Sunday, December 1, 2013

ಗುರುದಕ್ಷಿಣೆಯ ಪ್ರದಕ್ಷಿಣೆ



ಕಲಾಕೃತಿಗಳ ಮಾಹಿತಿ ನೀಡುತ್ತಿರುವ ಗೌತಮ್ ಬಸಕ್
ಜೀವನದ ಸನ್ಮಾರ್ಗವನ್ನು ತೋರಿ ಭವಿಷ್ಯ ರೂಪಿಸುವ ಗುರುವಿಗೆ ಕೈಲಾದ ಮಟ್ಟಿಗೆ ಗುರುದಕ್ಷಿಣೆ ನೀಡಬೇಕೆನ್ನುವುದು ಪ್ರತಿಯೊಬ್ಬ ಶಿಷ್ಯನ ಬಯಕೆ.

ಅದರಂತೆಯೇ, ತನ್ನ ಗರಡಿಯಲ್ಲಿ ಪಳಗಿದ ಶಿಷ್ಯರು ತನ್ನನ್ನು ಮೀರಿಸುವಂತಾಗಲಿ ಎನ್ನುವುದು ಪ್ರತಿಯೊಬ್ಬ ಗುರುವಿನ ಹೆಬ್ಬಯಕೆ.
ಇಂತಹ ಹೆಬ್ಬಯಕೆ ಇಟ್ಟುಕೊಂಡು ನಗರದಲ್ಲಿ ಅನೇಕ ವರ್ಷಗಳಿಂದ ‘ದೃಷ್ಟಿ ಸ್ಕೂಲ್ ಆಫ್ ಫೋಟೊಗ್ರಫಿ’ ಎಂಬ ಛಾಯಾಗ್ರಹಣ ತರಬೇತಿ ಸ್ಟುಡಿಯೊ ನಡೆಸುತ್ತಿರುವವರು ಗೌತಮ್ ಬಸಕ್. ಬಂಗಾಳ ಮೂಲದವರಾದ ಗೌತಮ್ ಪ್ರಸ್ತುತ ಛಾಯಾಗ್ರಹಣ ತರಬೇತಿಯಲ್ಲಿ ತಮ್ಮದೇ ಛಾಪು ಮೂಡಿಸಿದವರು.
ಗೌತಮ್ ಸ್ಕೂಲ್‌ನಲ್ಲಿ  ಇತ್ತೀಚಿಗಷ್ಟೇ ಛಾಯಾಗ್ರಹಣ ತರಬೇತಿ ಪೂರ್ತಿಗೊಳಿಸಿದ ಒಡಿಶಾದ ರಾಜಕಮಲ್ ಸಾಹು, ಗುಜರಾತ್‌ನ ಸಿದ್ಧಿ ಜತಾನಿಯಾ, ಜಮ್ಮು ಮತ್ತು ಕಾಶ್ಮೀರದ ಆಕಾಶ್ ಮಹಾಜನ್ ಹಾಗೂ ಬೆಂಗಳೂರಿನ ಚರಣ್ ಕುಮಾರ್ ಅವರು ಸಂಪ್ರದಾಯದಂತೆ ತಮ್ಮ ಗುರುವಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ದೇಶದ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದು ತಂದು, ‘ಗುರುದಕ್ಷಿಣಾ’ ಎಂಬ ಶೀರ್ಷಿಕೆಯಡಿ ಚಿತ್ರಕಲಾ ಪರಿಷತ್‌ನಲ್ಲಿ ಮೂರು ದಿನಗಳ ಪ್ರದರ್ಶನ ಏರ್ಪಡಿಸಿದ್ದಾರೆ.
ಬಾಲ್ಯದಲ್ಲಿಯೇ ಕಾಡುತ್ತಿದ್ದ ಛಾಯಾಗ್ರಹಣದ ಕನಸಿನ ಬೆನ್ನುಹತ್ತಿ ಅದನ್ನು ಸಾಕಾರಗೊಳಿಸಲು ಬಂದ ರಾಜಕಮಲ್‌ ಅವರನ್ನು ತರಬೇತಿ ಹೊಸ ಮನುಷ್ಯನನ್ನಾಗಿ ಮಾಡಿದೆಯಂತೆ.
ಜಗತ್ತು ಬದಲಾದಂತೆ ಛಾಯಾಗ್ರಹಣದ ತಂತಜ್ಞಾನವು ಕೂಡ ವಿಸ್ಮಯಗೊಳಿಸುವ ರೀತಿಯಲ್ಲಿ ಬದ ಲಾಗುತ್ತಿದ್ದು, ಗುರುದಕ್ಷಿಣೆಯ ಪಯಣದಲ್ಲಿ ಹೆಕ್ಕಿ ತಂದ ಹಲವಾರು ಚಿತ್ರಗಳಿಗೆ ನಾವು ತಂತ್ರಜ್ಞಾನದ ಸಹಾಯದಿಂದ ‘ಸ್ಪೆಶಲ್ ಎಫೆಕ್ಟ್’ ನೀಡಿ  ಹೊಸತನ ಕಂಡುಕೊಂಡಿದ್ದೇವೆ. ಐತಿಹಾಸಿಕ ಸ್ಥಳಗಳಾದ ಹಂಪಿ, ಲೇಪಾಕ್ಷಿ ನನಗೆ ತುಂಬಾನೇ ಖುಷಿ ನೀಡಿದವು ಎನ್ನುತ್ತಾರೆ.
ಬಿಷಪ್ ಕಾಟನ್ ಸ್ಕೂಲ್‌ನಲ್ಲಿ ಪತ್ರಿಕೋದ್ಯಮ ಪದವಿ ಪಡೆದು, ಛಾಯಾ ಗ್ರಹಣದ ಹುಚ್ಚು ಹಿಡಿಸಿಕೊಂಡು ಗೌತಮ್ ಗರಡಿ ಸೇರಿದವರು ಸಿದ್ಧಿ ಜತಾನಿಯಾ. ‘ಈ ತರಬೇತಿ ಮತ್ತು ತಿರುಗಾಟ ನನ್ನ ಒಳನೋಟಕ್ಕೊಂದು ಹೊಸ ರೂಪ ನೀಡಿದೆ’ ಎನ್ನುತ್ತಾರೆ ಅವರು.
ಬಿ.ಎಸ್ಸಿ ಪದವಿ ಮುಗಿಸಿ ಮುಂದೇನು? ಎಂಬ ಪ್ರಶ್ನೆಯೊಂದಿಗೆ ಸುಮ್ಮನೆ ಆರು ತಿಂಗಳ ಕಳೆದ ಸುಂದರ ಕಣಿವೆ ಪ್ರದೇಶದ ಹುಡುಗ ಆಕಾಶ್‌ಗೆ ಕೊನೆಗೆ ಹೊಳೆದದ್ದು ಛಾಯಾಗ್ರಹಣ. ಈಗಾಗಲೇ ತಂದೆ, ಅಣ್ಣ ಕೂಡ ಇದೇ ದಾರಿಯಲ್ಲಿರುವುದರಿಂದ ಅವರ ಹೆಜ್ಜೆಯಲ್ಲಿಯೇ ಸಾಗಬೇಕೆನ್ನುವುದು ಇವರ ಕನಸು.
ಅದಕ್ಕಾಗಿ ಉತ್ತಮ ಛಾಯಾಗ್ರಹಣದ ತರಬೇತಿ  ಸಂಸ್ಥೆಗಳಿಗಾಗಿ ಹುಡುಕಾಟ ನಡೆಸಿದಾಗ ಕಣ್ಣಿಗೆ ಬಿದ್ದಿದ್ದು ‘ದೃಷ್ಟಿ ಸ್ಕೂಲ್ ಆಫ್ ಫೋಟೊಗ್ರಫಿ’. ಗೌತಮ್ ಅವರ ಮಾರ್ಗದರ್ಶನದಲ್ಲಿ ಆಕಾಶ್‌ಗೆ ಛಾಯಾಗ್ರಹಣದ ಹೊಸ ಹೊಳಹುಗಳು ಮೂಡಿದವಂತೆ. ತಿರುಗಾಟದಲ್ಲಿ ತಮಗೆ ತುಂಬಾ ಇಷ್ಟವಾದ ಸ್ಥಳ ರಾಜಸ್ತಾನ ಎನ್ನುತ್ತಾರೆ.
‘ಗುರುದಕ್ಷಿಣೆ’ಗೆಂದೇ ಪ್ರದಕ್ಷಿಣೆ ನಡೆಸಿ ಸೆರೆಹಿಡಿದು ತಂದಿರುವ ಈ ಚಿತ್ರಗಳು ಒಂದರ್ಥದಲ್ಲಿ ಗುರುವಿಗೆ ತಕ್ಕ ದಕ್ಷಿಣೆಯಾದರೆ, ಇನ್ನೊಂದು ಅರ್ಥದಲ್ಲಿ ಭರವಸೆಯ ಬೆಳಕಿನ ಬಿಂಬಗಳಂತಿವೆ.
ಪ್ರದರ್ಶನವು ಶನಿವಾರ ಸಂಜೆ 7.30ಕ್ಕೆ ಕೊನೆಗೊಳ್ಳಲಿದೆ.
(ಪ್ರಜಾವಾಣಿ ದಿನಪತ್ರಿಕೆ ಮೆಟ್ರೊ ಪುರವಣಿಯಲ್ಲಿ ಶನಿವಾರ, ನವೆಂಬರ್ 30, 2013 ರಂದು ಪ್ರಕಟವಾದ ಲೇಖನ)

No comments:

Post a Comment