Sunday, November 10, 2013

ವಿಡಿಯೊ ಗೇಮ್ಸ್‌ನಿಂದ ವೃದ್ಧರು ಚುರುಕು!


ಜೀವನದ ಸಂಧ್ಯಾಕಾಲದಲ್ಲಿ ವಯೋ ಸಹಜ ಮುಪ್ಪು ಆವರಿಸಿಕೊಳ್ಳುವುದು ಅರ್ಥವಾಗುತ್ತಿದ್ದಂತೆಯೇ ಅಲ್ಲಿಯವರೆಗೆ ಕ್ರಿಯಾಶೀಲವಾಗಿರುವ ಮನುಷ್ಯನಿಗೆ ತನಗರಿವಿಲ್ಲದಂತೆಯೇ ತಾನಿನ್ನು ಹಳತಾದೆ, ತನ್ನಿಂದಾವ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎನ್ನುವ ಮಾನಸಿಕ ಕೊರಗಿನ ಜತೆಯೇ, ಚುರುಕುತನ ಮಾಯವಾಗಿ ಒಂದು ರೀತಿಯ ಜಡತ್ವ ಆವರಿಸಿ ಬಿಡುತ್ತದೆ.

ಉತ್ಸಾಹದ ಬುಗ್ಗೆಯಾಗಿ ಕಳೆದ ಬಾಲ್ಯ, ತಾರುಣ್ಯದ ದಿನಗಳನ್ನು ನೆನೆದು ಅಸಹಾಯಕತೆಯಿಂದ ಪರಿತಪಿಸುವ ಬಹುತೇಕ ವೃದ್ಧರು ಗಾಳಿಹೋದ ಬಲೂನಿನಂತಾಗಿರುತ್ತಾರೆ. ಹೀಗೆ ಹತಾಶರಾಗುವ ಇಂತಹ ವೃದ್ಧರು ಒಂದೊಮ್ಮೆ ವಿಡಿಯೊ ಗೇಮ್ಸ್‌ ಆಡಲಾರಂಭಿಸಿದರೆ ಅವರಲ್ಲಿ ಚುರುಕು ತನ ಮೂಡುವ ಜತೆಗೆ ಅವರ ದೈಹಿಕ ಸಾಮರ್ಥ್ಯ ಕೂಡ ವೃದ್ಧಿಸುತ್ತದೆ ಎಂದು ಹೇಳುತ್ತಾರೆ ಅಮೆರಿಕದ ಅಯೋವಾ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧಕರು.

ವೃದ್ಧರಲ್ಲಿನ ಚಟುವಟಿಕೆ ಕುರಿತು ಸಂಶೋಧನೆ ಕೈಗೊಂಡಿರುವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ತಂಡ ವಯೋವೃದ್ಧರಿಗಾಗಿ “Living well through Intergenerational Fitness and Exercise” (LIFE) ಎಂಬ 8 ವಾರಗಳ ಕಾರ್ಯಾಗಾರವೊಂದನ್ನು ಹಮ್ಮಿಕೊಂಡಿತ್ತು. ಅದರಲ್ಲಿ ಟೆನಿಸ್, ಬೌಲಿಂಗ್‌ನಂತಹ ವಿಡಿಯೊ ಗೇಮ್ಸ್‌ಗಳೊಂದಿಗೆ ದೇಹದ ಶಕ್ತಿವೃದ್ಧಿಗೆ ಪೂರಕವಾದ ವ್ಯಾಯಾಮವನ್ನೂ ಸಂಯೋಜಿಸಿ ಪ್ರಯೋಗ ನಡೆಸಿತು.

‘ನಾವು ಉಪಯೋಗವಿಲ್ಲದವರು’ ಎಂದು ತಮ್ಮಷ್ಟಕ್ಕೇ ಭಾವಿಸಿಕೊಂಡ, 60 ವರ್ಷ ಮೀರಿದ ಹಿರಿಯರೇ ಭಾಗವಹಿಸಿದ್ದ ಈ ಕಾರ್ಯಾಗಾರದಲ್ಲಿ ಎಲ್ಲ ವೃದ್ಧರ ದೈಹಿಕ ಚಟುವಟಿಕೆಗಳ ಮಟ್ಟ ವನ್ನು ತರಬೇತಿಗೂ ಮೊದಲು ಹಾಗೂ ನಂತರದಲ್ಲಿ ಪರೀಕ್ಷೆಗೆ ಒಳಪಡಿಸಿದ ಸಂಶೋಧಕರು, ವಿಡಿಯೊ ಗೇಮ್ಸ್‌ನಿಂದ ವೃದ್ಧರು ‘ಚೂಟಿ’ಯಾಗುತ್ತಾರೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಆರಂಭದಲ್ಲಿ ಚಟುವಟಿಕೆಯೇ ಇಲ್ಲದಂತಿದ್ದ ಶೇ 52ರಷ್ಟು ಹಿರಿಯರು ಪ್ರಾಯೋಗಿಕ ಕಾರ್ಯಾಗಾರದ ಕೊನೆ ಹಂತದಲ್ಲಿ ಉತ್ಸಾಹದ ಚಿಲುಮೆಗಳಂತೆ ಕಂಡುಬಂದರು ಎನ್ನುತ್ತಾರೆ ಕಾರ್ಯಾಗಾರದ ಫಲಿತಾಂಶ ಕುರಿತು ಆರಂಭದಲ್ಲಿ ಅನುಮಾನ ಹೊಂದಿದ್ದ ದೇಹಚಲನಾ ಶಾಸ್ತ್ರದ ಪ್ರಾಧ್ಯಾಪಕರಾದ ವಿಜ್ಞಾನಿ ವಾರೆನ್ ಫ್ರಾಂಕಿ.

ದೈಹಿಕ ಸಾಮರ್ಥ್ಯದ ಪ್ರಯೋಜನ ಗಳು ಮತ್ತು ಅದರ ಲಾಭವನ್ನು ಅರಿತುಕೊಂಡು ಜನರು ಅದನ್ನು ಉಳಿಸಿ ಕೊಳ್ಳುವಂತೆ ಪ್ರೋತ್ಸಾಹಿಸುವ ಈ ಕಾರ್ಯಾಗಾರದ ಫಲಿತಾಂಶ ಕಂಡು ವಾರೆನ್ ಫ್ರಾಂಕಿ ಆಶ್ಚರ್ಯ ವ್ಯಕ್ತ ಪಡಿಸುತ್ತಾರೆ.

‘ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲಿ ವೃದ್ಧರು ಇತರರೊಡನೆ ಬೆರೆತು ಪರಸ್ಪರ ಆಟಗಳನ್ನು ಆಡುವ ಮೂಲಕ ತಮ್ಮ ಮೆದುಳಿಗೆ ಕೆಲಸ ನೀಡಿದರೆ ಇದ ರಿಂದ ತುಂಬಾ ಸಹಾಯ ವಾಗುತ್ತದೆ’ ಎಂದು ಹೇಳುತ್ತಾರೆ ವಿಶ್ವವಿದ್ಯಾಲಯದ ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮುಪ್ಪುಶಾಸ್ತ್ರ ವಿಭಾಗದ ನಿರ್ದೇಶಕರಾದ ಜೆನ್ನಿಫರ್ ಮಾರ್ಗರೇಟ್.

ತಂತ್ರಜ್ಞಾನ ಕುರಿತಂತೆ ಹಿರಿಯ ನಾಗರಿಕರಲ್ಲಿರುವ ಭಯ ಮತ್ತು ಕಾರ್ಯಾಗಾರದ ತರುವಾಯ ನಿರಂತರವಾಗಿ ವಿಡಿಯೊ ಗೇಮ್ಸ್‌ ಹೇಗೆ ಬಳಸುವುದು ಎಂಬ ಅಳುಕಿನ ಅಂಶಗಳನ್ನು ಪರಿಗಣಿಸಿ ಈ ಕಾರ್ಯಾಗಾರದಲ್ಲಿ ಪ್ರಮುಖವಾಗಿ ಪ್ರೌಢಶಾಲೆ ಮತ್ತು ಕಾಲೇಜು ಹಂತದ ದೈಹಿಕ ಶಿಕ್ಷಕರಿಗೆ ಪ್ರಾಮುಖ್ಯತೆ ನೀಡಲಾಗಿದೆ.

ತರ್ಕ ರಹಿತವಾಗಿ ರೂಢಿಸಿಕೊಂಡು ಬರುತ್ತಿರುವ ಅಭಿಪ್ರಾಯಗಳನ್ನು ಅಳಿಸಿ ಹಾಕುವ ಮತ್ತು ವಯೋ ತಾರತಮ್ಯ ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರದಲ್ಲಿ ಹಿರಿಯರು ಮತ್ತು ಕಿರಿಯರ ಮಧ್ಯೆ ಪರಸ್ಪರ ಸಂವಾದಕ್ಕೆ ಅವಕಾಶವನ್ನೂ ಕಲ್ಪಿಸಲಾಗಿತ್ತು.

ಕಾರ್ಯಾಗಾರ ವೇಳೆ ವಯಸ್ಕರಲ್ಲಿ ಹಿರಿಯರ ಭಾವನೆಗಳಿಗೆ ಪ್ರಾಮುಖ್ಯತೆ ನೀಡಬೇಕೆನ್ನುವ ಮನೋಭಾವದಲ್ಲಿ ಬದ ಲಾ ವಣೆ ಆಗಿರುವುದನ್ನೂ ಸಂಶೋ ಧಕರು ಕಂಡುಕೊಂಡಿ ದ್ದಾರೆ. ಈ ಸಂಶೋಧನೆಯ ಫಲಿತಾಂಶಗಳು ‘Journal of Aging and Physical Activity’ ನಲ್ಲಿ ಪ್ರಕಟವಾಗಿವೆ.

(ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ನವೆಂಬರ್ 06, 2013 ರಂದು ಪ್ರಕಟವಾದ ಲೇಖನ)

No comments:

Post a Comment