Sunday, November 10, 2013

ಮೊದಲ ಜೈವಿಕ ಯಂತ್ರಮಾನವ


ದಿನೇ ದಿನೇ ಅತಿಯಾಗಿ ಹೆಚ್ಚುತ್ತಿರುವ ಕೈಗಾರಿಕೀಕರಣ, ಯಾಂತ್ರೀಕರಣಗಳ ಮಧ್ಯೆ ಸಿಲುಕಿರುವ ಮನುಷ್ಯ ಇಂದು ಅಕ್ಷರಶಃ ಒಂದರ್ಥ ದಲ್ಲಿ ಯಂತ್ರಮಾನವನಂತೇ ಆಗಿಬಿಟ್ಟಿದ್ದಾನೆ ಎನ್ನುವುದು ಅನುಭವಸ್ಥರ ನುಡಿ.

ಈ ನುಡಿಯನ್ನೇ ಪ್ರತಿಧ್ವನಿಸುವಂತೆ ಮಾನವನಿಂದ ಹೆಚ್ಚಿನ ಮಟ್ಟದಲ್ಲಿ ತಂತ್ರಜ್ಞಾನದ ಪ್ರಯೋಗಕ್ಕೆ ಒಳಗಾಗುತ್ತಿರುವ ಯಂತ್ರಗಳಿಗೆ ಇಂದು ಖುದ್ದು ‘ಮಾನವರೇ ಆಗಿಬಿಡುವ’ ಭಾಗ್ಯ ಲಭಿಸುವಂತಿದೆ.

ಇದಕ್ಕೆ ಇತ್ತೀಚಿನ ಉದಾಹರಣೆ ಎಂಬಂತೆ ಇಂಗ್ಲೆಂಡ್‌ನ ಎಲೆಕ್ಟ್ರಾನಿಕ್ಸ್‌ ಕ್ಷೇತ್ರದ ತಂತ್ರಜ್ಞರ ತಂಡವೊಂದು ಮನುಷ್ಯರಂತೆಯೇ ಮಾತನಾಡುವ, ನಡೆದಾಡುವ ಹಾಗೂ ಹೃದಯವನ್ನೂ ಹೊಂದಿ, ಅದರ ಬಡಿತವನ್ನೂ ಕೇಳಿಸಿಕೊಳ್ಳುವ ಜಗತ್ತಿನ ಮೊದಲ ಜೈವಿಕ ಯಂತ್ರ ಮಾನವನನ್ನು ಸೃಷ್ಟಿಸಿದೆ!

‘ಮಾನವ ತದ್ರೂಪಿ ಜೈವಿಕ ಯಂತ್ರಮಾನವ. ಇದು ನಂಬಲು ತುಸು ಕಷ್ಟವೇ ಎನಿಸಿದರೂ ನೀವಿದನ್ನು ನಂಬಲೇಬೇಕು’ ಎನ್ನುತ್ತಾರೆ ಈ ವಿಸ್ಮಯಕಾರಿ ಯಂತ್ರ ಮಾನವನ ಸೃಷ್ಟಿಕರ್ತ, ಇಂಗ್ಲೆಂಡ್‌ನ ‘ಷ್ಯಾಡೊ ರೋಬೊ’ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ರೋಬೊ ಎಂಜಿನಿಯರ್ ಆಗಿರುವ ರಿಚರ್ಡ್ ವಾಕರ್ ಹಾಗೂ ಅವರ ಸಹೋದ್ಯೋಗಿ ಮ್ಯಾಥ್ಯೂ ಗಾಡೆನ್.
ವಿಶ್ವದ ವಿವಿಧೆಡೆ ಇರುವ ಕೃತಕ ಅಂಗಗಳ ತಯಾರಕರ ಪೈಕಿ ಪ್ರಮುಖವಾದ 17 ಕಂಪೆನಿಗಳು ನೀಡಿದ ಸಹಾಯಹಸ್ತದಿಂದ ಈ ಜೈವಿಕ ಯಂತ್ರ ಮಾನವನನ್ನು ಸೃಷ್ಟಿಸಿದ್ದು, ಇದಕ್ಕಾಗಿ ತಗುಲಿದ ವೆಚ್ಚ 10 ಲಕ್ಷ ಅಮೆರಿಕನ್‌ ಡಾಲರ್ (ಸುಮಾರು ರೂ.6.4 ಕೋಟಿ).

ಅತಿಯಾದ ತಂತ್ರಜ್ಞಾನದ ಬಳಕೆಯಿಂದ ಈಗಾಗಲೇ ಕೋಟ್ಯಂತರ ಮಾನವರೇ ನಿರುದ್ಯೋಗಿಗಳಾಗುತ್ತಿರುವಾಗ ಇಂತಹ ‘ಮಾನವ ತದ್ರೂಪಿ’ ಜೈವಿಕ ಯಂತ್ರಮಾನವನನ್ನು ಸೃಷ್ಟಿಸುವ ಅಗತ್ಯ ಇತ್ತೇ? ಎಂದು ಯಾರಾದರೂ ಪ್ರಶ್ನಿಸ ಬಹುದು.
ಇಂತಹ ಪ್ರಶ್ನೆಗಳಿಗೆ ವಾಕರ್ ಅವರು ‘ವೈದ್ಯಕೀಯ ವಿಜ್ಞಾನ ಎಷ್ಟೊಂದು ಮುಂದುವರಿದಿದೆ ಎಂಬುದನ್ನು ತೋರಿಸುವುದಕ್ಕಷ್ಟೇ ಈ ಪ್ರಯತ್ನ ಮಾಡಲಾಗಿದೆ’ ಎಂದು ಸಮಾಧಾಹ ಹೇಳುತ್ತಾರೆ.

‘ನಮ್ಮ ದೊಡ್ಡ ಕೆಲಸವೆಂದರೆ ಕೈ–ಕಾಲು, ಕಣ್ಣು, ಕಿವಿ, ತಲೆ ಸೇರಿದಂತೆ ದೇಹಕ್ಕೆ ಅಗತ್ಯವಾದ ಅಂಗಗಳನ್ನು ಸಂಗ್ರಹಿಸುವುದೇ ಆಗಿತ್ತು. ಅವೆಲ್ಲವೂ ನಮಗೆ ತಲುಪಿದ ಆರು ವಾರಗಳಲ್ಲಿಯೇ ನಾವು ಈ ಯಂತ್ರಮಾನವನಿಗೆ ಜನ್ಮ ನೀಡಿದೆವು’ ಎನ್ನುತ್ತಾರೆ ವಾಕರ್.

ವಿಶ್ವದ ಅತ್ಯಂತ ಮುಂದುವರಿದ ತಂತ್ರಜ್ಞಾನವುಳ್ಳ ಜೈವಿಕ ಕೈಯೊಂದನ್ನು ಹೊಂದಿರುವ ಸ್ವಿಟ್ಜರ್ಲೆಂಡಿನ ಜ್ಯೂರಿಚ್ ವಿಶ್ವವಿದ್ಯಾಲಯದ ಸಾಮಾಜಿಕ ಮನೋವಿಜ್ಞಾನಿ ಬರ್ಟೋಲ್ಟ್ ಮೆಯೆರ್ ಅವರ ಸಲಹೆಯ ನಂತರ ವ್ಯಕ್ತಿಯ ಭೌತಿಕ ಅಂಶಗಳನ್ನೇ ಹೆಚ್ಚು ಗಮನದಲ್ಲಿಟ್ಟುಕೊಂಡು ಈ ಜೈವಿಕ ಯಂತ್ರ ಮಾನವನ ವಿನ್ಯಾಸವನ್ನು ರೂಪಿಸಿದ್ದೇವೆ ಎನ್ನುತ್ತದೆ ಈ ತಂತ್ರಜ್ಞರ ತಂಡ.

ಮೆಯೆರ್ ಧರಿಸಿರುವಂತಹ ಆಕಾರ–ಗಾತ್ರ, ಮೃದುತ್ವ ಇರುವಂತಹ ಕೈಗಳನ್ನೇ ಈ ಜೈವಿಕ ಯಂತ್ರಮಾನವನಿಗೆ ಅಳವಡಿಸಲಾಗಿದೆ. ಆ ಕೈಗಳ ಮಣಿಕಟ್ಟು ಸೇರಿದಂತೆ ಎಲ್ಲ ಬೆರಳುಗಳೂ ಸಾಮಾನ್ಯ ಮನುಷ್ಯರ ಅಂಗಗಳಂತೆಯೇ ಕಾರ್ಯನಿರ್ವಹಿಸುವಂತೆ ಇವೆ. ಜತೆಗೆ ಅವರ ಮುಖ ವನ್ನು ಹೋಲುವಂತೆಯೇ 3ಡಿ ತಂತ್ರಜ್ಞಾನದ ಸಹಾಯದಿಂದ ಈ ಮಾನವನ ಮುಖವನ್ನು ರೂಪಿಸಲಾಗಿದೆ.

ಜೈವಿಕ ಯಂತ್ರಮಾನವನ ಮಹತ್ವದ ಸೃಷ್ಟಿಯ ಈ ಪ್ರಕ್ರಿಯೆಯಲ್ಲಿ ಬೆನ್ನೆಲುಬಾಗಿ ನಿಂತಿರುವ ಮೆಯೆರ್ ಅವರು ಹೇಳುವಂತೆ ‘ಅವಗಢದಲ್ಲಿ ಅಥವಾ ಬೇರಾವುದೋ ಕಾರಣಗಳಿಂದಾಗಿ ದೇಹದ ಅಂಗಗಳನ್ನು ಕಳೆದುಕೊಂಡವರಿಗೆ ಪ್ರಾಸ್ತೆಟಿಕ್ ಅವಯವಗಳನ್ನು(ದೈಹಿಕ ಅಂಗನ್ಯೂನತೆಗಳನ್ನು ಸರಿಪಡಿಸಲು ಬಳಸುವ ಕೃತಕ ಅಂಗಗಳು) ಜೋಡಿಸಬಹುದು, ಅವರ ದೈಹಿಕ ನ್ಯೂನತೆಯನ್ನು ಸರಿಪಡಿಸಬಹುದು ಎಂದು ಜನಸಾಮಾನ್ಯರಿಗೆ ತಿಳಿಸುವುದು ಮತ್ತು ಈ ನಿಟ್ಟಿನಲ್ಲಿ ಒಬ್ಬ ವ್ಯಕ್ತಿಗೆ ಅಗತ್ಯವಾದ ದೇಹದ ಎಲ್ಲ ಪ್ರಾಸ್ತೆಟಿಕ್ ಅಂಗಗಳನ್ನೂ ಪಡೆಯುವ ದೃಷ್ಟಿಯಿಂದ ಈ ಜೈವಿಕ ಯಂತ್ರಮಾನವನ ಸೃಷ್ಟಿ ಕಾರ್ಯ ಕೈಗೊಳ್ಳಲಾಗಿದೆ’.

ಚಿಕ್ಕವರಿರುವಾಗ ಬಿರುಸಾದ ಹಿಮಗಾಳಿಗೆ ಸಿಲುಕಿ ಕಾಲುಗಳನ್ನು ಕಳೆದುಕೊಂಡ ‘ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ(ಎಂಐಟಿ) ಮೀಡಿಯಾ ಲ್ಯಾಬ್‌ನ ಜೈವಿಕ ತಂತ್ರಜ್ಞಾನ ವಿಭಾಗದ ಎಂಜಿನಿಯರ್ ಹಗ್ ಹೆರ್‌ ಅವರು ವಿನ್ಯಾಸಗೊಳಿಸಿ, ಧರಿಸಿರುವಂತಹ ಜೈವಿಕ ಮೊಣಕಾಲು ಹಾಗೂ ಪಾದಗಳನ್ನು ಬೆಡ್‌ಪೋರ್ಡ್‌ನ ‘ಬಯೋಮ್’ ನಿಂದ ಪಡೆದು ಈ ಯಂತ್ರಮಾನವನಿಗೆ ಜೋಡಿಸಲಾಗಿದೆ. ಜತೆಗೆ ನ್ಯೂಜಿಲೆಂಡ್‌ನ ರೆಕ್ಸ್ ಬಯೋನಿಕ್ಸ್ ಕಂಪೆನಿ ತಯಾರಿಸಿರುವ ಪ್ರಾಸ್ತೆಟಿಕ್ ಕಾಲುಗಳನ್ನು ಅಳವಡಿಸಲಾಗಿದೆ.

ಕೃತಕವಾದ ಹೃದಯ, ಶ್ವಾಸಕೋಶ, ಮೇದೋಜೀರಕ ಗ್ರಂಥಿ, ಗುಲ್ಮ, ಮೂತ್ರಪಿಂಡ, ರಕ್ತ ಎಲ್ಲವನ್ನೂ ಒಳಗೊಂಡ, ಕ್ರಿಯಾತ್ಮಕ ರಕ್ತಪರಿಚಲನಾ ವ್ಯವಸ್ಥೆಯು ಈ ಅಪರೂಪದ ಜೈವಿಕ ಮಾನವನಲ್ಲಿದೆ.

ಇಷ್ಟೆಲ್ಲ ಅವಯವಗಳನ್ನು ಪಡೆದರೂ ಈ ಮಾನವ ನಮ್ಮಂತೆ ದೈಹಿಕವಾಗಿ ಪರಿಪೂರ್ಣನಾಗಿಲ್ಲ ಎಂಬುದು ಸತ್ಯ. ಏಕೆಂದರೆ, ಆತನಲ್ಲಿನ್ನೂ ಮಾನವ ದೇಹದ ಪ್ರಮುಖ ಅಂಗಗಳಾದ ಯಕೃತ್ತು, ಜಠರ ಮತ್ತು ಕರುಳುಗಳ ಕೊರತೆ ಇದೆ. ಇವುಗಳನ್ನೂ ಪ್ರಯೋಗಾಲಯದಲ್ಲಿ ತಯಾರಿಸುವುದು ತುಂಬಾ ಸಂಕೀರ್ಣವಾದ ಕೆಲಸ ಎನ್ನುತ್ತಾರೆ ವಿಜ್ಞಾನಿಗಳು.

 ಮನುಷ್ಯನ ಮೆದುಳಿನ ಕೆಲವು ಕಾರ್ಯಗಳನ್ನು ಈ ಜೈವಿಕ ಯಂತ್ರಮಾನವನ ಮೆದುಳು ಅನುಕರಿಸುತ್ತದೆಯಂತೆ.
ಕ್ಯಾಲಿಫೋರ್ನಿಯಾದ ಸಿಲ್ಮಾರ್‌ನ ‘ಸೆಕೆಂಡ್ ಸೈಟ್’ ಕಂಪೆನಿ ಒದಗಿಸಿರುವ ಅಕ್ಷಿಪಟವನ್ನು ಹೊಂದಿರುವ ಈ ಮಾನವ ಧ್ವನಿಯನ್ನು ಗುರ್ತಿಸುವ ಜತೆಗೆ ಧ್ವನಿಯನ್ನು ಹೊರಡಿಸಬಲ್ಲ. ಈತನ ಮಾತುಕತೆ ಸರಳವಾಗಿ ನಡೆಯುವಂತೆ ಅತ್ಯಾಧುನಿಕ ವ್ಯವಸ್ಥೆಯುಳ್ಳ ಉಪಕರಣವೊಂದನ್ನು ಎಂಜಿನಿಯರ್ಗಳು ಈತನೊಳಗೆ ಅಡಗಿಸಿದ್ದಾರೆ.

ಈ ಜೈವಿಕ ಯಂತ್ರಮಾನವ ಅಕ್ಟೋಬರ್ 10ರಿಂದ 13ರವರೆಗೆ ನ್ಯೂಯಾರ್ಕ್‌ನಲ್ಲಿ ನಡೆದ ‘ಕಾಮಿಕ್‌ಕಾನ್ ಉತ್ಸವ’ನಲ್ಲಿ ತನ್ನ ಪ್ರಥಮ ಪ್ರದರ್ಶನ ನೀಡಿದ್ದಾನೆ. ಸದ್ಯ, ‘ಈತ’ನನ್ನು ವಾಷ್ಟಿಂಗ್ಟನ್‌ನಲ್ಲಿರುವ ಸ್ಮಿತ್ಸೋನಿಯನ್ ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
 
(ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಅಕ್ಟೋಬರ್ 30, 2013 ರಂದು ಪ್ರಕಟವಾದ ಲೇಖನ)

No comments:

Post a Comment