Tuesday, October 22, 2013

ಮಸಣ ಕಸದ ತಾಣ

ಹರಿಶ್ಚಂದ್ರ ಘಾಟ್ ಸ್ಮಶಾನ
ದು ಬದುಕಿನ ಯಾತ್ರೆ ಮುಗಿಸಿದವರ ಅಂತಿಮ ನಿಲ್ದಾಣ. ಅವರ ಕಟ್ಟಕಡೆಯ ಪಯಣ ತಮಗೆ ಸಂತೃಪ್ತಿ ಕೊಟ್ಟರೆ ಅವರ ಆತ್ಮಕ್ಕೆ ಶಾಂತಿ ಸಿಕ್ಕೀತು ಎಂಬ ಭಾವ. ಹಾರ, ತುರಾಯಿ, ಗಡದ್ದಾದ ಗದ್ದಿಗೆ, ಅಲಂಕೃತ ಚಟ್ಟ... ಇನ್ನು ಕೆಲವರದ್ದು ಅಂತಿಮ ಪಯಣವೂ ಮುಳ್ಳಿನ ಹಾದಿ.

 ಕಂಡ ಕಾಯಿಲೆಗೆ, ಅನುಭವಿಸಿದ ನರಕಯಾತನೆಗೆ ಸಾಕ್ಷಿಯಾಗಿದ್ದ ಹಾಸಿಗೆಯಲ್ಲೇ ಹೆಣವನ್ನೂ ಸುರುಳಿ ಸುತ್ತಿ ಚಟ್ಟದಲ್ಲಿಡಬೇಕಾದ ದುಃಸ್ಥಿತಿ... ಬಗೆ ಯಾವುದೇ ಆದರೂ ಪಾರ್ಥಿವ ಶರೀರ ಕೊನೆಯದಾಗಿ ಕಿಚ್ಚು ಹಚ್ಚಿಸಿಕೊಳ್ಳುವ ಮುನ್ನ ಆ ಎಲ್ಲಾ ಸಿಂಗಾರಗಳೂ ಕಸವಾಗಿ ಮಸಣವೆಂಬ ತೊಟ್ಟಿ ಸೇರುತ್ತವೆ. ನಿಜ, ನಗರದ ಸ್ಮಶಾನಗಳು ಅಕ್ಷರಶಃ ಕಸದ ತೊಟ್ಟಿಗಳಾಗಿರುವುದನ್ನು ಕಂಡರೆ ಅರೆರೆ ಎನ್ನಿಸುವುದು ಸಹಜ.

ಪ್ರವೇಶದ್ವಾರದಲ್ಲೇ ಸ್ವಾಗತಿಸುವ ಹರಕು ಹಾಸಿಗೆ, ಹರಿದ ಬಟ್ಟೆಯ ಗಂಟು, ಒಡೆದ ಮಡಿಕೆ, ಚೆಲ್ಲಾಪಿಲ್ಲಿಯಾಗಿ ಬಿದ್ದ ಗಜಗಾತ್ರದ ಹಾರ, ಹಾರಾಡುವ ಪ್ಲಾಸ್ಟಿಕ್ ಹಾಳೆ, ಎಲ್ಲೆಡೆ ಚದುರಿದ ತೆಂಗಿನ ಗರಿ, ಹಲಬಗೆಯಲ್ಲಿ ಅಲಂಕೃತ ಬಿದಿರಿನ ಚಟ್ಟಗಳು... ನಗರದ ಬಹುತೇಕ ಹಿಂದೂ ರುದ್ರಭೂಮಿಗಳಲ್ಲಿ ಕಂಡುಬರುವ ವಾತಾವರಣವಿದು.

 
ನಗರದ ಡಂಪಿಂಗ್ ಯಾರ್ಡ್‌ಗಳ ಸಾಲಿನಲ್ಲಿ ಸ್ಮಶಾನಗಳದ್ದು ಮುಂಚೂಣಿ ಸ್ಥಾನ. ಕಾಸಿಲ್ಲದೆ, ಯಾರ ಹಂಗೂ ಇಲ್ಲದೆ ಕಸ ಎಸೆದು ಬರಬಹುದಾದ ತಾಣಗಳಾಗಿವೆ ಸ್ಮಶಾನಗಳು. ಮೈಸೂರು ರಸ್ತೆ ಜನತಾ ಕಾಲೋನಿಯ ಸ್ಮಶಾನ ಇದಕ್ಕೆ ಉತ್ತಮ ಉದಾಹರಣೆ.

ಪ್ರವೇಶದ್ವಾರದಲ್ಲಿ ಎದುರಾಗುವ ಮಲಮೂತ್ರದ ರಾಶಿಯನ್ನು ಮೆಟ್ಟದೆ ಒಳಗೆ ಹೋಗಲು ಪರದಾಡಬೇಕು. ಆಮೇಲೆ ಕಟ್ಟಡಗಳ ತ್ಯಾಜ್ಯ ಮತ್ತು ಹೆಜ್ಜೆಹೆಜ್ಜೆಗೂ ಕಸದ ಗುಡ್ಡೆ ಬರಮಾಡಿಕೊಳ್ಳುತ್ತವೆ. ಅಕ್ಕಪಕ್ಕದ ನಿವಾಸಿಗಳು ತಮ್ಮ ಮನೆಗಳ ಹಸಿ ಮತ್ತು ಒಣ ತ್ಯಾಜ್ಯ ವಿಲೇವಾರಿಗೆ ಸ್ಮಶಾನವನ್ನು ‘ಸದ್ಬಳಕೆ’ ಮಾಡಿಕೊಂಡಿದ್ದಾರೆ! ತ್ಯಾಜ್ಯಗಳು ಇದ್ದ ಮೇಲೆ ಬೀದಿ ನಾಯಿಗಳು, ಬೀಡಾಡಿ ರಾಸುಗಳೂ ಇರಲೇಬೇಕಲ್ಲ?
 
ಜನತಾ ಕಾಲೋನಿಯ ಪಕ್ಕದಲ್ಲೇ ಇರುವ ಹಳೆಗುಡದಳ್ಳಿ ವ್ಯಾಪ್ತಿಯಲ್ಲಿ ಇನ್ನೆರಡು ಸ್ಮಶಾನಗಳಿದ್ದು, ಸ್ವಲ್ಪಮಟ್ಟಿಗೆ ಸ್ವಚ್ಛವಾಗಿವೆ. ತ್ಯಾಜ್ಯಗಳನ್ನು ಸುಡುವ ಪ್ರಯತ್ನವೂ ಇಲ್ಲಿ ನಡೆದಿದೆ.
 
‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಈ ಸ್ಮಶಾನಗಳಿಗೆ ಕೆಲವೊಮ್ಮೆ ದಿನವೊಂದಕ್ಕೆ ಅಧಿಕ ಸಂಖ್ಯೆಯಲ್ಲಿ ಅನಾಥ ಶವಗಳು ಬರುವುದೂ ಉಂಟು. ಅಂತಹ ಸಂದರ್ಭದಲ್ಲಿ ಸ್ವಲ್ಪವೇ ಗುಂಡಿ ತೋಡಿ ಹೆಣಗಳನ್ನು ಹೂಳುತ್ತಾರೆ. ಒಂದೇ ಗುಂಡಿಯಲ್ಲಿ ಐದಾರು ಶವಗಳ ಹೂತಿರುವುದನ್ನೂ ನಾವು ನೋಡಿದ್ದೇವೆ. ಆಗೆಲ್ಲ ರಾತ್ರಿ ವೇಳೆ ನಾಯಿಗಳು ಅನಾಥ ಶವಗಳ ಸಮಾಧಿಗಳನ್ನು ಕೆದರಿ, ಹೆಣಗಳನ್ನು ಅರೆಬರೆ ತಿಂದು ಹಾಕುತ್ತವೆ. ಆಮೇಲೆ ಅದನ್ನು ನೋಡುವವರೂ ಇಲ್ಲ, ವಿಲೇವಾರಿ ಮಾಡುವವರೂ ಇಲ್ಲ. ದುರ್ನಾತದಿಂದ ನಾವು ನರಕಯಾತನೆ ಪಡಬೇಕಾಗುತ್ತದೆ.
 
ಇದು ಒಂದು ಸಮಸ್ಯೆಯಾದರೆ, ಕತ್ತಲಾದ ಮೇಲೆ ಈ ಸ್ಮಶಾನಗಳಲ್ಲಿ ಅನೈತಿಕ ಚಟುವಟಿಕೆಗಳೂ ನಡೆಯುತ್ತವೆ. ಪುಂಡುಪೋಕರಿಗಳು ಚಾಕು, ಚೂರಿ ಹಿಡಿದುಕೊಂಡು ಓಡಾಡುತ್ತಿರುತ್ತಾರೆ. ಇದರಿಂದಾಗಿ ಈ ಪ್ರದೇಶದಲ್ಲಿ ರಾತ್ರಿ ಹೊತ್ತು ಪುರುಷರೂ ಓಡಾಡಲು ಆತಂಕಪಡುವಂತಾಗಿದೆ’ ಎಂದು ಹಳೆಗುಡ್ಡದಳ್ಳಿಯ ನಿವಾಸಿಯೊಬ್ಬರು ದೂರುತ್ತಾರೆ. ಈ ರೀತಿಯ ಭಯದ ವಾತಾವರಣದಿಂದಾಗಿ ಇಲ್ಲಿ ಕಾವಲುಗಾರರು ಇದ್ದೂ ಇಲ್ಲದಂತಾಗಿದ್ದಾರೆ ಎಂಬುದು ಪಾಲಿಕೆಯ ನೌಕರರೊಬ್ಬರ ಮಾತು.
 
ಹರಿಶ್ಚಂದ್ರ ಘಾಟ್‌ನಲ್ಲಿ...
ಗಾಯತ್ರಿನಗರದಲ್ಲಿರುವ ಹರಿಶ್ಚಂದ್ರ ಘಾಟ್ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರವೇ ಹೆಚ್ಚು ಬಳಕೆಯಾಗುವುದು. ಹೆಚ್ಚು ಬಳಕೆಯಲ್ಲಿರುವ ಸ್ಮಶಾನಗಳಲ್ಲೊಂದಾಗಿರುವ ಕಾರಣಕ್ಕೋ ಏನೋ ಇಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಆದರೂ ಪ್ರವೇಶದ್ವಾರದಲ್ಲೇ ಹರಕು ಚಾಪೆಗಳು, ಬಿದಿರಿನ ಚಟ್ಟಗಳು, ಹರಿದ ಉಡುಪುಗಳ ರಾಶಿ ವಿಲೇವಾರಿಯಾಗಬೇಕಿದೆ. ಈ ಸ್ಮಶಾನದ ಎದುರಲ್ಲೇ ಇರುವ ಲಿಂಗಾಯತರ ಸ್ಮಶಾನವಂತೂ ಅಕ್ಷರಶಃ ಕಸದ ತಾಣವಾಗಿದೆ.

 
ವಾರಕ್ಕೆರಡು ಬಾರಿ ಶುಚಿ ಕಾರ್ಯ
ಇಪ್ಪತ್ತೈದು ಎಕರೆ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಕಾಣವುದು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮುರುಕು ಚಟ್ಟ ಹಾಗೂ ಗಾದಿ, ಸೋಫಾ, ಹಾಸಿಗೆ ಮತ್ತಿತರ ತ್ಯಾಜ್ಯಗಳು. ಪರಿಸ್ಥಿತಿ ಹೀಗಿದ್ದರೂ ಇಲ್ಲಿನ ಸಿಬ್ಬಂದಿ, ‘ಎರಡು ಮೂರು ದಿನಕ್ಕೊಮ್ಮೆ ಎಲ್ಲಾ ತ್ಯಾಜ್ಯಗಳ್ನು ಗುಂಡಿಗೆ ಹಾಕಿ ಸುಡುತ್ತೇವೆ’ ಎಂದು ಸಮಜಾಯಿಷಿ ಕೊಡುತ್ತಾರೆ. ಅಲ್ಲಿನ ಕಸದ ರಾಶಿ ನೋಡಿದರೆ ಅವರ ಉತ್ತರ ವಾಸ್ತವಕ್ಕೆ ದೂರವಾದುದು ಎಂದು ಅರಿವಾಗುತ್ತದೆನ್ನಿ.


ಬೆಂಗಳೂರಿನಲ್ಲೇ ಅತಿದೊಡ್ಡ ಸ್ಮಶಾನವೆಂಬ ಹೆಗ್ಗಳಿಕೆ ಪಾತ್ರವಾಗಿರುವ ಕಲ್ಲಳ್ಳಿಯ ಸ್ಮಶಾನವಾದರೂ ಶುಚಿಯಾಗಿದ್ದೀತು ಎಂದು ಅಲ್ಲಿಗೆ ಭೇಟಿ ನೀಡಿದರೆ ಮತ್ತೆ ನಿರಾಸೆ. ಪ್ರವೇಶದ್ವಾರದಲ್ಲಿ ಕಾಣುವ ಗೋರಿಗಳ ಮೇಲೆಯೇ ದಂಡಿದಂಡಿಯಾಗಿ ಕಸ ಗುಡ್ಡೆ ಬಿದ್ದಿದೆ. ಕಸದಿಂದ ‘ರಸ’ವನ್ನು ಮೇಯಲು ಸ್ಪರ್ಧೆ ನಡೆಸುವ ಆಡುಗಳು, ನಿಮ್ಮ ಆಗಮನವನ್ನು ಕಂಡು ಕ್ಯಾರೇ ಅನ್ನುವುದಿಲ್ಲ.
 
ಹೀಗಿದ್ದರೂ ಸ್ಮಶಾನದ ‘ರೈಟರ್’ ಮುನಿರಾಜು ಅವರಿಗೂ ಪಾಲಿಕೆಯವರಂತೆಯೇ ಕಸ ಒಂದು ಸಮಸ್ಯೆಯಾಗಿ ಕಂಡೇ ಇಲ್ಲವಂತೆ. ‘ಪ್ರತಿವರ್ಷ ಶಿವರಾತ್ರಿಗೆ ಸ್ಮಶಾನ ಶುಚಿಗೊಳಿಸಲಾಗುತ್ತದೆ’ ಎಂದು ಜವಾಬು ನೀಡುತ್ತಾರೆ ಅವರು.
 
ಇಲ್ಲಿ ಎಲ್ಲವೂ ಸ್ವಚ್ಛ!
ಹೀಗೆ ಒಂದಷ್ಟು ರುದ್ರಭೂಮಿಗಳಿಗೆ ಎಡತಾಕಿ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿಗೆ ಕೈಗೊಂಡ ಕ್ರಮಗಳ ಕುರಿತು ಕೆದಕಿದರೆ ಹತಾಶರಾಗಬೇಕಾಗುತ್ತದೆ. ಆದರೆ ಇದೇ ಮಹಾನಗರದಲ್ಲಿರುವ ಮುಸಲ್ಮಾನ ಮತ್ತ ಕ್ರೈಸ್ತರ ಸ್ಮಶಾನಗಳು ಸ್ವಚ್ಛತೆಯ ಕಾರಣಕ್ಕೇ ಗಮನ ಸೆಳೆಯುತ್ತವೆ.

 
ಪಾರ್ಥಿವ ಶರೀರಗಳನ್ನು ಪೆಟ್ಟಿಗೆಯಲ್ಲಿರಿಸಿ ಹಾರ, ತುರಾಯಿಗಳಿಂದ ಸಿಂಗರಿಸಿ ಸ್ಮಶಾನಕ್ಕೆ ತಂದರೂ ದಫನ್ ಮಾಡುವ ಹೊತ್ತಿಗೆ ಅವುಗಳನ್ನೆಲ್ಲ ಅಲ್ಲಿರುವ ಕಸದ ತೊಟ್ಟಿಗೆ ಹಾಕುವ ಶಿಸ್ತನ್ನು ಪ್ರತಿಯೊಬ್ಬರೂ ಪಾಲಿಸುತ್ತಿರುವುದೇ ಇದಕ್ಕೆ ಕಾರಣ.
....
 
ನಮ್ಮ ಕಾಲೋನಿಯ ಸ್ಮಶಾನಕ್ಕೆ ನಮ್ಮ ತಂದೆಯ ಸಮಾಧಿಗೆ ಪ್ರತಿ ವರ್ಷ ಮಹಾಲಯ ಅಮಾವಾಸ್ಯೆ ದಿನ ಪೂಜೆ ಸಲ್ಲಿಸಲು ಹೋಗುತ್ತೇನೆ. ಅಲ್ಲಿರುವ ಗಲೀಜು ಕಂಡು ನನಗೆ ಸಂಕಟವಾಗುತ್ತದೆ. ನನ್ನಂತೆಯೇ ಅನೇಕರು ಈ ವೇದನೆ ಅನುಭವಿಸುತ್ತಿದ್ದಾರೆ. ಸಂಬಂಧ ಪಟ್ಟವರು ಈ ಕುರಿತು ಗಮನ ಹರಿಸಬೇಕೆನ್ನುವುದೇ ನನ್ನ ಮನವಿ.
-ಶ್ರೀನಿವಾಸ್ ಮೂರ್ತಿ, ಜನತಾ ಕಾಲೋನಿ ನಿವಾಸಿ

 
....
 
ಹೊಣೆ ನಮ್ಮದಲ್ಲ!
ಸ್ಮಶಾನಗಳ ನಿರ್ವಹಣೆ ನಡೆಯದೆ ಕಸದತೊಟ್ಟಿಗಳಾಗಿರುವ ಬಗ್ಗೆ ಪಾಲಿಕೆಯ ಅಧಿಕಾರಿಗಳನ್ನು ಕೇಳೋಣವೆಂದರೆ, ಪಾಲಿಕೆಯ ಆರೋಗ್ಯ ಇಲಾಖೆ, ಎಂಜಿನಿಯರಿಂಗ್ ವಿಭಾಗ ಮತ್ತು ಘನತ್ಯಾಜ್ಯ ವಿಲೇವಾರಿ ವಿಭಾಗಗಳ ಅಧಿಕಾರಿಗಳು ಪರಸ್ಪರರತ್ತ ಬೆರಳು ತೋರುತ್ತಾರೆಯೇ ವಿನಾ ಸಮರ್ಪಕ ಉತ್ತರ ನೀಡುವುದಿಲ್ಲ.


ಘನ ತ್ಯಾಜ್ಯ ವಿಲೇವಾರಿಯ ಹೊಣೆ ಹೊತ್ತ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿದ್ದರೆ ಸ್ಮಶಾನಗಳು ಅಧಿಕೃತ ಡಂಪಿಂಗ್ ಯಾರ್ಡ್ ಆಗುವ ದಿನ ದೂರವಿಲ್ಲ.

(ಪ್ರಜಾವಾಣಿ ದಿನಪತ್ರಿಕೆ ಮೆಟ್ರೊ ಪುರವಣಿಯಲ್ಲಿ ಮಂಗಳವಾರ, ಅಕ್ಟೋಬರ್ 22, 2013 ರಂದು ಪ್ರಕಟವಾದ ಲೇಖನ)

No comments:

Post a Comment