Wednesday, October 23, 2013

ವಿದ್ಯುತ್ ವಾಹಕವಾಗಿ ಜೇಡರಬಲೆ


ತನ್ನ ಆಹಾರಕ್ಕಾಗಿ ಬಲಿಷ್ಠ ‘ಹಂತಕ ಜಾಲ’ ನೇಯ್ದು, ಅದರಲ್ಲಿ ಸಿಕ್ಕಿಬೀಳುವ ಬಲಿಪಶುವಿನ ಮೇಲೆರಗಿ ತಿಂದು ತೇಗು ತ್ತದೆ ಜೇಡರ ಹುಳು. ಈ ಬೇಟೆಗಾಗಿ ವ್ಯೂಹ ರಚಿಸಿ ಬಹಳ ನೈಪುಣ್ಯತೆಯಿಂದ ನೇಯುವ ‘ಜೇಡರಬಲೆ’ ಕುರಿತು ಯಾರಿಗೆ ಗೊತ್ತಿಲ್ಲ?

ಗಟ್ಟಿಮುಟ್ಟಾದ ಮತ್ತು ಸ್ಥಿತಿ ಸ್ಥಾಪ ಕತ್ವ ಗುಣದೊಂದಿಗೆ ನ್ಯಾನೊ ಟ್ಯೂಬ್‌ನ ಅತಿಸೂಕ್ಷ್ಮ ಆಯಾಮವುಳ್ಳ ಈ ಜೇಡರ ಬಲೆಯ ಎಳೆಗಳಲ್ಲಿಯೂ ವಿದ್ಯುತ್ ಹರಿಸಬಹುದು ಎನ್ನುತ್ತದೆ ಇತ್ತೀಚಿನ ಒಂದು ವೈಜ್ಞಾನಿಕ ವರದಿ.
 
ಫ್ಲೋರಿಡಾ ಸ್ಟೇಟ್ ವಿಶ್ವವಿದ್ಯಾಲಯದ ಭೌತವಿಜ್ಞಾನಿ ಈಡನ್ ಸ್ಟೀವನ್ ಅವರು, ಜೇಡರಬಲೆ ಮತ್ತು ಇಂಗಾಲದ (ಕಾರ್ಬನ್) ನ್ಯಾನೊ ಟ್ಯೂಬ್‌ಗಳೊಂದಿಗೆ ನಡೆಸಿದ ಪ್ರಯೋಗದಲ್ಲಿ ಈ ನೂತನ ಆವಿಷ್ಕಾರದ ಹೊಳವನ್ನು ಪತ್ತೆ ಮಾಡಿದ್ದಾರೆ.
 
ಮೃದುತ್ವ, ಜೈವಿಕ ವಿಘಟನೆ, ಬಲಿಷ್ಠ ಪಾಲಿಮರ್ ಗುಣ ಮತ್ತು ಇಂಗಾಲದ ನ್ಯಾನೊ ಟ್ಯೂಬ್‌ಗಳ ಅಂಶಗಳು ಜೇಡರಬಲೆಯ ಎಳೆಗಳಲ್ಲಿ ಬಹಳ ಕ್ರಮಬದ್ಧವಾಗಿ ಇರುವುದು ಈ ಅಚ್ಚರಿಯ ಹಾಗೂ ಪರಿಸರ ಸ್ನೇಹಿ ಫಲಿತಾಂಶಕ್ಕೆ ಕಾರಣವಾಗಿವೆ.
 
‘ಒಂದೊಮ್ಮೆ ನಾವು ಮೂಲ ವಿಜ್ಞಾ ನದ ಜತೆಗೆ ಪ್ರಕೃತಿ ಹೇಗೆ ಕಾರ್ಯನಿರ್ವ ಹಿಸುತ್ತದೆ ಎಂಬುದನ್ನು ಅರಿತುಕೊಂಡು, ಈ ತಂತ್ರಜ್ಞಾನವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ದಾರಿ ಕಂಡುಕೊಳ್ಳುವ ಅಗತ್ಯ ವಿದೆ’ ಎನ್ನುತ್ತಾರೆ ಸ್ಟೀವನ್.

ಒಂದು ವೇಳೆ ಈ ಸುಲಭ ಮಾರ್ಗವನ್ನು ಕಂಡುಕೊಂಡರೆ ನಂತರದಲ್ಲಿ ಹೊಸ ತಂತ್ರಜ್ಞಾನ ಸೃಷ್ಟಿಸಲು ಬಳಸಬಹುದಾಗಿದೆ ಎನ್ನುತ್ತಾರೆ.
 
ಈ ಹೊಸ ಪ್ರಯೋಗದ ವೇಳೆ ಕಂಡುಬಂದ ಫಲಿತಾಂಶದ ವಿವರಗಳೆಲ್ಲವೂ ಸದ್ಯ ಆನ್‌ಲೈನ್ ರಿಸರ್ಚ್ ಜರ್ನಲ್ ‘ನೇಚರ್ ಕಮ್ಯೂನಿ ಕೇಷನ್’ನಲ್ಲಿ ಪ್ರಕಟಗೊಂಡಿವೆ.
 
ಜೇಡರಬಲೆಯ ಎಳೆಗಳಲ್ಲಿ ಇಂಗಾಲದ ನ್ಯಾನೊ ಟ್ಯೂಬ್‌ಗಳಿವೆ. ಅವನ್ನು ವಿದ್ಯುತ್ ವಾಹಕಗಳ ಪ್ರಾಯೋಗಿಕ ಅಪ್ಲಿಕೇಷನ್‌ಗಳಲ್ಲಿ ಬಳಸಿ ಪ್ರಯೋಗದ ಫಲಿತಾಂಶ ತಿಳಿಯಬೇಕಾಗಬಹುದು ಎಂದು ‘ಸೈನ್ಸ್ ಡೈಲಿ’ ವರದಿ ಮಾಡಿದೆ.
 
ನ್ಯಾನೊ ಟ್ಯೂಬನ್ನು ಒಂದು ಪರ ಮಾಣುವಿನಷ್ಟು ದಪ್ಪ ಇರುವ ಇಂಗಾಲದ ಹಾಳೆಯಲ್ಲಿ ಸೇರಿಸಬಹುದಾದ ಒಂದು ಸೂಕ್ಷ್ಮಾತಿಸೂಕ್ಷ್ಮ ಸಣ್ಣ ಟ್ಯೂಬ್ ಎಂದು ಭಾವಿಸಿದರೆ, ಆ ನ್ಯಾನೊಟ್ಯೂಬ್‌ನ ವ್ಯಾಸವು ಮನುಷ್ಯನ ಕೂದಲಿನ ಎಳೆಯ ವ್ಯಾಸದ 10 ಸಾವಿರ ಪಟ್ಟು ಚಿಕ್ಕದಿರುತ್ತದೆ. ಈ ವಿದ್ಯಮಾನವು ಬರಿಗಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾಗಿ ನಡೆಯುತ್ತದೆ. ಆ ಕಾರ್ಯ ಕೂಡ ಬಹಳ ವಿಚಿತ್ರವಾದದ್ದು ಎನ್ನುತ್ತಾರೆ ಭೌತ ವಿಜ್ಞಾನಿಗಳು.
 
ಅದ್ಭುತ ಶಕ್ತಿ ಮತ್ತು ವಿದ್ಯುತ್ ಹಾಗೂ ಶಾಖವನ್ನು ಪ್ರವಹಿಸುವ ಸಾಮರ್ಥ್ಯ ಸೇರಿದಂತೆ ಹಲವು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುವ ಇಂಗಾಲದ ನ್ಯಾನೊ ಟ್ಯೂಬ್‌ಗಳು ವಿಶ್ವದಾದ್ಯಂತ ಇರುವ ಸಂಶೋಧಕರ ಆಸಕ್ತಿ ಕೆರಳಿಸಿವೆ.

 ಇಂಗಾಲದ ನ್ಯಾನೊ ಟ್ಯೂಬ್‌ಗಳಿಂದ ಆವೃತ್ತವಾದ ಜೇಡರ ಬಲೆಯ ಎಳೆಗಳನ್ನು ಕುರಿತು ಹೇಳುವ ಸ್ಟೀವನ್ ಅವರು ‘ಉನ್ನತ ದರ್ಜೆಯ, ಮಹತ್ವದ ವಸ್ತುವನ್ನು ಹೊಂದಿರುವ ಇದನ್ನು ಹಲವಾರು ಮಹತ್ವದ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ. ಇದನ್ನು ಆರ್ದ್ರತೆಯ ಸಂವೇದಕವನ್ನಾಗಿ, ಒತ್ತಡ ದ ಸಂವೇದಕವನ್ನಾಗಿ, ಚಾಲಕವನ್ನಾಗಿ ಮತ್ತು ಎಲೆಕ್ಟ್ರಿಕಲ್ ವೈರ್ ಆಗಿ ಬಳಸಬಹುದಾಗಿದೆ' ಎನ್ನುತ್ತಾರೆ.
 
ಈ ಸಂಶೋಧನೆಯಲ್ಲಿ ಫ್ಲೋರಿಡಾ ಸ್ಟೇಟ್ ವಿಶ್ವ ವಿದ್ಯಾಲಯದ ಭೌತವಿಜ್ಞಾನ ವಿಭಾಗದ ಮುಖ್ಯಸ್ಥ ಜೇಮ್ಸ್‌ ಬ್ರೂಕ್ಸ್ ಮತ್ತು ಸಂಶೋಧನಾ ವಿದ್ಯಾರ್ಥಿ ಯಾಗಿರುವ ಇರಾಕ್‌ನ ವಾಸನ್ ಸಲೆಹ್ ಸೇರಿದಂತೆ ಆರು ವಿಜ್ಞಾನಿಗಳು ಕೈಜೋಡಿಸಿದ್ದಾರೆ.

No comments:

Post a Comment