Tuesday, October 22, 2013

ಬದುಕು ಕಟ್ಟಿದ ಮಾತು


ಮಾಸ್ಟರ್ ಆನಂದ್
ನಿಮಗೊಂದು ಮಾತು ಗೊತ್ತಾ? ಹಲ್ಲು ನಾಲಗೆಗಿಂತ ಗಟ್ಟಿಯಾದ್ರೂ ಕೊನೆಯವರೆಗೂ ಉಳಿಯೋದು ಮೃದುವಾದ ನಾಲಿಗೆ ಮಾತ್ರ. ಹಾಗೆಯೇ, ಮನುಷ್ಯ ಕೂಡ. ಯಾರು ವಿವೇಚನೆಯಿಂದ ಅರಿತು ಮಾತನಾಡುತ್ತಾರೋ ಅವರು ಎಲ್ಲರ ವಿಶ್ವಾಸ, ಪ್ರೀತಿಯನ್ನು ಗಳಿಸುತ್ತಾರೆ.
 
ಮಾತು ಅಂದ್ರೆ, ಬರೀ ಮಾತಲ್ಲ. ಅದು ಒಬ್ಬ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವ ಅಳೆಯುವ ಮಾನದಂಡ. ಮಾತು ಕೆಲ ಜನರಿಗೆ ಇನ್ನೊಬ್ಬರ ಸ್ಫೂರ್ತಿಯಿಂದ ಬಂದರೆ, ಮತ್ತೆ ಕೆಲವರಿಗೆ ಜನ್ಮಜಾತವಾಗಿ ಒಲಿದು ಬಂದಿರುತ್ತದೆ. ಮಾತುಗಾರಿಕೆ ನನಗೆ ವಂಶವಾಹಿಯಾಗಿ ದಕ್ಕಿದ್ದು. ಅಪ್ಪ ಭವಿಷ್ಯ ನಿಧಿ ಕಚೇರಿಯ ಉದ್ಯೋಗಿ. ಎಂಟು ಭಾಷೆಗಳನ್ನು ಸೊಗಸಾಗಿ ಮಾತನಾಡುವ ಮಾತುಗಾರ. ಹೀಗಾಗಿಯೇ, ಅವರ ಕಚೇರಿಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳ ನಿರೂಪಣೆ ಅಪ್ಪನದ್ದೇ. ಅಮ್ಮ ಗೃಹಿಣಿಯಾದರೂ ಮಾತಿನಲ್ಲಿ ಅಪ್ಪನಿಗಿಂತ ಕಡಿಮೆ ಏನಿರಲಿಲ್ಲ.
 
ಅಪ್ಪ-ಅಮ್ಮ ಇಬ್ಬರ ಪ್ರಭಾವವೋ ಏನೋ ನಾನು ಚಿಕ್ಕವನಿದ್ದಾಗಲೇ ಉಳಿದ ಮಕ್ಕಳಿಗಿಂತ ಸ್ವಲ್ಪ ಚೂಟಿಯಾಗಿದ್ದೆ. ತುಸು ಜಾಸ್ತಿಯೇ ಮಾತನಾಡುತ್ತಿದ್ದೆ. ಪಟಪಟನೆ ಮಾತನಾಡುವ ನನ್ನ ಮಾತುಗಾರಿಕೆಯೇ ಸಿನಿಮಾದವರನ್ನು ನನ್ನೆಡೆಗೆ ಆಕರ್ಷಿಸುವಂತೆ ಮಾಡಿತು.
 
1989ರಲ್ಲಿ ತೆರೆಕಂಡ, ನಟ ರವಿಚಂದ್ರನ್ ಅಭಿನಯದ ‘ಕಿಂದರಿ ಜೋಗಿ’ ಸಿನಿಮಾದಲ್ಲಿ ಬಾಲನಟನಾಗಿ ಬಣ್ಣಹಚ್ಚಲು ಅವಕಾಶ ಒದಿಗಿಸಿದ್ದು ಅರಳು ಸಿಡಿದಂತೆ ಚಟಪಟನೆ ಮಾತನಾಡುತ್ತಿದ್ದ ನನ್ನ ಅವೇ ಮಾತುಗಳು.
 
ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದರ ಹಿಂದೆ ಒಂದು ರೋಚಕ ಕತೆ ಇದೆ. ಅವತ್ತು ಅಪ್ಪನೊಡನೆ ಕಾನಿಷ್ಕ ಹೋಟೆಲ್‌ಗೆ ತಿಂಡಿ ತಿನ್ನಲು ಹೋಗಿದ್ದೆ. ನಮ್ಮ ಪಕ್ಕದ ಟೇಬಲ್‌ನಲ್ಲಿ ರವಿಚಂದ್ರನ್ ಸರ್ ಅವರ ಕೆಲವು ಗೆಳೆಯರು ಕುಳಿತು, ಹರಟುತ್ತಾ ತಿಂಡಿ ತಿನ್ನುತ್ತಿದ್ದರು. ಅದೇ ವೇಳೆ ಪಕ್ಕದ ಟೇಬಲ್‌ನಲ್ಲಿ ಕುಳಿತು ತುಂಟಾಟವಾಡುತ್ತಿದ್ದ ನನ್ನನ್ನು ಗಮನಿಸಿದ ಅವರು ಹತ್ತಿರ ಕರೆದು ಮಾತನಾಡಿಸಿದರು.
 
ಕೊನೆಗೆ, ಅವರು ಅಪ್ಪನೊಟ್ಟಿಗೆ ಮಾತನಾಡಿ ಇವನನ್ನು ‘ಕಿಂದರಿ ಜೋಗಿ’ ಚಿತ್ರಕ್ಕೆ ಬಾಲನಟನಾಗಿ ಕಳುಹಿಸಿ ಎಂದು ಕೇಳಿದರು. ಅಪ್ಪ ಮೊದಲು ಒಪ್ಪಲಿಲ್ಲ. ರವಿ ಸರ್‌ ಅವರ ಗೆಳೆಯರು ಬಿಡಲಿಲ್ಲ. ಹಾಗೂ ಹೀಗೂ ತಂದೆಯನ್ನು ಒಪ್ಪಿಸಿದ ಅವರು ಅದೇ ಹೋಟೆಲ್‌ನಲ್ಲಿ ರೂಮು ಮಾಡಿದ್ದ ರವಿ ಸರ್ ಹತ್ತಿರ ಕರೆದುಕೊಂಡು ಹೋಗಿ ನನ್ನನ್ನು ಭೇಟಿ ಮಾಡಿಸಿದರು.
 
ರವಿ ಸರ್ ಎದುರು ನಾನು, ಅವರದ್ದೂ ಸೇರಿದಂತೆ ರಾಜ್ ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಧ್ವನಿಯನ್ನು ಅನುಕರಿಸಿ ಕೆಲವು ಡೈಲಾಗ್ ಹೇಳಿದೆ. ‘ಲವ್ ಅಟ್‌ ಫಸ್ಟ್ ಸೈಟ್’ ಎನ್ನುವಂತೆ ಹೆಚ್ಚಿನ ಪರೀಕ್ಷೆ ಇಲ್ಲದೆ ಬಾಲನಟನಾಗಿ ಆಯ್ಕೆ ಆಗಿಬಿಟ್ಟೆ.
 
ಅಲ್ಲಿಂದ ಶುರುವಾಯಿತು ನನ್ನ ಸಿನಿಮಾ ಯಾತ್ರೆ. ಬಾಲನಟನಾಗಿಯೇ ನಾನು 55 ಚಿತ್ರಗಳಲ್ಲಿ ನಟಿಸಿರುವೆ. ಕನ್ನಡ ಸಿನಿಮಾಗಳ ಜತೆಗೆ ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಹಾಗೂ 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವೆ.
 
ಯುವನಟನಾಗಿ ‘ಚಿತ್ರ’, ‘ಫ್ರೆಂಡ್ಸ್’, ‘ದೇವರು ವರವನು ಕೊಟ್ರೆ’, ‘ಪ್ಯಾರ್‌ಗೆ ಆಗಿಬಿಟ್ಟೈತೆ’ ಸೇರಿದಂತೆ 25 ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದೇನೆ. ಮೂರು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದೇನೆ. ಸದ್ಯಕ್ಕೆ ಈಗ ಈ-ಟಿವಿಗಾಗಿ ‘ರೊಬೊ ಫ್ಯಾಮಿಲಿ’ ಎಂಬ ಮೆಗಾ ಧಾರಾವಾಹಿ ನಿರ್ದೇಶಿಸುತ್ತಿದ್ದೇನೆ. ನನಗೆ ಇಷ್ಟೆಲ್ಲಾ ಅವಕಾಶಗಳು ಸಿಕ್ಕಿದ್ದು ನನ್ನ ಮಾತುಗಾರಿಕೆಯಿಂದಲೇ ಅಂದರೆ ಅತಿಶಯೋಕ್ತಿ ಏನಲ್ಲ.
 
ನಾನೀಗ ಮಾಸ್ಟರ್‌ ಆನಂದ್‌ ಅಲ್ಲ. ಬರೀ ಆನಂದ್‌. ವಯಸ್ಸಿನಲ್ಲಿ ತುಸು ದೊಡ್ಡವನಾಗಿದ್ದೇನೆ. ಆದರೂ ಇಂದಿಗೂ ಜನ ನನ್ನನ್ನು ಪ್ರೀತಿಯಿಂದ ‘ಮಾಸ್ಟರ್ ಆನಂದ್’ ಅಂತಲೇ ಗುರ್ತಿಸುತ್ತಾರೆ. ಪ್ರೇಕ್ಷಕರಿಗೆ ಇಷ್ಟವಾಗುವಂತೆ ಅರಳು ಹುರಿದಂತೆ ಮಾತನಾಡುತ್ತಿದ್ದ ಆ ಚೂಟಿ ಹುಡುಗನೇ ಇದಕ್ಕೆ ಕಾರಣ ಎನ್ನುವುದು ನನ್ನ ಅನಿಸಿಕೆ.
 
ನನ್ನ ಈವರೆಗಿನ 24 ವರ್ಷಗಳ ಸಿನಿಮಾ ಪಯಣದಲ್ಲಿ ಅನೇಕ ಶ್ರೇಷ್ಠ ವ್ಯಕ್ತಿಗಳಿಂದ ನಾನು ಮಾತಿನ ಮೃದುತನ, ಮೊನಚು, ಶೈಲಿ, ವಿನಯ ಕಲಿತಿದ್ದೇನೆ. ಮಾತಿನ ವಿಷಯದಲ್ಲಿ ನನಗೆ ಆದರ್ಶಪ್ರಾಯ ನಟರೆಂದರೆ ವರನಟ ಡಾ.ರಾಜಕುಮಾರ್, ವಿಷ್ಣುವರ್ಧನ್ ಜತೆಗೆ ರಮೇಶ್ ಅರವಿಂದ್.
 
ಮಾತಿಗೂ, ಕಲಿಕೆಗೂ ಅವಿನಾಭಾವ ಸಂಬಂಧವಿದೆ ಎಂಬುದು ನನ್ನ ಅಭಿಪ್ರಾಯ. ಕಲಿಕೆಗೆ ಮಿತಿ ಇಲ್ಲ. ಕಲಿಯಬೇಕು ಎನ್ನುವ ಭಾವನೆ ನಮ್ಮೊಳಗೆ ಇರುವವರೆಗೂ ನಮ್ಮ ಜ್ಞಾನ ಹಿಗ್ಗುತ್ತಾ ಹೋಗುತ್ತದೆ. ಓದಿನಿಂದ ಮಾತಿನ ಲಾಲಿತ್ಯ ಸೊಗಸಾಗುವುದರ ಜತೆಗೆ ಮಾತಿನ ತೂಕವೂ ಹೆಚ್ಚುತ್ತಾ ಹೋಗುತ್ತದೆ.
 
(ಪ್ರಜಾವಾಣಿ ದಿನಪತ್ರಿಕೆ ಮೆಟ್ರೊ ಪುರವಣಿಯಲ್ಲಿ ಮಂಗಳವಾರ, ಅಕ್ಟೋಬರ್ 22, 2013 ರಂದು ಪ್ರಕಟವಾದ ಲೇಖನ)

No comments:

Post a Comment