Monday, February 4, 2013

`ತ್ರಿವಿಕ್ರಮ'ನಿಗೆ ಸೊಸೆ ಬೇಕಂತೆ!



ತಂದೆ ಮಹದೇವ ಜತೆ ಪ್ರವೀಣ

ಕಳೆದ 44 ವರ್ಷಗಳಿಂದ ಬೆಂಗಳೂರಿನ ಸುಮಾರು 78 ಸಾವಿರಕ್ಕೂ ಅಧಿಕ ಅನಾಥ ಶವಗಳಿಗೆ `ಮುಕ್ತಿ' ದೊರಕಿಸಿರುವ ತ್ರಿವಿಕ್ರಮ ಮಹದೇವನ ಕತೆ ಯಾರಿಗೆ ತಾನೇ ಗೊತ್ತಿಲ್ಲ? ಆದರೆ ಅಪ್ಪನ ಆ ಉದಾತ್ತ ಕಾರ್ಯದ ಪ್ರೇರಣೆಯಿಂದ ಏಳನೆಯ ತರಗತಿ ಓದುತ್ತ್ದ್ದಿದಾಗಿನಿಂದ ಈವರೆಗೆ ಸುಮಾರು 15 ಸಾವಿರ `ಅನಾಥ'ರಿಗೆ ಮುಕ್ತಿ ದೊರಕಿಸಿ ತಂದೆಯ ಹಾದಿಯಲ್ಲೇ ಮುನ್ನಡೆದಿರುವ ಆತನ ಹಿರಿ ಮಗ 25ರ ಹರೆಯದ ಪ್ರವೀಣ್ ಕುರಿತು  ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.

ಚಿಕ್ಕಂದಿನಿಂದಲೇ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಅಂಗಳದಲ್ಲಿ ಆಡುತ್ತ ಬೆಳೆದ ಪ್ರವೀಣ್ ಆಗ ಅಪ್ಪ ಹೊತ್ತು ಹಾಕುತ್ತಿದ್ದ ಮೂಟೆಗಳನ್ನು ಶವದ ಮೂಟೆಗಳೆಂದು ಅರ್ಥಮಾಡಿಕೊಂಡು ಅಪ್ಪನೊಂದಿಗೆ ಸಶ್ಮಾನದ ಹಾದಿ ತುಳಿದಾಗ ಮೂರನೇಯ ತರಗತಿಯ ವಿದ್ಯಾರ್ಥಿ ! ಅಪ್ಪನ ಆ ಕಾಯಕ ಆಗ ಆತನ ಮೇಲೆ ಎಷ್ಟರಮಟ್ಟಿಗಿನ ಪರಿಣಾಮ ಬೀರಿತೆಂದರೆ, ಏಳನೇಯ ತರಗತಿ ಓದುವ ಹೊತ್ತಿಗಾಗಲೇ ಅಪ್ಪನ ಸಹಾಯವಿಲ್ಲದೆ ಸ್ವತಃ ತಾನೇ ಗಾಡಿ ನಡೆಸಿಕೊಂಡು ಸ್ಮಶಾನಕ್ಕೆ ಹೋಗಿ `ಅನಾಥ ಶವ'ಗಳನ್ನು ಹೂಳಿ ಬರುತ್ತಿದ್ದ ಈ ವೀರ ಬಾಲಕ! `ಇಂದಿಗೂ ನಮ್ಮ ಮನೆಯಲ್ಲಿ ಯಾರಿಗೂ ದೆವ್ವ, ಭೂತ ಎನ್ನುವ ಅಂಜಿಕೆ ಕಾಡಿಲ್ಲ. ನಮಗೆ ಚಿಕ್ಕಂದಿನಲ್ಲೇ ಅಪ್ಪ `ಹೆಣ ಅಂದ್ರೆ ದೇವರು, ಸ್ಮಶಾನ ಅಂದ್ರೆ ದೇವಸ್ಥಾನ' ಅಂತಾ ಹೇಳ್ತಾ ಬೆಳಸಿದ್ರು” ಎನ್ನುತ್ತಾನೆ ಪ್ರವೀಣ.

ಕಳೆದ 12 ವರ್ಷಗಳಿಂದ ಅಪ್ಪನ `ಹೆಣಭಾರ' ಇಳಿಸಲು ಆತನಿಗೆ ಆಸರೆಯಾಗುತ್ತ ಎಸ್ಸೆಸ್ಸೆಲಿ, ಪಿಯುಸಿ, ಪದವಿ ಶಿಕ್ಷಣವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ. ಜತೆಗೆ ಹಲವರ ಸಲಹೆ ಹಾಗೂ ಸಹಾಯದಿಂದ 2010ರಲ್ಲಿ `ಸಮಾಜಕಾರ್ಯ' ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಮ್‌ಎಸ್‌ಡಬ್ಲೂ) ಶಿಕ್ಷಣ ಕೂಡ ಪಡೆದಿರುವ ಈತನಿಗೆ ಕೆಎಎಸ್ ಅಧಿಕಾರಿಯಾಗಬೇಕೆಂಬ ಹೆಬ್ಬಯಕೆ. ಜತೆಗೆ ತಂದೆ ಹೆಸರಿನಲ್ಲಿ ಸರ್ಕಾರೇತರ ಸಂಸ್ಥೆಯೊಂದನ್ನು (ಎನ್‌ಜಿಒ) ಹುಟ್ಟು ಹಾಕಿ ಅದರ ಮೂಲಕ ಈ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಬೇಕೆಂಬ ಬಯಕೆ.

ಒಂದು ಒಳ್ಳೆಯ ಕೆಲಸ ಪಡೆದು ದಿನೇ ದಿನೇ ಬೆಳೆಯುತ್ತಿರುವ ಆರ್ಥಿಕ ಸಂಕಷ್ಟ ದೂರ ಮಾಡುವ ಚಿಂತೆ ಪ್ರವೀಣ್‌ನದಾದರೆ, ತಂದೆ ಮಹಾದೇವನ ಚಿಂತೆ ಬೇರೆ ರೀತಿಯದು. `ಅಲ್ಲಾ ಸಾಮಿ ಎದೆಯುದ್ದ ಬೆಳೆದ ಮಗನಿಗೆ ಲಗ್ನಾ ಮಾಡಬ್ಯಾಡ್ವಾ? ಆದ್ರೆ ಈಟೆಲಾ ಓದಿ ಈ ಕೆಲಸಾ ಮಾಡೋ ನನ್ನ ಮಗನಿಗೆ ಯಾರು ಮಗಳ ಕೊಡ್ತಾರೆ ಅನ್ನೊದೇ ಚಿಂತೆ ಸಾಮಿ' ಎನ್ನುತ್ತಾನೆ ತ್ರಿವಿಕ್ರಮ ಮಹಾದೇವ.

`ನಿಮಗೆ ಆಗಿಲ್ವಾ, ಅವನಿಗೂ ಹಾಗೇ ಆಗುತ್ತೆ ಬಿಡಿ' ಎಂದು ಕೇಳಿದ್ದೇ ತಡ ಮಹಾದೇವ ಹಳೆಯ ನೆನಪು ಕೆದಕಿದ. `ನನ್ನ ಮದ್ವೇ ವಿಷ್ಯಾ ಏನ ಕೇಳ್ತೀರಾ ಬಿಡಿ ಸೋಮಿ. ಅಮ್ಮ ಸತ್ತು ಅನಾಥನಾಗಿ ನಾನು ವಿಕ್ಟೋರಿಯಾ ಆಸ್ಪತ್ರೆನಲ್ಲೇ ಈ ಕೆಲಸಕ್ಕೆ ಕಾಯಂ ಆಗಿ ಕೆಲ ವರ್ಷ ಆಗಿತ್ತು. ಆಗ ನನಗೂ ಮದುವೆಯಾಗಬೇಕೆಂಬ ಆಸೆ ಹುಟ್ಟಿತ್ತಾದರೂ ನನ್ನ ಸ್ಥಿತಿ ನೆನೆದು ಯಾರು ನನಗೆ ಹುಡುಗಿ ಕೊಡುತ್ತಾರೆ ಎಂದು ಹೆದರಿ ಸುಮ್ಮನಿದ್ದೆ. ಆ ವೇಳೆ ಆಸ್ಪತ್ರೆಯ ಆಯಾ ಒಬ್ರು ನನಗೆ ಪುಷ್ಪಲತಾ ಅನ್ನೊ ಹುಡುಗಿಯೊಬ್ಬಳನ್ನ ತೋರಿಸಿ ಮದುವೆ ಮಾಡಿಕೊಳ್ಳುವಂತೆ ಪುಲಾಯಿಸಿದರು. ಈ ಜನ್ಮದಲ್ಲಿ ಹೆಣ್ಣೆ ಕಾಣಲಾರೆನೋ ಅಂತಿದ್ದ ನನಗೆ ಆಯಾ ತೋರಿಸಿದ ಹುಡ್ಗಿ ನೋಡಿ ಸ್ವರ್ಗ ಮೂರೇ ಗೇಣು ಆದಂಗಾಯ್ತು.'

`ಆದ್ರೆ ಹುಡುಗಿ ಅಪ್ಪ 2000 ರೂಪಾಯಿ ಕೊಟ್ರೆ ಮಾತ್ರ ಮಗ್ಳನ ಕೊಡುವುದಾಗಿ ಹೇಳಿದ. ನಾನು ಕಷ್ಟಪಟ್ಟು ಹೇಗೊ ದುಡ್ಡು ಹೊಂದಿಸಿ ಮಾವನಿಗೆ ಕೊಟ್ಟು 1986ರಲ್ಲಿ ಕೆಂಗೇರಿ ಗುಡ್ಡೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮದುವೆಯಾದೆ. ಆದ್ರೆ ನನ್ನ ದುರಾದೃಷ್ಟಕ್ಕೆ ಹುಡುಗಿ ಮೆಂಟಲ್ ಆಗಿದ್ದಳು. ಪ್ರೀತಿಯಿಂದ ಅವಳ ಹತ್ತಿರಕ್ಕೆ ಹೋದ್ರೆ ಸಾಕು, ಸದಾ ಕಂಕುಳಲ್ಲಿ ಕಲ್ಲು ಹಿಡಿದಿರುತ್ತಿದ್ದ ಆಕೆ `ಲೋ ಅಣ್ಣಾ ಹತ್ರಾ ಬಂದ್ರೇ ಅಷ್ಟೇ' ಎಂದು ಗದರಿಸುತ್ತಿದ್ದಳು. ಇದರಿಂದ ಭಯವಾಗಿ ಅವಳ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಭಯದಿಂದ ಬಹಳಷ್ಟು ದಿನ ಆಸ್ಪತ್ರೆಯಲ್ಲೇ ಮಲಗುತ್ತಿದ್ದೆ. ಮಳೆಗಾಲದ ಒಂದು ದಿನ ಹಾಗೂ ಹೀಗೂ ಮಾಡಿ ಶೋಭನ ಮಾಡಿಕೊಂಡೆ. ಒಂದೇ ದಿನಕ್ಕೆ ಅವಳ ಹುಚ್ಚೆಲ್ಲಾ ಬಿಟ್ಟೋಯ್ತು ನೋಡಿ! ಅಂದು ಹುಶಾರಾದ ಹೆಂಡ್ತಿ ಇವತ್ತು ನಾಲ್ಕು ಮಕ್ಕಳ ತಾಯಿ' ಎಂದು ನಗುತ್ತಾನೆ!

ಈಗ ರಾಜರಾಜೇಶ್ವರಿ ನಗರದ ಬಾಡಿಗೆ ಮನೆಯೊಂದರಲ್ಲಿರುವ ಎರಡು ಗಂಡು, ಎರಡು ಹೆಣ್ಣು ಮಕ್ಕಳ  ಮಹದೇವನ ತುಂಬು ಸಂಸಾರಕ್ಕೆ ಪ್ರವೀಣ್‌ನೇ ಆಧಾರಸ್ತಂಭ.  ಮನೆಯ ಸಮೀಪವೇ ಇರುವ ರಾಜರಾಜೇಶ್ವರಿ ವಿದ್ಯಾಶಾಲೆಯಲ್ಲಿ  ತಂಗಿಯರಿಬ್ಬರು 8, 9ನೇ ತರಗತಿ ಹಾಗೂ ತಮ್ಮ 5ನೇ ತರಗತಿಯಲ್ಲಿ ಓದುತ್ತಿದ್ದಾರೆ.  ಇಳಿಗಾಲದಲ್ಲೂ ಹೆಣಭಾರ ಎತ್ತುವ ಅಪ್ಪನ ಏದುಸಿರು ಕಂಡು ಅನೇಕ ಸಲ ಪ್ರವೀಣ್ ಕಣ್ಣೀರುಗರೆದಿದ್ದಾನೆ. `ಎಲ್ಲರಂತೆ ನೌಕರಿ ಮಾಡಿ ನಿನ್ನ ಸಾಕುತ್ತೇನೆ' ಎಂದರೆ ಅಪ್ಪನದು ಒಂದೇ ಮಾತು - `ಹೆಂಡ್ತಿ, ಮಕ್ಕಳ ಜತೆ ಮನೆನಾದ್ರೂ ಬಿಡ್ತೀನಿ. ಆದ್ರೆ ನನ್ಗೆ ಇಲ್ಲಿ ಗಂಟಾ ಅನ್ನಾ ಕೊಟ್ಟಿರೋ ಈ ದೇವ್ರಂತ ಹೆಣಾ ಹೂಳೋ ಕೆಲ್ಸಾ ಮಾತ್ರ ಬಿಡಾಕಿಲ್ಲ!'

ಈ ಮಧ್ಯೆ ಹಲವರು `ಈ  ಕೆಲಸ ಬಿಟ್ಟುಬಿಡು, ಇದು ನಿಮ್ಮಪ್ಪನಿಗೇ ಕೊನೆಯಾಗಲಿ, ಇಲ್ದೇ ಹೋದ್ರೆ ಭವಿಷ್ಯದಲ್ಲಿ ಕಷ್ಟ ಎದುರಿಸಬೇಕಾಗ್ತದೆ' ಎಂದು ಸಲಹೆ ಕೂಡ ನೀಡಿದರಂತೆ. ಆದರೆ ಅಪ್ಪನ ಈ `ಸಮಾಜ ಕಾರ್ಯ'ದ ಜತೆಗೆ ಸರ್ಕಾರಿ ಇಲ್ಲವೇ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗವೊಂದನ್ನು ಮಾಡಬೇಕೆಂಬ ನಿರ್ಣಯಕ್ಕೆ ಬಂದ ಪ್ರವೀಣ್ ಇದೀಗ ಕೆಲಸ ಅರಸುತ್ತಲೇ ಅಪ್ಪನ ಕಾಯಕ ಮುಂದುವರಿಸಿದ್ದಾನೆ.

15 ಕಿ.ಮೀ ದೂರದಲ್ಲಿರುವ ರಾಜರಾಜೇಶ್ವರಿ ನಗರದಿಂದ ದಿನನಿತ್ಯ  ಬೆಳಗ್ಗೆ 9.30ರ ಸುಮಾರಿಗೆ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ಬರುವ ಪ್ರವೀಣ್, ದಿನಪೂರ್ತಿ ಕಾಯ್ದು ಮರಣೋತ್ತರ ಪರೀಕ್ಷೆ ಮಾಡಿ ಮುಗಿಸಿದ ಅನಾಥ ಶವಗಳನ್ನು ಸಂಜೆ ವಿಲ್ಸನ್ ಗಾರ್ಡನ್ ಇಲ್ಲವೇ ಮೈಸೂರು ರಸ್ತೆಯಲ್ಲಿರುವ ಹಳೆಗುಡೇದ ಹಳ್ಳಿ ಸ್ಮಶಾನಕ್ಕೆ ಒಯ್ದು ಹೂಳಿ ನಂತರ 7.30ರ ಸುಮಾರಿಗೆ ಮನೆಗೆ ಮರಳುತ್ತಾನೆ.

ಮಹಾನಗರದ ಯಾವುದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನಾಥ ಶವ ಕಂಡರೆ ಸಂಬಂಧಿತ ಠಾಣೆಯ ಸಿಬ್ಬಂದಿ ಪ್ರವೀಣ್ ಇಲ್ಲವೇ ಈತನ ತಂದೆ ಮಹದೇವನನ್ನು ಸಂಪರ್ಕಿಸುತ್ತಾರೆ. ಇವರು ಆ ಶವವನ್ನು ತಂದು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ಒಪ್ಪಿಸುತ್ತಾರೆ. ಮೂರ್ನಾಲ್ಕು ದಿನಗಳಲ್ಲಿ ಅದರ ವಾರಸುದಾರರು ಪತ್ತೆಯಾಗದೆ ಹೋದಾಗ ಅದನ್ನು ಸ್ಮಶಾನಕ್ಕೆ ಒಯ್ದು ಹೂಳುವುದು ಇವರ ಕೆಲಸ. ಅದಕ್ಕೆ ಪ್ರತಿಯಾಗಿ ಪೊಲೀಸ್ ಇಲಾಖೆಯಿಂದ ಇವರಿಗೆ ಒಂದು ಶವಕ್ಕೆ 800 ರೂಪಾಯಿ ನೀಡಲಾಗುತ್ತದೆ. ಅದೇ ರೀತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದ ಅನಾಥರು ಮೃತಪಟ್ಟಾಗಲೂ ಆ ಶವಗಳ ಸಂಸ್ಕಾರಕ್ಕೆ ಆಸ್ಪತ್ರೆ ಇವರಿಗೆ 250 ರೂಪಾಯಿ ನೀಡುತ್ತದೆ.

ಹೀಗೆ ಪಡೆಯುವ ಮೊತ್ತದಲ್ಲಿ ಸ್ಮಶಾನದಲ್ಲಿ ಗುಂಡಿ ತೆಗೆಯುವವರಿಗೆ 400 ರಿಂದ 450 ರೂಪಾಯಿ ಕೊಡಬೇಕು. ಇನ್ನು ಗಾಡಿಗೆ ಇಂಧನ, ರಿಪೇರಿ ಎಂದು ಕಳೆದರೆ ಆರು ಜನರಿರುವ ಕುಟುಂಬಕ್ಕೆ ಉಳಿಯುವುದು ಪುಡಿಗಾಸು ಮಾತ್ರ. “ಉಳಿಕೆ ಎನ್ನುವುದು ನಮಗೆ ಗೊತ್ತಿಲ್ಲದ ಪದ” ಎನ್ನುತ್ತಾನೆ ಪ್ರವೀಣ್.

44 ವರ್ಷದ ಈ `ಹೆಣ'ಗಾಟದ ಮಧ್ಯೆ ಪ್ರವೀಣದ ಅಪ್ಪ ತ್ರಿವಿಕ್ರಮ ಮಹಾದೇವ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪಡೆದಿದ್ದಾರೆ. ಮೂರು ಜನ ಮುಖ್ಯಮಂತ್ರಿಗಳಿಂದ ಗೌರವಗಳೂ ಸಿಕ್ಕಿವೆ. ಆದರೆ ಬೆಂಗಳೂರು ಮಹಾನಗರದಲ್ಲಿ ಸ್ವಂತದ್ದೊಂದು ಸೂರು ಸಿಕ್ಕಿಲ್ಲ. ಕುಟುಂಬ ನಿರ್ವಹಣೆಗಾಗಿ ಎರಡು ಚಿನ್ನದ ಪ್ರಶಸ್ತಿ ಪದಕಗಳನ್ನೇ ಮಾರಿದರೂ, ಕಷ್ಟಕಾಲದಲ್ಲೂ ಯಾರ ಬಳಿಯೂ ಕೈಒಡ್ಡದ ಸ್ವಾಭಿಮಾನಿ ಅಪ್ಪನನ್ನು ಕಂಡರೆ ಪ್ರವೀಣನಿಗೆ ಎಲ್ಲಿಲ್ಲದ ಗೌರವ.

ಕಾಯಕ ನಿರತ ಪ್ರವೀಣ

`ಅನಾಥ ಶವಗಳೆಂದು ಎಂದೂ ಅಸಡ್ಡೆ ತೋರಿಲ್ಲ. ಎಷ್ಟೋ ಬಾರಿ ಕೊಳೆತ ಶವಗಳು ಹುಳು ಬಿದ್ದು ಹತ್ತಿರ ಹೋಗಲಾರದಷ್ಟು ಕೆಟ್ಟ ವಾಸನೆ ಬೀರುತ್ತವೆ. ಆದರೂ ಈ ಕೆಲಸದಲ್ಲಿ ನನಗೆ ಬೇಸರ ಹುಟ್ಟಿಲ್ಲ. ಇದೊಂದು ದೇವರ ಪವಿತ್ರ ಕಾರ್ಯದಂತೆ ಮಾಡುತ್ತೇನೆ. ದೇವಸ್ಥಾನಕ್ಕೆ ಹೋಗುವ ಭಾವನೆಯಲ್ಲೇ ಸ್ಮಶಾನಕ್ಕೂ ಹೋಗುತ್ತೇನೆ. ಯಾರಿಗುಂಟು ಇಷ್ಟು ಜನಕ್ಕೆ ಮಣ್ಣು ಹಾಕುವ ಋಣ !' ಎನ್ನುವುದು ಆತನ ಮನದಾಳದ ಮಾತು.

“1971ರಲ್ಲಿ ನನ್ನಪ್ಪ ಈ ವೃತ್ತಿ ಪ್ರಾರಂಭಿಸಿದಾಗ ಆಸ್ಪತ್ರೆಯ ವ್ಹೀಲ್ ಸ್ಟ್ರೆಚರ್ ಮೇಲೆ ಹೆಣ ಇಟ್ಟುಕೊಂಡು ಸುಮಾರು 5 ಕಿ.ಮೀ ದೂರದ ಸ್ಮಶಾನಕ್ಕೆ ನಡೆದೇ ಹೋಗಿ ಸಂಸ್ಕಾರ ಮಾಡಿ ಬರುತ್ತಿದ್ದರಂತೆ. ಆಗೆಲ್ಲ ಒಂದು ಶವಕ್ಕೆ 2 ರೂಪಾಯಿ 50 ಪೈಸೆ ಕೊಡ್ತಿದ್ರಂತೆ. 1982ರಲ್ಲಿ ಫೈನಾನ್ಸ್‌ನಲ್ಲಿ ಸಾಲ ತೆಗೆದು ಕುದುರೆ ಗಾಡಿ ತೆಗೆದುಕೊಂಡು ಅದರಲ್ಲಿ 1999ರವರೆಗೆ ಹೆಣ ಸಾಗಿಸುವ ಕೆಲಸ ಮಾಡಿದರು. ಆ ವೇಳೆ  ಮೇಯರ್ ಆಗಿದ್ದ ರಾಮಚಂದ್ರಪ್ಪನವರು ಈ ಗಾಡಿ ಕೊಡಿಸಿದ್ದಾರೆ” ಎಂದು ಗತಕಾಲದ ನೆನಪಿನ ಬುತ್ತಿ ಬಿಚ್ಚಿದ ಪ್ರವೀಣ್. ಇತ್ತಿಚೆಗಷ್ಟೇ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ) ಓಮ್ನಿ ವಾಹನವೊಂದನ್ನು ದೇಣಿಗೆ ನೀಡಿದೆ ಎನ್ನುತ್ತಾನೆ.

ಕಾರಣಾಂತರಗಳಿಂದ ಮನೆಯಿಂದ ದೂರವಾಗಿ ಸಾವನ್ನಪ್ಪುವರು, ಪ್ರೀತಿಸಿ ಓಡಿ ಬಂದು ಆತ್ಮಹತ್ಯೆಗೆ ಶರಣಾದವರು, ಕೆಲಸಕ್ಕಾಗಿ ವಲಸೆ ಬಂದು ಜೀವ ತೆತ್ತವರು, ನೆಲೆ ಇಲ್ಲದೆ ನಿರ್ಗತಿಕರಾಗಿ ಸಾಯುವ ಭಿಕ್ಷುಕರು, ಜಗತ್ತಿನ ಬೆಳಕು ಕಾಣುವ ಮುನ್ನವೇ ಹೆತ್ತವರಿಂದಲೇ ಹತ್ಯೆಯಾಗಿ ಅನಾಥ ಶವವಾಗುವ ಶಿಶುಗಳು- ಹೀಗೆ ಬೆಂಗಳೂರ ಮಹಾನಗರದ ಮಡಿಲಲ್ಲಿ ನಿತ್ಯ ಮರಣ ಹೊಂದುವವರಿಗೆ ತಾಯಿ -ತಂದೆಯಾಗಿ, ಅಣ್ಣ -ತಮ್ಮನಾಗಿ, ಜನ್ಮಾಂತರದ ಬಂಧುವಿನಂತೆ ಗೌರವಯುತ ಸಂಸ್ಕಾರ ಮಾಡುವ ಪ್ರವೀಣ್‌ನಿಗೆ ಸಹೃದಯರ ಸಹಾಯ ಬೇಕಿದೆ.  ನೆರವು ನೀಡುವವರು ಪ್ರವೀಣ್‌ನ ಮೊಬೈಲ್ ಸಂಖ್ಯೆ - 97402 06815 ಸಂಪರ್ಕಿಸಬಹುದು.

( ಸುಧಾ ವಾರಪತ್ರಿಕೆಯ 7 ಫೆಬ್ರುವರಿ 2013ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

No comments:

Post a Comment