Tuesday, February 19, 2013

ನಿವೃತ್ತ ಅಧಿಕಾರಿಯ ಕೃಷಿ ಪ್ರೀತಿ

ಫಲ ಭರಿತ `ಅರ್ಕಾ ಸಹನ' ಗಿಡ (ಒಳಚಿತ್ರದಲ್ಲಿ) ರಾವುಸಾಹೇಬ್ ಪಾಟೀಲರು
ವೃತ್ತಿಯಲ್ಲಿ ನಿವೃತ್ತರಾಗಬಹುದು, ಆದರೆ ಪ್ರವೃತ್ತಿಯಲ್ಲ ಎಂದು  ತೋರಿಸಿಕೊಟ್ಟಿರುವವರು ವಿಜಾಪುರ ಜಿಲ್ಲೆಯ ಕನಮಡಿ ಗ್ರಾಮದ ರಾವುಸಾಹೇಬ್ ಸಿದ್ದನಗೌಡ ಪಾಟೀಲ. ಅಪೆಕ್ಸ್ ಬ್ಯಾಂಕಿನಲ್ಲಿ ಸುಮಾರು 35 ವರ್ಷ ಸೇವೆ ಸಲ್ಲಿಸಿ 2011ರ ಅಕ್ಟೊಬರ್‌ನಲ್ಲಿ ಬೆಂಗಳೂರಿನ ಚಾಮರಾಜ ಪೇಟೆಯ ಶಾಖೆಯ ಪ್ರಧಾನ ವ್ಯವಸ್ಥಾಪಕ ಹುದ್ದೆಯಿಂದ ನಿವೃತ್ತಿ ಪಡೆದ ನಂತರ ಪಾಟೀಲರು ಸೀದಾ ನಡೆದದ್ದು ತಮ್ಮ ಹುಟ್ಟೂರು ಕನಮಡಿಗೆ. ಬೆಂಗಳೂರಿನಲ್ಲಿರುವ ಮೂವರ ಮಕ್ಕಳು ಸಾಫ್ಟ್‌ವೇರ್ ಎಂಜಿನಿಯರ್. ಆದರೆ ಈ ತಂದೆಯ ಮನಸ್ಸು ಮಾತ್ರ ಸ್ವಗ್ರಾಮದತ್ತ ನೆಟ್ಟಿತ್ತು. ಅಲ್ಲಿಯ ಭೂಮಿಯೊಂದಿಗೆ ಬಿಡಿಸಿಕೊಳ್ಳಲಾರದ ಅವಿನಾಭಾವದ ನಂಟು ಅದು.
ಜಿಲ್ಲೆಯ ಕನಮಡಿಯಲ್ಲಿ ಸುಮಾರು 25 ಎಕರೆ ಕೃಷಿ ಜಮೀನು ಹೊಂದಿರುವ ಪಾಟೀಲರ ಕೃಷಿ ಪ್ರೀತಿಗೆ ಅವರ ತಾತ ರುದ್ರಗೌಡ ಸ್ಫೂರ್ತಿ. ಬ್ಯಾಂಕ್‌ನ ನೌಕರಿ ಜಮೀನಿನಿಂದ ಅನಿವಾರ್ಯದ ಅಗಲಿಕೆ ಉಂಟುಮಾಡಿತ್ತು. ಊರಿನಲ್ಲಿರುವ ಭೂಮಿಯನ್ನು ಆಳುಗಳ ಸಹಾಯದಿಂದ ವ್ಯವಸಾಯ ಮಾಡಿಸುತ್ತಿದ್ದರಾದರೂ ಅದು ಅವರಿಗೆ ತೃಪ್ತಿ ತಂದಿರಲಿಲ್ಲ.
ಬಹುತೇಕ ಕಲ್ಲುನೆಲದಿಂದಲೇ ಕೂಡಿರುವ 25 ಎಕರೆ ಜಮೀನಿನಲ್ಲಿ ನಾಲ್ಕು ಎಕರೆ ಜಮೀನನ್ನು ದ್ರಾಕ್ಷಿ, ದಾಳಿಂಬೆಯಂತಹ ತೋಟಗಾರಿಕೆ ಬೆಳೆಗಳಿಗೆ ಮೀಸಲಿಟ್ಟ ಪಾಟೀಲರು ಉಳಿದ ನೆಲದಲ್ಲಿ ಜೋಳ ಸೇರಿದಂತೆ ಇತರ ಬೆಳೆ ಬೆಳೆಯುತ್ತಿದ್ದರು. ಈ ಮಧ್ಯೆ ತಾತನೊಂದಿಗೆ ಸೇರಿ ಹೊಸ ಹೊಸ ತಳಿಗಳನ್ನು ಅರಸುತ್ತಿದ್ದ ಪಾಟೀಲರಿಗೆ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್) ನಂಟು ಬೆಳೆಯಿತು. ಈ ಬಾಂಧವ್ಯ ಇಂದಿಗೂ ಅಂದರೆ ಸುಮಾರು 25 ವರ್ಷಗಳಿಂದಲೂ ಮುಂದುವರೆದಿದೆ.
ಅರ್ಕಾ ಸಹನ
2004ರಲ್ಲಿ ಒಂದು ಎಕರೆ ಜಮೀನಿನಲ್ಲಿ 200 `ಅರ್ಕಾ ಸಹನ' ಸೀತಾಫಲ ಗಿಡಗಳ ನಾಟಿ ಮಾಡಿದ್ದ ಪಾಟೀಲರಿಗೆ ನೌಕರಿಯ ಮಧ್ಯ ಅವುಗಳನ್ನು ಸೂಕ್ತವಾಗಿ ಪೋಷಿಸಲು ಸಾಧ್ಯವಾಗದ ನೋವು ಕಾಡುತಿತ್ತು. ಏಕೆಂದರೆ ಸಾಮಾನ್ಯ ಸೀತಾಫಲಕ್ಕಿಂತ ವಿಶಿಷ್ಟವಾದ `ಅರ್ಕಾ ಸಹನ' ಗಾತ್ರದಲ್ಲಿ ಮಾತ್ರವಲ್ಲದೇ ಬಣ್ಣ, ರುಚಿ, ಜತೆಗೆ ಇಳುವರಿಯಲ್ಲಿ ಕೂಡ ಹೆಚ್ಚುಗಾರಿಕೆ ಹೊಂದಿರುವ ಅಪರೂಪದ ತಳಿ.
ಕರ್ನಾಟಕದಲ್ಲಿ ಮೊದಲ ಬಾರಿಗೆ `ಅರ್ಕಾ ಸಹನ' ಬೆಳೆದ ಶ್ರೇಯ ಪಡೆದಿರುವ ಪಾಟೀಲರು ನಿವೃತ್ತಿಯ ನಂತರವೂ ಇದನ್ನೇ ಬೆಳೆಯುತ್ತಿದ್ದು, ಇದೀಗ ಅದನ್ನು ರಫ್ತು ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ.ಕಳೆದ ವರ್ಷ ಸ್ಪಲ್ಪ ಪ್ರಮಾಣದಲ್ಲಿ ಬೆಳೆದಿದ್ದ ಸೀತಾಫಲವನ್ನು ಬೆಂಗಳೂರಿನಲ್ಲಿದ್ದ ಹಾಪ್ಸ್‌ಕಾಮ್ ಮಳಿಗೆಗಳಿಗೆ ನೀಡಿದ್ದರು.
ಈ ಬಾರಿ ಬೆಳೆದ ಒಂದು ಟನ್‌ನಷ್ಟು ಸೀತಾಫಲ ಹಣ್ಣುಗಳನ್ನು ಬೆಂಗಳೂರಿನ ಮೆಟ್ರೋ ಮಾಲ್‌ಗೆ ಮಾರಾಟ ಮಾಡಿದ್ದಾರೆ. `ಮಾರ್ಕೆಟ್‌ಗಿಂತ ಕಡಿಮಿ ರೇಟಿಗೆ ವಸ್ತುಗಳನ್ನು ಮಾರೋ ಮೆಟ್ರೋ ಮಾಲ್‌ನಲ್ಲೇ ನಮ್ಮ ಹಣ್ಣು ಸದ್ಯ ಕೇಜಿಗೆ 140 ರೂಪಾಯಿ ಹಂಗ ಮಾರಾ ಕುಂತೈತಿ, ಇದರ ಮ್ಯಾಲ ನಿಂವ ಲೆಕ್ಕ ಹಾಕ್ರಿ' ಎನ್ನುವ ಪಾಟೀಲರು `ಒಂದ್ ವೇಳೆ ನಾವ್ ಅನ್ನಕೊಂಡಂಗ್ ರಫ್ತು ಮಾಡೋ ಅವಕಾಶ ಸಿಕ್ರ್ ಒಂದ ಕೇಜಿಗೆ 200 ರೂಪಾಯಿ ಕಡಿಮಿ ಇಲ್ದಂಗ್ ಹಣ್ಣ್ ಮಾರತೈತಿ ನೋಡ್ರಿ' ಎನ್ನುತ್ತಾರೆ.

`ಎಕ್ರೆಗೆ 200 ಗಿಡ. ಒಂದ್ ಗಿಡಕ್ ಕಡಿಮಿ ಅಂದ್ರೂ 50 ಕೇಜಿ ಇಳುವರಿ. ಇದಕ್ ಬರೀ 100 ರೂಪಾಯಿ ಹಂಗ್ ರೇಟ್ ಹಾಕಿ ಲೆಕ್ಕ ಮಾಡಿ ನೋಡ್ರಿ, ಎಷ್ಟ ಲಾಭ ಬರತೈತಿ' ಎನ್ನುವ ಪಾಟೀಲರು `ಎಕ್ರೆಗೆ 8 ರಿಂದ 10 ಲಕ್ಷಕ್ಕ ಮೊಸ ಇಲ್ಲ ನೋಡ್ರಿ' ಎನ್ನುತ್ತಾರೆ. ಮುಂಬರುವ ಮಾರ್ಚ್ ವೇಳೆಗೆ `ಅರ್ಕಾ ಸಹನ' ತಳಿಯನ್ನು ಐದು ಎಕರೆ ಜಮೀನಿಗೆ ವಿಸ್ತರಿಸುವ ಯೋಜನೆ ಕೂಡ ಹೊಂದಿದ್ದಾರೆ.
ಇತರೆ ರೈತರು ಕೂಡ ತಮ್ಮಂತೆ ಈ ತಳಿ ಬೆಳೆದು ಲಾಭ ಪಡೆಯಲಿ ಎನ್ನುವ ಅವರು ಆಸಕ್ತ ರೈತರು ಸಂಪರ್ಕಿಸಿದರೆ ಮಾರ್ಗದರ್ಶನ ನೀಡಲು ಸಿದ್ಧವಿರುವುದಾಗಿ ತಿಳಿಸುತ್ತಾರೆ.
ಆಸಕ್ತರು ಕನಮಡಿಯಿಂದ ಕಕಮರಿಗೆ ಹೋಗುವ ಮಾರ್ಗದಲ್ಲಿರುವ ಅವರ ತೋಟಕ್ಕೆ ಭೇಟಿ ನೀಡಬಹುದು. ಸಂಪರ್ಕಕ್ಕೆ: 96631 55343.
`ಅರ್ಕಾ ಸಹನ' ವೈಶಿಷ್ಟ್ಯ
ಸುಮಾರು 17 ವರ್ಷಗಳ ಕಾಲ ಸಂಶೋಧನೆ ನಡೆಸಿ `ಅರ್ಕಾ ಸಹನ' ತಳಿ ಅಭಿವೃದ್ಧಿಪಡಿಸಿರುವ ಐಐಎಚ್‌ಆರ್‌ನ ಹಣ್ಣಿನ ಬೆಳೆ ವಿಭಾಗದ ಹಿರಿಯ ವಿಜ್ಞಾನಿಗಳಾದ ಎಸ್.ಎಚ್.ಜಾಲಿಕೊಪ್ಪ (ನಿವೃತ್ತ) ಹಾಗೂ ಸಂಪತ್ ಕುಮಾರ್ ಅವರು ಹೇಳುವಂತೆ ಐಲ್ಯಾಂಡ್ ಜೆಮ್ ಮತ್ತು ಮ್ಯಾಮತ್ ತಳಿಗಳ ಸಂಕರಣದಿಂದ ರೂಪಿಸಿರುವ ಈ ತಳಿಯಲ್ಲಿ `ಸಹನ' ಎನ್ನುವ ಪದವೇ ಆ ಹಣ್ಣಿನ ತಾಳಿಕೆ ಶಕ್ತಿಯ ಸೂಚಕವಾಗಿದೆ. ಸಾಮಾನ್ಯ ಸೀತಾಫಲ ಕಾಯಿ ಹಣ್ಣಾದ ನಂತರ 3-4 ದಿನ ಮಾತ್ರ ಬಾಳಿಕೆ ಬಂದರೆ `ಸಹನ' 7-8 ದಿನ ಗುಣಮಟ್ಟ ಕಾಯ್ದುಕೊಳ್ಳುತ್ತದೆ. ಜತೆಗೆ ಬಣ್ಣ, ರುಚಿ, ಇಳುವರಿಯಲ್ಲಿ ಸಾಮಾನ್ಯ ತಳಿಗೆ ಹೋಲಿಕೆ ಮಾಡಲಾಗದ ಈ ತಳಿ ಮಿಲಿ ಬಗ್ (ಬಿಳಿ ತಿಗಣಿ) ಕೀಟಗಳ ನಿರೋಧಕ ಶಕ್ತಿ ಹೊಂದಿದೆ.
ಸಾಮಾನ್ಯ ಸೀತಾಫಲ ಗರಿಷ್ಠ 100-150 ಗ್ರಾಂ ನಷ್ಟು ಬೆಳೆದರೆ `ಸಹನ' ತಳಿ ಗರಿಷ್ಠ ತೂಕ ಒಂದು ಕೇಜಿಯಿಂದ ಒಂದೂವರೆ ಕೇಜಿ. ಸಾಮಾನ್ಯ ಸೀತಾಫಲ ಹಣ್ಣಿನಲ್ಲಿ 100 ಗ್ರಾಂಗೆ 30 ಬೀಜಗಳು ಇದ್ದರೆ, ಇದರಲ್ಲಿ ಇರುವುದು 7-8 ಮಾತ್ರ. ಇದು ಸಾಮಾನ್ಯ ನಾಟಿ ತಳಿಯಂತಲ್ಲ.
ಇದರಲ್ಲಿ ಗುಣಮಟ್ಟದ ಫಲ ದೊರೆಯಬೇಕಾದರೆ ಇದಕ್ಕೆ ಸಕಾಲದಲ್ಲಿ ಕೃತಕ ಪರಾಗ ಸ್ಪರ್ಶ ಮಾಡಬೇಕು. ಇದರಿಂದ ಶೇ.90ರಷ್ಟು ಏಕರೂಪದ ಹಣ್ಣು ದೊರೆಯುತ್ತದೆ.`ಅರ್ಕಾ ಸಹನ' ನಾಟಿ ಮಾಡಿದ ಮೂರು ವರ್ಷಗಳ ನಂತರ ಫಲ ನೀಡಲು ಪ್ರಾರಂಭಿಸುತ್ತದೆ. ಐದು ವರ್ಷಗಳ ನಂತರ ಗಿಡವೊಂದು 50 ಕೆಜಿಗೂ ಅಧಿಕ ಇಳುವರಿ ಕೊಡುತ್ತದೆ.
ಮಳೆ ನೀರು ಹಾಗೂ ವಾತಾವರಣದಲ್ಲಿನ ತೇವಾಂಶ ಬಳಸಿಕೊಂಡು ಸಮೃದ್ಧವಾಗಿ ಬೆಳೆಯುವ ಈ ಸೀತಾಫಲ ಗಿಡಗಳಿಗೆ ಇತರೆ ತೋಟಗಾರಿಕೆ ಬೆಳೆಗಳಂತೆ ವಿಶೇಷ ಆರೈಕೆ ಬೇಕಾಗಿಲ್ಲ. ಜತೆಗೆ ಈ ತಳಿಗೆ ಕೀಟ,ರೋಗ ಬಾಧೆ ತಟ್ಟದು. ಒಂದು ಗಿಡ 25 ವರ್ಷ ಬದುಕುತ್ತದೆ. ವಿಜಾಪುರ, ಬಾಗಲಕೋಟೆ, ಕೋಲಾರ ಸೇರಿದಂತೆ ಆಂಧ್ರಪ್ರದೇಶ, ಉತ್ತರ ಭಾರತದ ಕೆಲ ಪ್ರದೇಶಗಳಲ್ಲಿ ಈ ತಳಿಯನ್ನು ಬೆಳೆಯಲಾಗುತ್ತಿದೆ.

( ಪ್ರಜಾವಾಣಿ ದಿನಪತ್ರಿಕೆ ಕರ್ನಾಟಕ ದರ್ಶನ ಪುರವಣಿಯ ಕೃಷಿ ಪುಟದಲ್ಲಿ ಮಂಗಳವಾರ ಫೆಬ್ರುವರಿ 19, 2013 ರಂದು ಪ್ರಕಟವಾದ ಲೇಖನ
 

No comments:

Post a Comment