
ಅವರೆ ಕಾಯಿ ಎಲ್ಲರ ಅಚ್ಚುಮೆಚ್ಚಿನ ತರಕಾರಿ. ಸುಮಾರು ಮೂರು ತಿಂಗಳು ಅದರ ಸೀಸನ್. ಆದರೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸರ್ವಋತು ಅವರೆ ತಳಿಯೊಂದನ್ನು ಸಂಶೋಧಿಸಿ ಬಿಡುಗಡೆ ಮಾಡಿದ್ದಾರೆ. ಅದನ್ನು ವರ್ಷದ ಉದ್ದಕ್ಕೂ ಬೆಳೆಯಬಹುದು. ಸಮತಟ್ಟಾದ ನೀರು ನಿಲ್ಲದ ಭೂಮಿಯಲ್ಲಿ ಉತ್ತಮ ಇಳುವರಿ ಕೊಡುತ್ತದೆ. ಬಿತ್ತನೆ ಮಾಡಿದ 70ರಿಂದ 75 ದಿನಗಳಲ್ಲಿ ಹಸಿ ಕಾಯಿಗಳನ್ನು ಹಾಗೂ 100ರಿಂದ 105 ದಿನಗಳಿಗೆ ಒಣ ಕಾಯಿಗಳನ್ನು ಕೊಯ್ಲು ಮಾಡಬಹುದು. ಪ್ರತಿ ಹೆಕ್ಟೇರ್‌ಗೆ 10-12 ಕ್ವಿಂಟಲ್ ಒಣ ಕಾಯಿ ಮತ್ತು 30-35 ಕ್ವಿಂಟಲ್ ಹಸಿ ಕಾಯಿ ಇಳುವರಿ ಪಡೆಯಬಹುದು. ಹೆಕ್ಟೇರ್‌ಗೆ 30 ಕೆ.ಜಿ ಬಿತ್ತನೆ ಬೀಜ ಬೇಕಾಗುತ್ತದೆ.
ಈ ತಳಿಯನ್ನು ಡಿಸೆಂಬರ್ ಹಾಗೂ ಜನವರಿ ಹೊರತುಪಡಿಸಿ ವರ್ಷದ ಯಾವ ತಿಂಗಳಲ್ಲಾದರೂ ಬಿತ್ತನೆ ಮಾಡಬಹುದು ಎನ್ನುತ್ತಾರೆ ತಳಿ ಸಂಶೋಧನೆಯಲ್ಲಿ ಪ್ರಮುಖ ಪಾತ್ರವಹಿಸಿದ ಹಿರಿಯ ವಿಜ್ಞಾನಿ ಡಾ.ಎಂ. ಭೈರೇಗೌಡರು.
ಬಿತ್ತನೆ ವಿಧಾನ: ಪ್ರತಿ ಹೆಕ್ಟೇರ್‌ಗೆ 8 ಟನ್ ಕೊಟ್ಟಿಗೆ ಗೊಬ್ಬರ ಸೇರಿಸಿ ಭೂಮಿಯನ್ನು ಹದಗೊಳಿಸಬೇಕು. ಪ್ರತಿ ಸಾಲುಗಳ ನಡುವೆ 45 ಸೆಂ.ಮೀ ಅಂತರ ಇರಬೇಕು. ಹೆಕ್ಟೇರ್‌ಗೆ 25 ಕೆ.ಜಿ ಪೊಟ್ಯಾಶ್ ಗೊಬ್ಬರವನ್ನು ಬೀಜದೊಂದಿಗೆ ಸಾಲಿನಲ್ಲಿ ಹಾಕಬೇಕು. ಬೀಜಗಳ ನಡುವಿನ ಅಂತರ 15 ಸೆಂ.ಮೀ ಇರಬೇಕು. ಬಿತ್ತನೆಗೆ ಮೊದಲು ರೈಜೋಬಿಯಂನಿಂದ ಬೀಜೋಪಚಾರ ಮಾಡಬೇಕು. ಬಿತ್ತನೆಯ ನಂತರ ಹವಾಗುಣಕ್ಕೆ ಅನುಗುಣವಾಗಿ ಅಂತರ ಬೇಸಾಯ ಮಾಡಬೇಕು.
ಭೂಮಿಯಲ್ಲಿ ನೀರು ನಿಲ್ಲದಂತೆ ಮೋಡಿಕೊಳ್ಳಬೇಕು. ಹೂ ಹಾಗೂ ಕಾಯಿ ಬಿಡುವ ಸಮಯದಲ್ಲಿ ದಾಳಿ ಮಾಡುವ ಕೀಟಗಳನ್ನು ನಿಯಂತ್ರಿಸಲು ಗಮನ ಕೊಡಬೇಕು.
ಕಾಯಿ ಕೊರಕ ಹುಳುಗಳ ಬಾಧೆಗೆ 0.5 ಮಿ.ಲೀ ಇಂಡಾಕ್ಸ್‌ಕಾರ್ಬ್ 14.5 ಎಸ್.ಸಿ ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ 10-12 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪರಣೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಡಾ.ಎಂ. ಭೈರೇಗೌಡರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್: 97414 14657.
( ಪ್ರಜಾವಾಣಿ ದಿನಪತ್ರಿಕೆಯ ಕರ್ನಾಟಕ ದರ್ಶನ ಪುರವಣಿಯ ಕೃಷಿ ಪುಟದಲ್ಲಿ 26 ಮೇ 2011ರಂದು ಪ್ರಕಟವಾದ ಲೇಖನ )
No comments:
Post a Comment