Thursday, October 13, 2011

ಬೆಂಗಳೂರಿನ ಬನಶಂಕರಿ ಅಮ್ಮ

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ದೇವಸ್ಥಾನ ರಾಹುಕಾಲದ ವಿಶೇಷ ಪೂಜೆಯಿಂದಾಗಿ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ.



1915ರಲ್ಲಿ ಬೆಂಗಳೂರಿನ ಬಸಪ್ಪ ಶೆಟ್ಟಿ ಎಂಬ ವರ್ತಕರು ಬಾದಾಮಿ ಬನಶಂಕರಿಯ ಜಾತ್ರೆಗೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಅಲ್ಲಿನ ಅರ್ಚಕರ ಕನಸಿನಲ್ಲಿ ಬನಶಂಕರಿ ದೇವಿಯು ಕಾಣಿಸಿಕೊಂಡು ಬೆಂಗಳೂರಿನಲ್ಲಿ ತನಗೊಂದು ದೇವಸ್ಥಾನ ಕಟ್ಟಿಸುವಂತೆ ಸೂಚಿಸಿದಳಂತೆ.

ಇದನ್ನು ತಿಳಿದ ಬಸಪ್ಪ ಶೆಟ್ಟಿಯವರು ತಮ್ಮ ಮಗ ಸೋಮಣ್ಣನಿಗೆ ಈ ವಿಷಯ ಹೇಳಿದ್ದರು. ಕೆಲ ಕಾಲಾನಂತರ ಸೋಮಣ್ಣ ಶೆಟ್ಟರು ಭಕ್ತರ ಸಹಕಾರದಿಂದ ಈ ದೇವಸ್ಥಾನವನ್ನು ಕಟ್ಟಿಸಿ ಬಾದಾಮಿಯಿಂದ ತಂದ ಬನಶಂಕರಿ ಅಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎನ್ನಲಾಗಿದೆ.
ರಾಹುಕಾಲದ ಪೂಜೆ ಈ ದೇವಸ್ಥಾನದ ವಿಶೇಷ.ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ದಿನಗಳಂದು ಈ ಪೂಜೆ ನಡೆಯುತ್ತದೆ. ಈ ಪೂಜೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕತ್ತರಿಸಿ ತಿರುಳು ತೆಗೆದ ನಿಂಬೆಹಣ್ಣಿನ ಸಿಪ್ಪೆಗಳನ್ನು ದೀಪ ಮಾಡಿಕೊಂಡು ತುಪ್ಪ, ಎಣ್ಣೆಗಳ ದೀಪ ಹಚ್ಚಿ ದೇವಿಗೆ ಬೆಳಗುತ್ತಾರೆ.

ಹದಿನಾರು ವಾರಗಳ ಕಾಲ ನಿಂಬೆ ಹಣ್ಣಿನ ಆರತಿ ಬೆಳಗಿದರೆ ಕಷ್ಟಕೋಟಲೆಗಳೆಲ್ಲ ಕಳೆಯುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.


ರಾಹು ಕಾಲ ಪೂಜೆಗಾಗಿ ದೇವಸ್ಥಾನಕ್ಕೆ ಮಂಗಳವಾರ, ಶುಕ್ರವಾರಗಳಂದು ಐದಾರು ಸಾವಿರ ಜನ ಬರುತ್ತಾರೆ. ಭಾನುವಾರ ಹತ್ತು ಸಾವಿರಕ್ಕೂ ಅಧಿಕ ಜನ ಬರುತ್ತಾರೆ ಎನ್ನುತ್ತಾರೆ ದೇವಸ್ಥಾನದ ಅರ್ಚಕರು.

ವಿಶೇಷ ಪೂಜೆ ನಡೆಯುವ ದಿನಗಳಂದು ಪ್ರಸಾದ ವಿತರಿಸುತ್ತಾರೆ. ದೇವಿಗೆ ಭಕ್ತರು ಅರ್ಪಿಸುವ ಸೀರೆಗಳನ್ನು ಪ್ರತಿ ಶುಕ್ರವಾರ ಹರಾಜು ಹಾಕುತ್ತಾರೆ.ಪ್ರತಿ ಗುರುವಾರ ಸುವರ್ಣ ಪದ್ಮಾರ್ಚನೆ ಸೇವೆ ಹಾಗೂ ಹುಣ್ಣಿಮೆ ದಿನದಂದು ಸಾಮೂಹಿಕ ಸತ್ಯ ನಾರಾಯಣ ಪೂಜೆ, ದುರ್ಗಾ ಹೋಮ ನಡೆಯುತ್ತವೆ.
ಈ ದೇವಸ್ಥಾನವನ್ನು 1984ರಲ್ಲಿ ಸರ್ಕಾರವು ಧಾರ್ಮಿಕ ದತ್ತಿ ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡು ನವೀಕರಣಗೊಳಿಸಿದೆ. ಸುಂದರವಾದ ಗೋಪುರ ನಿರ್ಮಿಸಿದೆ.

ಗರ್ಭಗುಡಿಯಲ್ಲಿ ಅಷ್ಟಭುಜಗಳ ಸಿಂಹವಾಹಿನಿ ಬನಶಂಕರಿ ಅಮ್ಮನ ಮೂರ್ತಿ ಇದೆ. ಗರ್ಭ ಗುಡಿಯ ಎಡಭಾಗದಲ್ಲಿ ಈಶ್ವರ ಹಾಗೂ ಬಲಭಾಗಕ್ಕೆ ಗಣೇಶನ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಬಲಕ್ಕೆ ಚೌಡೇಶ್ವರಿ ಹಾಗೂ ಶಾಕಾಂಬರಿಯ ದೇವಸ್ಥಾನಗಳಿವೆ.  ನವಗ್ರಹ ದೇವಸ್ಥಾನ ಮತ್ತು ಹೋಮ ಶಾಲೆಯೂ ಇದೆ.

ಸೆಪ್ಟೆಂಬರ್ ತಿಂಗಳಲ್ಲಿ ಬನಶಂಕರಿ ದೇವಿಯ ಉತ್ಸವ, ಅಕ್ಟೋಬರ್‌ನಲ್ಲಿ ದಸರಾ ಹಾಗೂ ಡಿಸೆಂಬರ್-ಜನವರಿಯಲ್ಲಿ ದೇವಾಲಯದ ವಾರ್ಷಿಕೋತ್ಸವ ಹೀಗೆ ಮೂರು ಪ್ರಮುಖ ಉತ್ಸವಗಳನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ, ಶುಕ್ರವಾರ ಹಾಗೂ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಹಾಗೂ ಮಧ್ಯಾಹ್ನ 4.30 ರಿಂದ ರಾತ್ರಿ 9.30 ರ ವರೆಗೆ ಹಾಗೂ ಇತರೆ ದಿನಗಳು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಹಾಗೂ ಮಧ್ಯಾಹ್ನ 4.30 ರಿಂದ ರಾತ್ರಿ 8.30 ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ.
ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ಬೆಂಗಳೂರಿನ ಪ್ರಮುಖ ಬಡಾವಣೆಗಳಿಂದ ದೇವಸ್ಥಾನಕ್ಕೆ ನೇರ ಬಸ್ಸಿನ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ನಂಬರ್: 26714989.



( ಪ್ರಜಾವಾಣಿ ದಿನಪತ್ರಿಕೆಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಗುರುವಾರ, ಜೂನ್ 9, 2011 ರಂದು ಪ್ರಕಟವಾದ ಲೇಖನ)

No comments:

Post a Comment