ಮಾವು, ಬಾಳೆ, ಸಪೋಟಗಳನ್ನು ಬೇಗ ಹಣ್ಣು ಮಾಡಲು ವ್ಯಾಪಾರಿಗಳು ಕ್ಯಾಲ್ಷಿಯಂ ಕಾರ್ಬೈಡ್ ಮತ್ತಿತರ ರಾಸಾಯನಿಕಗಳ ಮೊರೆ ಹೋಗುತ್ತಿದ್ದಾರೆ. ಕೃತಕವಾಗಿ ಹಣ್ಣು ಮಾಡುವ ಕ್ರಮ ಕಾನೂನುಬಾಹಿರ. ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಕಡಿಮೆ ವೆಚ್ಚದಲ್ಲಿ ಹಣ್ಣು ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ.
ಅಮಾರುಕಟ್ಟೆಯ ಬೇಡಿಕೆ ಪೂರೈಸುವ ಭರದಲ್ಲಿ ವ್ಯಾಪಾರಿಗಳು ವಿವಿಧ ದೋರಗಾಯಿಗಳನ್ನು ಕೃತಕವಾಗಿ ಹಣ್ಣಾಗಿಸಲು ಕ್ಯಾಲ್ಷಿಯಂ ಕಾರ್ಬೈಡ್‌ನಂತಹ ರಾಸಾಯನಿಕಗಳ ಮೊರೆ ಹೋಗುತ್ತಿದ್ದಾರೆ.
ಇಂದು ಮಾರುಕಟ್ಟೆಯಲ್ಲಿ ಸಿಗುವ ಬಹುಪಾಲು ಹಣ್ಣುಗಳನ್ನು ಕೃತಕವಾಗಿ ಹಣ್ಣು ಮಾಡಲಾಗಿದ್ದು ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಹಣ್ಣು ಮಾಡಲು ಬಳಸುವ ರಾಸಾಯನಿಕಗಳು ಗ್ರಾಹಕರ ಆರೋಗ್ಯಕ್ಕೆ ಹಾನಿಕಾರಿ.
ಕ್ಯಾಲ್ಷಿಯಂ ಕಾರ್ಬೈಡ್‌ನಲ್ಲಿ ಆರ್ಸೆನಿಕ್ ಹೈಡ್ರೈಡ್ ಹಾಗೂ ರಂಜಕದ ಹೈಡ್ರೈಡ್ ಅಂಶಗಳಿವೆ. ರಾಸಾಯನಿಕ ಬಳಸಿದ ಹಣ್ಣುಗಳನ್ನು ತಿನ್ನುವವರು ಹೃದಯಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಸಂಭವ ಇದೆ.
ಭಾರತ ಸರ್ಕಾರ ಹಣ್ಣುಗಳನ್ನು ಮಾಗಿಸಲು ಬಳಸುವ (ಪಿ.ಎಫ್.ಎ ನಿಯಮ 8-44 ಎಎ, 1954ರ ಅನುಸಾರ) ಕ್ಯಾಲ್ಷಿಯಂ ಕಾರ್ಬೈಡ್ ಬಳಕೆಯನ್ನು ನಿಷೇಧಿಸಿದೆ. ಆದರೂ ವ್ಯಾಪಾರಿಗಳು ಕಾನೂನು ಮತ್ತು ಗ್ರಾಹಕರ ಆರೋಗ್ಯವನ್ನು ನಿರ್ಲಕ್ಷಿಸಿ ಕ್ಯಾಲ್ಷಿಯಂ ಕಾರ್ಬೈಡ್ ಹಾಗೂ ಇತರ ಅಪಾಯಕಾರಿ ರಾಸಾಯನಿಕಗಳ ಬಳಕೆ ಮಾಡುತ್ತಿದ್ದಾರೆ.
ಇದರಿಂದಾಗಿ ಹಣ್ಣುಗಳಲ್ಲಿ ರಾಸಾಯನಿಕ ಮಲೀನತೆ ಉಂಟಾಗುತ್ತದೆ. ನೋಡಲು ಆಕರ್ಷಕವಾಗಿ ಕಾಣುವ ಹಣ್ಣುಗಳು ಸ್ವಾದ ಕಳೆದುಕೊಳ್ಳುತ್ತವೆ. ಬೇಗ ಕೊಳೆತು ಹೋಗುತ್ತವೆ.
ಕೊಯ್ಲು ಮಾಡಿದ ನಂತರ ಕಾಯಿಯಲ್ಲಿ ಉತ್ಪತ್ತಿಯಾಗುವ ಇಥಿಲೀನ್ ಅನಿಲವು ನೈಸರ್ಗಿಕವಾಗಿ ಕಾಯಿಯನ್ನು ಹಣ್ಣಾಗಿಸಲು ಸಹಾಯ ಮಾಡುತ್ತದೆ. ಆದರೆ ನೈಸರ್ಗಿಕ ಮಾಗುವಿಕೆ ನಿಧಾನ ಗತಿಯದು. ಇದರಿಂದ ಹಣ್ಣುಗಳ ತೂಕ ಕಳೆದುಕೊಳ್ಳುವುದಲ್ಲದೆ ಒಣಗುವ ಹಾಗೂ ಸರಿಯಾಗಿ ಮಾಗದಿರುವ ಸಮಸ್ಯೆ ಎದುರಿಸುತ್ತವೆ.
ಕಾಯಿಗಳನ್ನು ಹಣ್ಣಾಗಿಸಲು ದೊಡ್ಡ ವ್ಯಾಪಾರಿಗಳು ಇಥಿಲೀನ್ ಅನಿಲ ಉತ್ಪಾದಿಸುವ ಯಂತ್ರಗಳ ಮೊರೆ ಹೋಗುತ್ತಾರೆ. ಬಂಡವಾಳದ ದೃಷ್ಟಿಯಿಂದ ಇದು ರೈತರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ದುಬಾರಿಯದು.
ಆದ್ದರಿಂದ ಅವರು ಕಡಿಮೆ ವೆಚ್ಚದ ಕ್ಯಾಲ್ಷಿಯಂ ಕಾರ್ಬೈಡ್ ಬಳಸುತ್ತಾರೆ. ಇದಕ್ಕೆ ಪರಿಹಾರವಾಗಿ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಸಣ್ಣ ವ್ಯಾಪಾರಿಗಳು ಹಾಗೂ ಬಡ ರೈತರೂ ಬಳಸಬಹುದಾದ `ಕಡಿಮೆ ವೆಚ್ಚದಲ್ಲಿ ಹಣ್ಣುಗಳನ್ನು ಮಾಗಿಸುವ ವಿಧಾನವನ್ನು ಪರಿಚಯಿಸಿದೆ.
ಈ ವಿಧಾನದಲ್ಲಿ ಕಾಯಿಗಳನ್ನು ನೈಸರ್ಗಿಕವಾಗಿ ಹಣ್ಣಾಗಿಸುವ ಇಥಿಲೀನ್ ಅನಿಲವನ್ನು ಇಥ್ರೆಲ್ ಅಥವಾ ಇಥೊಫಾನ್ ದ್ರಾವಣದಿಂದ ಉತ್ಪಾದಿಸಿ ಅದರಿಂದ ರಾಸಾಯನಿಕ ಮುಕ್ತ ಹಣ್ಣು ಪಡೆಯಬಹುದು.
ವಿಧಾನ: ಗಾಳಿಯಾಡುವ ಕ್ರೇಟ್‌ಗಳಲ್ಲಿ ಕಾಯಿಗಳನ್ನಿಟ್ಟು ಅವನ್ನು ಪ್ಲಾಸ್ಟಿಕ್ ಟೆಂಟ್‌ನಲ್ಲಿ ಇಡಬೇಕು. ನಂತರ ಅದರೊಳಕ್ಕೆ ಇಥ್ರೆಲ್ ದ್ರಾವಣವನ್ನು ಇಟ್ಟು ಅದಕ್ಕೆ ಸೋಡಿಯಂ ಹೈಡ್ರಾಕ್ಸೈಡ್ (ಕಾಸ್ಟಿಂಗ್ ಸೋಡಾ) ಬೆರೆಸಿ, ಟೆಂಟ್‌ನ್ನು ಗಾಳಿಯಾಡದಂತೆ ಭದ್ರಪಡಿಸಬೇಕು.
ಹೀಗೆ ಮಾಡಿದಾಗ ಟೆಂಟ್‌ನೊಳಗೆ ಉತ್ಪತ್ತಿಯಾಗುವ ಇಥಿಲೀನ್ ಅನಿಲವು ಕಾಯಿಗಳನ್ನು ಸಹಜವಾಗಿ ಹಣ್ಣಾಗಲು ಸಹಾಯಮಾಡುತ್ತದೆ. ಒಂದು ದಿನದ ನಂತರ ಹಣ್ಣುಗಳನ್ನು ಟೆಂಟ್‌ಗಳಿಂದ ಹೊರತೆಗೆದು ಸಾಮಾನ್ಯ (18-24 ಸೆಂಟೀಗ್ರೆಡ್) ಉಷ್ಣಾಂಶದಲ್ಲಿ ಇಡಬೇಕು.
ಈ ವಿಧಾನದಲ್ಲಿ ಮಾವು, ಬಾಳೆ, ಸಪೋಟ, ಪಪ್ಪಾಯಿ ಹಾಗೂ ಸೀತಾಫಲ ಇತ್ಯಾದಿಗಳ ದೋರಕಾಯಿಗಳನ್ನು ಹಣ್ಣು ಮಾಡಬಹುದು. ಹೀಗೆ ಮಾಡುವ ಹಣ್ಣುಗಳು ಆಕರ್ಷವಾದ ಬಣ್ಣ ಪಡೆದುಕೊಳ್ಳುತ್ತವೆ.
ಇವುಗಳ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತವೆ. ಪ್ಲಾಸ್ಟಿಕ್ ಟೆಂಟ್‌ನ ಬದಲು ಗಾಳಿಯಾಡದ ಕೊಠಡಿಯಲ್ಲೇ ಇಥಿಲೀನ್ ಅನಿಲ ಉತ್ಪಾದಿಸಲು ಈ ಕ್ರಮ ಬಳಸಬಹುದು.
ಮಾವಿನ ಕಾಯಿಗಳಿಗೆ 24 ಗಂಟೆಗಳ ಕಾಲ 100 ಪಿಪಿಎಮ್ ಇಥಿಲೀನ್ ಅನಿಲವನ್ನು ಒದಗಿಸಿದರೆ ಕೇವಲ ಐದು ದಿನಗಳಲ್ಲಿ ಹಣ್ಣಾಗುತ್ತವೆ. ಬಾಳೆಕಾಯಿಗೆ 18 ಗಂಟೆ ಕಾಲ 100 ಪಿಪಿಎಮ್ ಇಥಿಲೀನ್ ಅನಿಲದಿಂದ ಉಪಚರಿಸಿ ಸಾಮಾನ್ಯ ಉಷ್ಣಾಂಶದಲ್ಲಿ ಇಟ್ಟರೆ ನಾಲ್ಕು ದಿನಗಳಲ್ಲಿ ಹಣ್ಣಾಗುತ್ತವೆ.
20 ಸೆಂಟಿಗ್ರೇಡ್ ಉಷ್ಣಾಂಶದಲ್ಲಿಟ್ಟರೆ ಆರು ದಿನಗಳಲ್ಲಿ ಹಣ್ಣಾಗುತ್ತವೆ. ಒಂದು ಮೀಟರ್ ಉದ್ದ, ಅಗಲ, ಎತ್ತರದ (ಒಂದು ಘನ ಮೀಟರ್) ಟೆಂಟ್‌ನಲ್ಲಿ ಸುಮಾರು 200 - 250 ಕೆ.ಜಿ ಕಾಯಿಗಳನ್ನಿಟ್ಟು ಹಣ್ಣು ಮಾಡಬಹುದು. ಇದಕ್ಕೆ ಎರಡು ಎಂ.ಎಲ್ ಇಥ್ರೆಲ್ ದ್ರಾವಣಕ್ಕೆ ಎರಡು ಗ್ರಾಂ ಸೋಡಿಯಂ ಹೈಡ್ರಾಕ್ಸೈಡ್ ಬೆರೆಸಬೇಕು.
ಒಂದು ಘನ ಮೀಟರ್‌ನ ಟೆಂಟ್ ನಿರ್ಮಿಸಲು ಸುಮಾರು 1500-1600 ರೂಪಾಯಿ ವೆಚ್ಚವಾಗುತ್ತದೆ. ಆಸಕ್ತರು ಮಾರ್ಗದರ್ಶನ ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ವಿಳಾಸಕ್ಕೆ ಸಂಪರ್ಕಿಸಬಹುದು: ನಿರ್ದೇಶಕರು, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹೆಸರಘಟ್ಟ, ಬೆಂಗಳೂರು-560 089 (080-28466420 / 373) ಅಥವಾ ಡಾ.ಡಿ.ವಿ. ಸುಧಾಕರ ರಾವ್ - 9900820270.
( ಪ್ರಜಾವಾಣಿ ದಿನಪತ್ರಿಕೆಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಗುರುವಾರ, ಜೂನ್ 30, 2011 ರಂದು ಪ್ರಕಟವಾದ ಲೇಖನ)
No comments:
Post a Comment