ಅವರತ್ತೈದು ಅಡಿಗಳ ಎತ್ತರದ ಶಿವನ ಬೃಹತ್ ಮೂರ್ತಿ ಕರ್ನಾಟದಲ್ಲಿ ಇರುವ ಅತ್ಯಂತ ಎತ್ತರದ ಶಿವನ ಮೂರ್ತಿಗಳಲ್ಲಿ ಪ್ರಮುಖವಾದುದು. ಬಯಲು ಆಲಯದಲ್ಲಿ ಯೋಗ ಮುದ್ರೆಯಲ್ಲಿ ಕುಳಿತ ಶ್ವೇತ ವರ್ಣದ ಶಿವನ ಜಡೆಯಿಂದ ಹರಿಯುವ ಜಲ ಧಾರೆಯನ್ನು ನೋಡುವುದು ವಿಶಿಷ್ಟ ಅನುಭವ...ಬೆಂಗಳೂರಿನ ಹಳೇ ವಿಮಾನ ನಿಲ್ದಾಣ (ಎಚ್‌ಎಎಲ್) ರಸ್ತೆಯಲ್ಲಿರುವ ಶಿವ ಮಂದಿರ ಬೆಂಗಳೂರಿನ ಪ್ರಮುಖ ಶಿವ ದೇವಸ್ಥಾನಗಳಲ್ಲಿ ಒಂದು. ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಬೃಹತ್ ಶಿವನ ವಿಗ್ರಹ ಅತ್ಯಂತ ಆಕರ್ಷಕ. ವರ್ಷದ 365 ದಿನಗಳೂ ಶಿವನ ದರ್ಶನಕ್ಕೆ ಅವಕಾಶವಿದೆ.
ರವಿ ಮೇಲ್ವಾನಿ (ಆರ್‌ವಿಎಂ) ಪ್ರತಿಷ್ಠಾನ 1995ರಲ್ಲಿ ಶಿವ ಮಂದಿರ ಹಾಗೂ ಮೂರ್ತಿಯನ್ನು ನಿರ್ಮಿಸಿದೆ. ಈ ಶಿವ ಮಂದಿರಕ್ಕೆ ಮಹಾಶಿವರಾತ್ರಿ ದಿನದಂದು ಲಕ್ಷಾಂತರ ಜನರು ಬಂದು ದರ್ಶನ ಪಡೆಯುತ್ತಾರೆ. ಬೆಂಗಳೂರಿನ ವಿಶೇಷ ಆಕರ್ಷಣೆಯ ಕೇಂದ್ರಗಳಲ್ಲಿ ಇದೂ ಒಂದು.
ಶಿವ ಮಂದಿರವನ್ನು ಪ್ರವೇಶಿಸುವುದಕ್ಕೆ ಮೊದಲು 32 ಅಡಿ ಎತ್ತರದ ಬೃಹತ್ ಗಣೇಶ ವಿಗ್ರಹವಿದೆ. ಇಲ್ಲಿ ಹರಕೆ ಹೊತ್ತು `ವಿಘ್ನಹರಣ ದಾರ'ವನ್ನು ಈ ಸನ್ನಿಧಿಯಲ್ಲಿ ಕಟ್ಟಿದರೆ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡದ್ದು ಈಡೇರುತ್ತದೆ ಎಂದು ಭಕ್ತರು ನಂಬಿದ್ದಾರೆ.
ಅಲ್ಲಿಂದ ಪಹಾಡಿ ಶಿವಧಾಮ ದರ್ಶನಕ್ಕೆ ಅವಕಾಶವಿದೆ. ಗುಹೆಯ ಮಾದರಿಯಲ್ಲಿ ನಿರ್ಮಿಸಲಾಗಿರುವ ಮಂದಿರದೊಳಗೆ ಪವಿತ್ರ ಯಾತ್ರಾ ಸ್ಥಳಗಳಾದ ಹರಿದ್ವಾರ, ಹೃಷಿಕೇಶ, ಬದರಿನಾಥ, ಕೇದಾರನಾಥ ಕ್ಷೇತ್ರಗಳನ್ನು ಸಂದರ್ಶಿಸಿದ ಅನುಭವ ಉಂಟಾಗುತ್ತದೆ.
ಶಿವನ ಮೂರ್ತಿ ಹಿಂದೆ ಗುಹಾಂತರ ಧಾಮದಲ್ಲಿ ನಿರ್ಮಿಸಲಾಗಿರುವ ಭಾರತದ ಹನ್ನೆರಡು ದ್ವಾದಶ ಜ್ಯೋರ್ತಿಲಿಂಗಗಳ ದರ್ಶನ ಮಾಡಬಹುದು. ಗುಜರಾತಿನ ಸೋಮನಾಥ, ನಾಗೇಶ್ವರ, ಮಹಾರಾಷ್ಟ್ರದ ಗ್ರೀಶ್ನೇಶ್ವರ, ತ್ರಯಂಬಕೇಶ್ವರ, ಭೀಮಾಶಂಕರ, ಹಿಮಾಚಲ ಪ್ರದೇಶದ ಕೇದಾರನಾಥ, ಉತ್ತರ ಪ್ರದೇಶದ ಕಾಶಿ ವಿಶ್ವನಾಥ, ಮಧ್ಯಪ್ರದೇಶದ ಮಹಾಕಾಲೇಶ್ವರ, ಓಂಕಾರೇಶ್ವರ, ಆಂಧ್ರಪ್ರದೇಶದ ಮಲ್ಲಿಕಾರ್ಜುನ, ತಮಿಳುನಾಡಿನ ರಾಮೇಶ್ವರ ಜತೆಗೆ ಅಮರನಾಥ ಹಿಮಲಿಂಗದ ದರ್ಶನ ಮಾಡಬಹುದು. ಇಲ್ಲಿರುವ ಹಿಮಲಿಂಗವನ್ನು ಸ್ಪರ್ಶಿಸಿ ಅಮರನಾಥ ಹಿಮ ಲಿಂಗದ ಅನುಭೂತಿ ಪಡೆಯಬಹುದು.
ಮಂದಿರದ ಆವರಣದಲ್ಲಿ ಗೋಳಾಕೃತಿಯಲ್ಲಿರುವ ನವಗ್ರಹ ಪೀಠ ಇಲ್ಲಿನ ಇನ್ನೊಂದು ಆಕರ್ಷಣೆ. ಇಲ್ಲಿ ಭಕ್ತರಿಗೆ ನವಗ್ರಹ ಪೂಜೆ ಸಲ್ಲಿಸುವ ಅವಕಾಶವಿದೆ. ಆವರಣದಲ್ಲಿರುವ ರೋಗ ನಿವಾರಕ ಶಿಲೆ (ಉಪಚಾರ ಪತ್ಥರ್) ಇದೆ. ಅದನ್ನು ಅನಾರೋಗ್ಯ ಪೀಡಿತರು ಸ್ಪರ್ಶಿಸಿದರೆ ರೋಗಗಳು ವಾಸಿಯಾಗುತ್ತದೆ ಎನ್ನುವ ನಂಬಿಕೆ ಇದೆ.
ಇಲ್ಲಿನ ಮಂದಿರದಲ್ಲಿ ದೊರೆಯುವ ಇಚ್ಛಾ ನಾಣ್ಯವನ್ನು ಶಿವನ ಮೂರ್ತಿಯ ಮುಂದಿರುವ ಮಾನಸ ಸರೋವರಕ್ಕೆ ಏಳು ಬಾರಿ `ಓಂ ನಮಃ ಶಿವಾಯ' ಮಂತ್ರ ಪಠಿಸಿ ಎಸೆದರೆ ಭಕ್ತರ ಸಂಕಲ್ಪಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರದ್ದು.
ಇಲ್ಲಿನ ಶಿವನ ಮೂರ್ತಿಗೆ ಮುಂಜಾನೆ 7 ರಿಂದ 7.30ರ ಸಮಯದಲ್ಲಿ ಮಂಗಳಾರತಿ ಸೇವೆ ನಡೆಯುತ್ತದೆ. ಹಾಲಿನ ಅಭಿಷೇಕ, ಹವನ, ಅರ್ಚನೆ, ಶನಿಪೂಜೆ ಇತ್ಯಾದಿ ನಡೆಯುತ್ತವೆ. ಪ್ರತಿ ಸೋಮವಾರ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ರಾತ್ರಿ ಪೂರ್ತಿ ನಡೆಯುವ ಜಾಗರಣೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಶಿವ ಮಂದಿರಕ್ಕೆ ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆಗಳಿಂದ ಬಸ್ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ :98451 66666 ಸಂಪರ್ಕಿಸಬಹುದು.
( ಪ್ರಜಾವಾಣಿ ದಿನಪತ್ರಿಕೆಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಗುರುವಾರ, ಆಗಸ್ಟ್ 4, 2011 ರಂದು ಪ್ರಕಟವಾದ ಲೇಖನ)
No comments:
Post a Comment