Thursday, October 13, 2011

ದುಬಾರಿ ಅಂತ್ಯ ಸಂಸ್ಕಾರ !

ಸತ್ತವರ ಮೇಲೆ ಪ್ರೀತಿ ಹೆಚ್ಚಂತೆ. ಪ್ರೀತಿಪಾತ್ರರ ಅಂತ್ಯಸಂಸ್ಕಾರವನ್ನು ಭರ್ಜರಿಯಾಗಿ ಮಾಡುವ ಪದ್ದತಿ ಪೂರ್ವ ದೇಶಗಳಲ್ಲಿ ಹೆಚ್ಚು. ಆದರೆ ಚೀನಾದ ಈ ವಾಣಿಜ್ಯೋದ್ಯಮಿಯ ಮಾತೃಪ್ರೇಮವಂತೂ ಅಚ್ಚರಿ ಹುಟ್ಟಿಸುವಂತಹದ್ದು. ಆತ ತನ್ನ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಮಾಡಿದ ವೆಚ್ಚ ಬರೋಬ್ಬರಿ 7,70,000 ಡಾಲರ್! ಅಂದರೆ ರೂಪಾಯಿ ಲೆಕ್ಕದಲ್ಲಿ ಸುಮಾರು 3.85 ಕೋಟಿ !


ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತ್ಯದ ವೆನ್‌ಲಿಂಗ್ ಎಂಬಲ್ಲಿ ಮಾರ್ಚ್ 4 ರಂದು ಈ `ಅನಾಮಿಕ' ಶ್ರೀಮಂತನ ತಾಯಿಯ ಅಂತ್ಯ ಸಂಸ್ಕಾರ ನಡೆಯಿತು. ಅಂತ್ಯಸಂಸ್ಕಾರಕ್ಕಾಗಿ ತನ್ನ ಸಂಬಂಧಿಕರನ್ನು ಕರೆತರಲು ಈ ವಾಣಿಜ್ಯೋದ್ಯಮಿ ಹೂವಿನಿಂದ ಅಲಂಕರಿಸಲ್ಪಟ್ಟ ಎಂಟು ಪ್ರತಿಷ್ಠಿತ `ಲಿಂಕನ್ ಲಿಮೊಸಿನಸ್' ಕಾರುಗಳ ಜತೆಗೆ ಅನೇಕ ಲಕ್ಷುರಿ ಕಾರುಗಳನ್ನು ಕಳುಹಿಸಿದ್ದ. ಅಂತ್ಯಸಂಸ್ಕಾರದ ಭವ್ಯ ಮೆರವಣಿಗೆಯಲ್ಲಿ ಬ್ಯಾಂಡ್ ವಾದಕರ ಜೊತೆ ಸಾವಿರಾರು ಸಂಖ್ಯೆಯಲ್ಲಿ ಸಾಗಿದ ಕಪ್ಪು ಬಟ್ಟೆ ಧರಿಸಿದ ಶೋಕ ಪ್ರದರ್ಶಕರು ಸತ್ತ ಮಹಿಳೆಗೆ ಭಿತ್ತಿಪತ್ರಗಳ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರಂತೆ. ಇವೆಲ್ಲವುಗಳಿಗೆ ಭರಿಸಲಾದ ಒಟ್ಟು ಖರ್ಚು 5 ಮಿಲಿಯನ್ ಚೈನಿಸ್ ಯೆನ್.


ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಚೀನಾದಲ್ಲಿ ಇಂದಿಗೂ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಜನರು ಬಡತನದಿಂದ ನರಳುತ್ತಿದ್ದಾರೆ. ಆದರೆ ಇತ್ತೀಚಿನ ದಶಕಗಳಲ್ಲಿ ಬೆರಗುಗೊಳಿಸುವಂತಹ ಇಂತಹ ದುಬಾರಿ `ಸಂಸ್ಕಾರ'ಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ಸಂಪತ್ತಿನ ಅಸಮಾನತೆ ಹೆಚ್ಚಾಗುತ್ತಿರುವುದನ್ನು ಮನಗಂಡಿರುವ ಆಳುವ ಕಮ್ಯೂನಿಷ್ಟ್ ಪಕ್ಷ ಈ ರೀತಿಯ ದುಬಾರಿ ಸಂಸ್ಕಾರಗಳಿಗೆ ಕಡಿವಾಣ ಹಾಕುವ ಬಗ್ಗೆ ಯೋಚಿಸುತ್ತಿದೆಯಂತೆ.


( `ಸುಧಾ' ವಾರ ಪತ್ರಿಕೆಯ 24 ಮಾರ್ಚ್ 2011 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ )

No comments:

Post a Comment