Thursday, September 22, 2011

`ಕಲ್ಲು ನೆಲದಲ್ಲಿ ಅರಳಿದ ಮಲ್ಲಿಗೆ'

ಕಷ್ಟಪಟ್ಟು ದುಡಿಯುವ ಮನೋಧರ್ಮದ ಜತೆಗೆ ಪ್ರತಿಯೊಂದನ್ನು ಯೋಜನಾಬದ್ಧವಾಗಿ ನಿರ್ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಧಾರವಾಡದ ರೈತ ಗೆಳೆಯರು ಸಾಧಿಸಿ ತೋರಿಸಿದ್ದಾರೆ.


ಗುಡ್ಡದ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ಅಲ್ಲಿ ಮಲ್ಲಿಗೆ, ಕಾಕಡಾ ಮತ್ತು ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಕ್ರಮಬದ್ಧ ಕೃಷಿ ಪ್ರಯೋಗ ನೋಡಬೇಕೆಂದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೆನಾಗರಕೊಪ್ಪಕ್ಕೆ ಬನ್ನಿ.


ಈ ಸಾಹಸದ ರೂವಾರಿ ಸಿ.ಸಿ.ತೋಟದ್. ಪ್ರಯೋಗಶೀಲ ಗೆಳೆಯರ ಪ್ರತಿನಿಧಿ. ಮಲ್ಲಿಗೆ ತೋಟದಲ್ಲಿ ತೋಟದ್‌ರೊಂದಿಗೆ ಹೆಜ್ಜೆ ಹಾಕುತ್ತ ಕುತೂಹಲ ತಾಳಲಾರದೆ ಪ್ರಶ್ನೆ ಕೇಳಿದರೆ ಸಾಕು ಕೃಷಿ ಸಂಬಂಧಿಸಿದ ವರ್ತಮಾನ, ಭೂತ, ಭವಿಷ್ಯ ಎಲ್ಲದರ ಬಗೆಗೂ ಮಾತಾಡುತ್ತ ಹೋಗುತ್ತಾರೆ.


`ನಾನು ಒಳ್ಳೆಯ ಕಂಪನಿಯೊಂದರಲ್ಲಿ ಕೆಲಸದಲ್ಲಿದೆ. ಅಲ್ಲಿನ ಯಾಂತ್ರಿಕ ಬದುಕು, ಕಟ್ಟುಪಾಡುಗಳು ನನಗೆ ಇಷ್ಟವಾಗಲಿಲ್ಲ. ಶಾಂತಿ, ನೆಮ್ಮದಿ, ಸ್ವಾತಂತ್ರ್ಯ ಬಯಸಿ ಇಲ್ಲಿಗೆ (ಕೃಷಿಗೆ) ಬಂದೆ. ಬೇರೆ ಬೇರೆ ಉದ್ಯೋಗಗಳಲ್ಲಿ ಇರುವ ಕೆಲವು ಗೆಳೆಯರು ಪಾಲುದಾರರಾಗಿ ನನಗೆ ನೆರವಾಗಿದ್ದಾರೆ. ಅವರು ಇಲ್ಲಿಗೆ ರಜಾ ದಿನಗಳಲ್ಲಿ ಬರುತ್ತಾರೆ' ಎಂದು ಕೃಷಿ ಪ್ರಯೋಗ ಶಾಲೆ ಆರಂಭದ ಬಗ್ಗೆ ಪೀಠಿಕೆ ಹಾಕುತ್ತಾರೆ.


`ನಾಲ್ಕು ವರ್ಷಗಳ ಹಿಂದೆ ತಲಾ ಒಂದೊಂದು ಲಕ್ಷ ರೂಪಾಯಿ ಹಣ ಹಾಕಿ ನಾವೆಲ್ಲ ಇಲ್ಲಿ ಪಾಳುಬಿದ್ದ ಮೂವತ್ತು ಎಕರೆ ಗುಡ್ಡದ ಭೂಮಿಯನ್ನು ಎಕರೆಗೆ 35,000 ರೂಪಾಯಿಯಂತೆ ಖರೀದಿಸಿದೆವು. ಪರಸ್ಪರ ಸಹಕಾರದ ವಿಶ್ವಾಸವೇ ನಮ್ಮ ಬಂಡವಾಳ. ಒಂದೇ ಭೂ ದಾಖಲೆ, ಭೂಮಿ ಮೇಲೆ ಎಲ್ಲರಿಗೂ ಸಮಾನ ಹಕ್ಕಿದೆ' ಎನ್ನುತ್ತಾರೆ.


ಮೂವತ್ತು ಎಕರೆಯಲ್ಲಿ 24 ಎಕರೆ ಪ್ರದೇಶವನ್ನು ಮಾತ್ರ ಸಾಗುವಳಿ ಮಾಡಿ ಉಳಿದ ಆರು ಎಕರೆಯಲ್ಲಿ ಕಾಡು ಸಸಿಗಳನ್ನು ಬೆಳೆಸಿದ್ದಾರೆ. ಅಷ್ಟರಲ್ಲೇ ಕೆರೆಯೊಂದನ್ನೂ ನಿರ್ಮಿಸಿದ್ದಾರೆ. ಮೊದಲ ವರ್ಷದಲ್ಲಿಯೇ ಸುಜಲ ಜಲಾನಯನ ಯೋಜನೆಯ ಸಹಕಾರದೊಂದಿಗೆ ತಡೆಗೋಡೆ ನಿರ್ಮಿಸಿದ್ದಾರೆ. ಭೂ ಫಲವತ್ತತೆ ಕೊಚ್ಚಿ ಹೋಗದಂತೆ ಅಲ್ಲಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ನೀರು ಇಂಗಿಸುತ್ತಿದ್ದಾರೆ. ಎರಡು ಕೊಳವೆ ಬಾವಿಗಳನ್ನು ಕೊರೆಸಿ ತುಂತುರು ನೀರಾವರಿ ಮಾಡಿ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ.


ಹನ್ನೆರಡು ಎಕರೆಯಲ್ಲಿ ದುಂಡು ಮಲ್ಲಿಗೆ, ಆಬಾಲಿ, ಕಾಕಡಾ ಸಸಿ ಹಚ್ಚಿದ್ದಾರೆ. ಉಳಿದ ಹನ್ನೆರಡು ಎಕರೆಯಲ್ಲಿ ಚಿಕ್ಕು, ಮಾವು, ಪೇರಲ, ಹುಣಸೆ, ನೆಲ್ಲಿ, ನುಗ್ಗೆ ಗಿಡಗಳನ್ನು ಮತ್ತು ಎರಡು ಸಾವಿರಕ್ಕೂ ಹೆಚ್ಚು ಸಾಗವಾನಿ ಗಿಡಗಳನ್ನು ಬೆಳೆಸಿದ್ದಾರೆ. ನಡುವೆ ಅಲ್ಲಲ್ಲಿ ಸೋಯಾಬಿನ್, ಗೋವಿನ ಜೋಳ, ಹುರುಳಿ, ಶೇಂಗಾ, ಮೆಣಸು, ಅಲಸಂದಿ, ಉದ್ದು ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.


ಸೆಗಣಿ, ಮರಗಿಡಗಳ ತ್ಯಾಜ್ಯಗಳನ್ನು ಗೊಬ್ಬರವಾಗಿ ಬಳಸುತ್ತಾರೆ.ಬರಿದಾದ ಕೆರೆಗಳಲ್ಲಿ ದೊರೆಯುವ ಫಲವತ್ತಾದ ಮಣ್ಣು ಮತ್ತು ಇತರ ಸಾವಯವ ಗೊಬ್ಬರಗಳನ್ನು ಬಳಸುತ್ತಾರೆ. ಈ ತೋಟದ ನಿರ್ವಹಣೆಗಾಗಿ ನೇಮಕಗೊಂಡಿರುವ ನಾಗಪ್ಪ ಸವಣೂರ ಅವರ ಪರಿಶ್ರಮವೂ ಸೇರಿ ತೋಟ ಸಮೃದ್ಧವಾಗಿದೆ.


`ಸದ್ಯ ಎಂಟು ಎಕ್ರೆಯಾಗಿನ ಕಾಕಡಾದಿಂದ ಇಳುವರಿ ಸಿಗತೈತ್ರಿ, ನಾಕ್ ಎಕ್ರೆದಾಗ ಹೊಸದಾಗಿ ಸಸಿ ಹಚ್ಚೇವಿ, ಸಿಜನ್‌ದಾಗ ದಿನಕ್ಕ ಎಂಬತ್ತರಿಂದ ನೂರು ಕೇಜಿ ತನಕ ಕಾಕಡಾ ಮೊಗ್ಗು ಸಿಗತೈತ್ರಿ. ದಿನಾನೂ 40 ರಿಂದ 50 ಆಳುಗಳಿಗೆ ಕೆಲಸ ಐತ್ರಿ. ಒಂದು ಕೆ.ಜಿ. ಮೊಗ್ಗು ಬಿಡಸಾಕ 20 ರೂಪಾಯಿ ಕೊಡತೇವಿ' ಎನ್ನುತ್ತಾರೆ ತೋಟದ್.


`ಒಂದು ಕೇಜಿ ಮೊಗ್ಗಿಗೆ 60 ರಿಂದ 70 ರೂಪಾಯಿ ಸಿಗತೈತ್ರಿ. ಶ್ರಾವಣದಾಗ ಕೇಜಿಗೆ 200 ರೂಪಾಯಿ ತನಕ ರೇಟ್ ಸಿಗತೈತ್ರಿ. ಶ್ರಾವಣದಾಗ ಹೂ ಭಾಳಾ ಸಿಗಬೇಕಂದ್ರ ಮಾರ್ಚ್‌ದಾಗ ಹೆಚಗಿ ಗೊಬ್ಬರಾ ನೀರು ಹಾಕಬೇಕ್ರಿ. ಮುಂದಿನ ಸೀಸನ್‌ಗೆ ಎರಡು ಕ್ವಿಂಟಾಲ್‌ಗಿಂತ ಹೆಚ್ಚು ಹೂವ ಸಿಗೂದ ಗ್ಯಾರಂಟಿ' ಎನ್ನುತ್ತಾರೆ.


ಹುಬ್ಬಳ್ಳಿ ಹೂವಿನ ವ್ಯಾಪಾರಿಗಳು ಹೊಲಕ್ಕೇ ಬಂದು ಮೊಗ್ಗು ಖರೀದಿಸುವುದರಿಂದ ಮಾರುಕಟ್ಟೆಗೆ ಹೋಗಿ ಕೊಳ್ಳುವವರನ್ನು ಹುಡುಕುವ ತ್ರಾಸ ಇಲ್ಲ. ತೋಟದ್ ಅವರು ನಿತ್ಯದ ಖರ್ಚು ವೆಚ್ಚಗಳನ್ನು ಬರೆದಿಡುತ್ತಾರೆ. ಅಲ್ಲದೆ ತಿಂಗಳಿಗೊಮ್ಮೆ ಸ್ನೇಹಿತರೆಲ್ಲ ಸೇರಿ ಲೆಕ್ಕ ಪರಿಶೀಲನೆ ಮಾಡಿ ಮುಂದಿನ ಯೋಜನೆಗಳ ಬಗ್ಗೆ ವಿಚಾರ ವಿನಿಮಯ ನಡೆಸುತ್ತಾರೆ. ಹೀಗಾಗಿ ಇವರದು ಪಾರದರ್ಶಕ ವ್ಯವಹಾರ.


ಮುಂದಿನ ದಿನಗಳಲ್ಲಿ ಜರ್ಬೇರಾ, ಕಾರ್ನಿಷಿಯಾ ಹೂಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಉದ್ದೇಶ ಈ ಗೆಳೆಯರಿಗಿದೆ.


(ಪ್ರಜಾವಾಣಿ ದಿನಪತ್ರಿಕೆಯ `ಕರ್ನಾಟಕ ದರ್ಶನ ಪುರವಣಿಯಲ್ಲಿ ಗುರುವಾರ, 1 ಮೇ 2008 ರಂದು ಪ್ರಕಟವಾದ ಲೇಖನ)

No comments:

Post a Comment