Tuesday, January 7, 2014

ಉರುಳಿ ಬೀಳದ ‘ಕ್ಯೂಬ್ಲಿ’ ರೊಬೊ!


ಕಸ್ತೂರಿ ನಿವಾಸ ಚಿತ್ರದ ‘ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು’... ಎಂಬ ಗೀತೆಯ ಸಾಲನ್ನು ಅಕ್ಷರಶಃ ರೊಬೊ ತಂತ್ರಜ್ಞಾನದಲ್ಲಿ ಅಳವಡಿಸಿ ಕಾರ್ಯಗತಗೊಳಿಸಲು ಮುಂದಾಗಿರುವ ಸ್ವಿಟ್ಜರ್ಲೆಂಡ್‌ನ ಸಂಶೋಧಕರ ತಂಡವೊಂದು   ಯಶಸ್ಸು ಕಂಡಿದೆ. ಒಂದು ಮೂಲೆಯ ಅಂಚಿನ ಮೇಲೆ ಸಮತೋಲನ ಕಾಯ್ದುಕೊಂಡು ಉರುಳಿ ಬೀಳದಂತೆ ನಿಲ್ಲುವ ಚಚ್ಚೌಕಾಕೃತಿಯ (Cube) ರೊಬೊವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ.

‘Cubli’ (ಕ್ಯೂಬ್ಲಿ) ಎಂದು ನಾಮಕರಣ ಮಾಡಲಾಗಿರುವ ಈ  ಚಚ್ಚೌಕಾಕೃತಿ ರೊಬೊವನ್ನು ಸ್ವಿಟ್ಜರ್ಲೆಂಡ್‌ನ ‘ಇಟಿಎಚ್ ಜ್ಯೂರಿಚ್ ಇನ್ಸ್‌ಟಿಟ್ಯೂಟ್ ಫಾರ್ ಡೈನಮಿಕ್ ಸಿಸ್ಟೆಮ್ಸ ಆ್ಯಂಡ್ ಕಂಟ್ರೊಲ್‌’ನ ಸಂಶೋಧಕರಾದ ಮೋಹನರಾಜಾ ಗಜಮೋಹನ್ ಮತ್ತು ಪ್ರೊ. ರಫೈಲೋ ಡಿ ಆ್ಯಂಡ್ರಿಯಾ ಅವರ ನೇತೃತ್ವದ ತಂಡ ಅಭಿವೃದ್ಧಿಪಡಿಸಿದೆ.
ನಡೆಯುವ, ಜಿಗಿದಾಡುವ ಚಟುವಟಿಕೆಯ, 15x15x15 ಸೆಂಟಿಮೀಟರ್ ಅಳತೆಯ ಈ ರೊಬೊ, ಸರಣಿ ಜೈರೋಸ್ಕೋಪ್‌ಗಳನ್ನು (ಗಿರಕಿ ಹೊಡೆಯುವ ಕಾಯಗಳ ಚಲನೆ ಲಕ್ಷಣಗಳನ್ನು ನಿರ್ದೇಶಿಸುವ ಉಪಕರಣ) ಬಳಸಿಕೊಂಡು ತುದಿ ಯಂಚಿನ ಮೇಲೆ ಸಮತೋಲನ ಸಾಧಿಸಿ ನಿಲ್ಲಬಲ್ಲದಾಗಿದೆ.
ಜಿಗಿಯುವ ಮತ್ತು ತುದಿಯಂಚಿನ ಮೇಲೆ ಸಮತೋಲನ ಸಾಧಿಸಿ ನಿಲ್ಲುವ ಈ ‘ಕ್ಯೂಬ್ಲಿ’ ರೊಬೊದೊಳಗೆ ಅಧಿಕ ಕೋನಗಳ ವೇಗದಲ್ಲಿ ತಿರುಗಲು ಅನುವಾಗುವಂತೆ ಅದರ ಆಕೃತಿಯ ಮೂರು ಮುಖಗಳಲ್ಲಿ ಪ್ರತಿಮುಖ ಚಲನೆಯ ಚಕ್ರಗಳನ್ನು ಅಳವಡಿಸ ಲಾಗಿದೆ. ಇದರಿಂದ ಇದು ವೇಗವಾಗಿ ತಿರುಗುವಾಗಲೇ ಇದ್ದಕ್ಕಿದ್ದಂತೆ ವೇಗಕ್ಕೆ ತಡೆಹಾಕಿ ಅಂಚಿನ ಮೇಲೆ ಎದ್ದು ನಿಲ್ಲುವ ಸಾಮರ್ಥ್ಯ ಪಡೆದುಕೊಳ್ಳುತ್ತದೆ.
ಕ್ಯೂಬ್ಲಿಯ ನಿರ್ದೇಶನ
ಈ ರೋಬೊ ತುದಿಯ ಅಂಚಿನ ಮೇಲೆ ನಿಂತ ಸ್ಥಿತಿಯಲ್ಲಿ ಇರಲು, ಇದರೊಳಗಿನ ನಿಯಂತ್ರಿತ ಮೋಟರ್‌ಗಳು ನೆರವಾಗುತ್ತವೆ. ಅಲ್ಲದೇ, ಕ್ಯೂಬ್ಲಿಯ ನಿರ್ದೇಶನದಂತೆ ಯಾವುದೇ ದಿಕ್ಕಿನಲ್ಲಿ ಚಲಿಸಲೂ ಸಕರಿಸುತ್ತವೆ.
ಜಿಗಿದಾಡುವ, ಸಮತೋಲನ ಕಾಯ್ದುಕೊಳ್ಳುವ ಮತ್ತು ನಿಯಂತ್ರಣಕ್ಕೊಳಪಟ್ಟು ಉರಳಾಡುವ ಸಾಮರ್ಥ್ಯಗಳಿಂದಾಗಿ ‘ಕ್ಯೂಬ್ಲಿ’ಗೆ ಸರಾಗವಾಗಿ ನಡೆದಾಡಲು ಸಾಧ್ಯವಾಗಿದೆ ಎನ್ನುತ್ತಾರೆ ಸಂಶೋಧಕ ರು.
ಈ ಸಂಶೋಧಕರ ತಂಡವು  ಜ್ಯೂರಿಚ್‌ನಲ್ಲಿ ಜುಲೈನಲ್ಲಿ ನಡೆದ ‘ಯುರೋಪಿಯನ್ ಕಂಟ್ರೊಲ್ ಕಾನ್ಫರೆನ್ಸ್‌’ನಲ್ಲಿ (ಇಸಿಸಿ) ತಮ್ಮ ಈ ಸಂಶೋಧನೆ ಕುರಿತಂತೆ ವರದಿ ಮಂಡಿಸಿದ್ದರು.
‘ಕ್ಯೂಬ್ಲಿ’ ಯೋಜನೆಯು 2011ರ ಫೆಬ್ರುವರಿಯಲ್ಲಿ ಚುರುಕು ಪಡೆಯಿತಾ ದರೂ, ಇದರ ಮಾಹಿತಿಯನ್ನು ಹಂಚಿಕೊಂಡಿದ್ದು 2013ರ ಆರಂಭದ ದಿನಗಳಲ್ಲಿ. ಆಗ ಇದು ಎರಡು ಆಯಾಮ (2ಡಿ) ಹೊಂದಿತ್ತು. ನಂತರದ ದಿನಗಳಲ್ಲಿ ಇದಕ್ಕೆ 3ನೇ ಆಯಾಮ (3ಡಿ) ನೀಡಲಾಗಿದೆ. ಇದೀಗ ಸಂಪೂರ್ಣವಾಗಿ ನಿಸ್ತಂತು ವ್ಯವಸ್ಥೆಯಲ್ಲಿ ಕಾರ್ಯಾಚರಣೆ ನಡೆಸಬಲ್ಲದಾಗಿದೆ.
ಒಂದು ತುಲನಾತ್ಮಕ ಸಣ್ಣ ಹೆಜ್ಜೆಯ ಗುರುತಿನೊಂದಿಗೆ ‘ತಲೆಕೆಳಗಾದ 3ಡಿ ಲೋಲಕ’ ಎಂದೇ ಇದನ್ನು ಬಣ್ಣಿಸಲಾಗಿದೆ.
‘ಈ ರೊಬೊ ಎರಡು ವೈಶಿಷ್ಟ್ಯಗಳನ್ನೊಳಗೊಂಡಿದೆ.  ಈ ಸಾಧನವು ಸಣ್ಣ ಹೆಜ್ಜೆ ಗುರುತು ಹೊಂದಿದೆ.  ಸ್ಥಿರ ಸ್ಥಿತಿಯಲ್ಲಿರುವಾಗ  ಪ್ರತಿಮುಖ ಚಲನೆಯ ಚಕ್ರಗಳ ಸಹಾಯದಿಂದ ಅಧಿಕ ವೇಗದಲ್ಲಿ ತಿರುಗುವಾಗಲೇ ದಿಢೀರ್‌ ಎಂಬಂತೆ ತಡೆಹಾಕಿ ಯಾವುದೇ ಬಾಹ್ಯ ಶಕ್ತಿಯ ಸಹಾಯವೂ ಇಲ್ಲದೇ ಜಿಗಿಯುತ್ತದೆ’ ಎಂದು ಸಂಶೋಧಕರು  ಅದರ ಸಾಮರ್ಥ್ಯವನ್ನು ವಿವರಿಸುತ್ತಾರೆ.
ಸ್ವಯಂಚಾಲಿತವಾಗಿ ವಿವಿಧ ರೂಪ ತಳೆಯುವ ರೊಬೊಗಳ ತಯಾರಿಕೆಗೆ  ಹಾಗೂ ಗ್ರಹಗಳಲ್ಲಿ ನಡೆಸುವ ಅನ್ವೇಷಣಾ ಕಾರ್ಯಗಳ ಬಳಕೆಗೆ ಈ ತಂತ್ರಜ್ಞಾನವು ಹೇಳಿ ಮಾಡಿಸಿದಂತಿದೆ. ಹಾಗಾಗಿ ಖಗೋಳಶಾಸ್ತ್ರ ಕ್ಷೇತ್ರದ ಸಂಶೋಧಕರೂ ‘ಕ್ಯೂಬ್ಲಿ’ಯತ್ತ ಕುತೂಹಲದ ದೃಷ್ಟಿ ಹರಿಸಿದ್ದಾರೆ ಎನ್ನುತ್ತದೆ ಸಂಶೋಧಕರ ತಂಡ.
(ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಜನವರಿ 01, 2014 ರಂದು ಪ್ರಕಟವಾದ ಲೇಖನ)

No comments:

Post a Comment