Wednesday, December 25, 2013

ವೃದ್ಧರಿಗೊಂದು ಸ್ಮಾರ್ಟ್ ಚಡ್ಡಿ!


ಪದೇ ಪದೇ ಮೂತ್ರ ವಿಸರ್ಜಿಸುವ ಮಕ್ಕಳ ಚಡ್ಡಿಯನ್ನು ಬದಲಿಸುವ ಕೆಲಸ ಅಮ್ಮಂದಿರಿಗೆ ತಲೆನೋವೇ ಸರಿ. ಅದೇ ರೀತಿ, ವಯೋಸಹಜವಾಗಿ  ದೇಹದ ಅವಯವಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ವೃದ್ಧರಲ್ಲಿ ಹಲವರಿಗೆ ವಿವಿಧ ಕಾರಣಗಳಿಂದ ಅನಿಯಂತ್ರಿತ ಮೂತ್ರ ವಿಸರ್ಜನೆ ಯಾಗುವಂತಹ ತೊಂದರೆ ಕಾಣಿಸಿಕೊಳ್ಳುವುದುಂಟು.

ಈ ಸಮಸ್ಯೆಯಿಂದ ಬಳಲುವವರನ್ನು ನಿಭಾಯಿ­ಸುವುದು ಕುಟುಂಬವರ್ಗದವರಿಗೆ ಅನಿವಾರ್ಯ­ವಾದರೆ, ಆಸ್ಪತ್ರೆಗಳಲ್ಲಿ ರುವ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿಗೆ ಕರ್ತವ್ಯದ ಒಂದು ಭಾಗ. ಹೊತ್ತು ಗೊತ್ತಿಲ್ಲದೇ ವಿಸರ್ಜನೆಯಾಗುವ ಮೂತ್ರದಿಂ­ದಾಗಿ ಅಸಹಾಯಕ ವೃದ್ಧರದ್ದು ‘ಹೇಳಿ­ಕೊಳ್ಳ­ಲಾಗದ, ತಾಳಿಕೊಳ್ಳಲಾಗದ’ ಸ್ಥಿತಿಯಾದರೆ, ಅವರ ಕಾಳಜಿ ಮಾಡುವವರದು ಮುಜುಗರದ ಪರಿಸ್ಥಿತಿ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಆಸ್ಟ್ರೇಲಿಯಾದ ತಂತ್ರಜ್ಞರು, ವೃದ್ಧರಿಗಾಗಿ ‘ಸಿಮ್‌ ಸಿಸ್ಟೆಮ್’ (ಸಿಮ್ ಎಂಬುದು ‘ಸುಲಭ ಅನಿಯಂತ್ರಣಾವಸ್ಥೆ ನಿರ್ವಹಣೆ’ ಪದದ ಸಂಕ್ಷಿಪ್ತ ರೂಪ) ಎಂಬ ಸುಧಾರಿತ ಒಳಚಡ್ಡಿಯೊಂದನ್ನು ವಿನ್ಯಾಸಗೊಳಿಸಿದ್ದಾರೆ. ‘ಸಿಮವಿಟಾ’ ಕಂಪೆನಿಯು ಸಿದ್ಧ ಪಡಿಸಿರುವ ಈ ವಿನೂತನ ಚಡ್ಡಿಯಲ್ಲಿ  ತೇವಾಂಶವನ್ನು ತಕ್ಷಣ ಗುರುತಿಸುವ ಪುಟ್ಟ ಎಲೆಕ್ಟ್ರಾನಿಕ್ ಸೆನ್ಸರ್ ಇದೆ.
ಈ ಚಡ್ಡಿಯನ್ನು ಧರಿಸಿದ ವೃದ್ಧರು ಮೂತ್ರ ವಿಸರ್ಜಿಸಿದ ತಕ್ಷಣವೇ ಅದು ಕಂಪ್ಯೂಟರ್‌ಗೆ ಮಾಹಿತಿಯನ್ನು ರವಾನಿಸುತ್ತದೆ. ಆಗ ಕಂಪ್ಯೂಟರ್ ವೃದ್ಧರ ನಿಗಾವಹಿಸುವವರ ಮೊಬೈಲ್‌ಗೆ ‘ಎಸ್‌ಎಂಎಸ್’ ಕಳುಹಿಸುವ ಮೂಲಕ ಚಡ್ಡಿಯಲ್ಲಿರುವ ಒದ್ದೆಯಾದ ಡೈಪರ್ ಬದಲಿಸುವಂತೆ ಸೂಚಿಸುತ್ತದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗುವ ಹಾಗೂ ವೃದ್ಧಾಶ್ರಮ ಸೇರುವ ವೃದ್ಧರು ಅನಿಯಂತ್ರಿತ ಮೂತ್ರ ವಿಸರ್ಜನೆಯಿಂದ ಉಂಟು ಮಾಡುವ ಕಿರಿಕಿರಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಚಡ್ಡಿಯನ್ನು ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ ತಂತ್ರಜ್ಞರು.
ಈ ತಂತ್ರಜ್ಞಾನದಿಂದ ಅನಿಯಂತ್ರಿತ ಮೂತ್ರವಿಸರ್ಜನೆ ತೊಂದರೆ ಇರುವ ರೋಗಿಗಳನ್ನು ಅಥವಾ ವೃದ್ಧರನ್ನು ಡೈಪರ್‌ ಪದಲಿಸುವುದಕ್ಕಾಗಿ ಪದೇ ಪದೇ ಪರೀಕ್ಷಿಸುವ ಸಮಸ್ಯೆ ದಾದಿಯರಿಗೆ ತಪ್ಪಲಿದೆ. ಮೆಲ್ಬರ್ನ್‌ನ ಹಲವು ಆಸ್ಪತ್ರೆಗಳು ಮತ್ತು ವೃದ್ಧರ ಪಾಲನಾಗೃಹಗಳಲ್ಲಿ ಈ   ಸಾಧನವನ್ನು ಬಳಸಿ ನೋಡಿದಾಗ ಉತ್ತಮ ಫಲಿತಾಂಶ ಬಂದಿದೆ.
ಈ ‘ಸ್ಮಾರ್ಟ್‌ ಅಂಡರ್‌ಗಾರ್ಮೆಂಟ್‌’ನ ಆವಿಷ್ಕಾರವು ವೃದ್ಧರಿಗೆ ಉತ್ತಮ ಗುಣಮಟ್ಟದ ಜೀವನ ಕಲ್ಪಿಸುವ ಒಂದು ಪ್ರಯತ್ನ ಎನ್ನುತ್ತಾರೆ ಈ ಸಂಶೋಧನೆಯಲ್ಲಿ ಪ್ರಮುಖ ಪಾತ್ರವಹಿಸಿದ ವೊಲೊ ಗಾಂಗ್ ವಿಶ್ವವಿದ್ಯಾಲಯದ ವೃದ್ಧರ ಆರೈಕೆ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ವಿಕ್ಟೋರಿಯಾ ಟ್ರೇನರ್.
ಸದ್ಯ, ಇಂತಹ ತೊಂದರೆಯಿಂದ ಬಳಲುತ್ತಿರುವವರು ಕುಟುಂಬದ ಸದಸ್ಯರಿಗೂ ಹಾಗೂ ಆಸ್ಪತ್ರೆಗಳಲ್ಲಿ ನಿಗಾವಹಿಸುವ ನರ್ಸ್‌ಗಳಿಗೂ ಅಸಂತೋಷವನ್ನು ಉಂಟು ಮಾಡುವ ಜತೆಗೆ ಇದರಿಂದ ತಾವು ಕೂಡ ಮಾನಸಿಕವಾಗಿ ಜರ್ಜರಿತರಾಗುತ್ತಿದ್ದಾರೆ.  ಈ ಹೊಸ ಸುಧಾರಣೆ ಒಳವಸ್ತ್ರದಿಂದ ಇಂತಹ ವೃದ್ಧರ ಕುರಿತು ಕಾಳಜಿ ವಹಿಸುವವರಿಗೆ ಬಹಳ ಅನುಕೂಲವಾಗಲಿದೆ ಎನ್ನುತ್ತಾರೆ ಅದನ್ನು ಅಭಿವೃದ್ಧಿ ಪಡಿಸಿದ ತಂತ್ರಜ್ಞರು.
(ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಡಿಸೆಂಬರ್ 18, 2013 ರಂದು ಪ್ರಕಟವಾದ ಲೇಖನ)

No comments:

Post a Comment