Wednesday, October 9, 2013

ವಸತಿ ಯೋಜನೆಗೆ ಕುಂಟು ನೆಪ

ಆಧುನಿಕತೆಯ ಅಂಗಳದಲ್ಲಿ ಬೀಡು ಬಿಟ್ಟು, ವಿಶ್ವವನ್ನೇ ಜಾಗತಿಕ ಗ್ರಾಮವನ್ನಾಗಿಸಿಕೊಂಡು, ಕ್ಷಣಮಾತ್ರದಲ್ಲಿ ಏನೆಲ್ಲ ಮಾಡಬಲ್ಲೆವು ನಾವು... ಎನ್ನುವ ಈ ಕಾಲಘಟ್ಟದಲ್ಲೂ ಇನ್ನೂ ಹಲವಾರು ರಂಗಗಳಲ್ಲಿ ‘ಸಕಾಲಿಕ’ ಎನ್ನುವ ಮಾತು ಸವಕಳಿ ಪದಗಳ ಪಟ್ಟಿಗೆ ಸೇರಿದ್ದು, ‘ನಾಳೆ ಬನ್ನಿ’ ಎನ್ನುವ ಪದವೇ ಈಗಲೂ ಚಾಲ್ತಿಯಲ್ಲಿದೆ.

ಈ ಜಾಡ್ಯಕ್ಕೆ ವಸತಿ ನಿರ್ಮಾಣ ರಿಯಲ್ ಎಸ್ಟೇಟ್ ಕ್ಷೇತ್ರ ಕೂಡ ಹೊರತಾಗಿಲ್ಲ. ದೇಶ ರಾಜಧಾನಿಯಲ್ಲೇ ಕೊಟ್ಟಮಾತಿಗೆ ತಪ್ಪಿ ನಡೆಯುವ ವಸತಿ ನಿರ್ಮಾಣ ಕಂಪೆನಿಗಳು ತಮ್ಮ ಶೇ 25ಕ್ಕೂ ಅಧಿಕ ಯೋಜನೆಗಳನ್ನು ಸಕಾಲಕ್ಕೆ ಪೂರ್ತಿಗೊಳಿಸದೆ ಅಪಖ್ಯಾತಿಗೆ ಒಳಗಾಗುತ್ತಿವೆ ಎನ್ನುತ್ತಿದೆ ‘ಜೋನ್ಸ್ ಲ್ಯಾಂಗ್ ಲಾಸಲ್ಲೆ(ಜೆಎಲ್ಎಲ್) ಇಂಡಿಯಾ’ ಎಂಬ ಸ್ಥಿರಾಸ್ತಿ ವಹಿವಾಟು ಸಲಹಾ ಸಂಸ್ಥೆ.

‘ರಿಯಲ್ ಎಸ್ಟೇಟ್ ಮಾರುಕಟ್ಟೆ ಯಲ್ಲಿ ಹೆಚ್ಚುತ್ತಿರುವ ವಿಳಂಬ ನೀತಿಯು ಗ್ರಾಹಕರ ಸಹನೆಯ ಕಟ್ಟೆಯೊಡೆ ಯುವಷ್ಟರ ಮಟ್ಟಕ್ಕೆ ತಲುಪಿದೆ’ ಎನ್ನುತ್ತಾರೆ ಜೆಎಲ್‌ಎಲ್ ಇಂಡಿಯಾ ಕಾರ್ಯನಿರ್ವಾ­ಹಕ ಅಧಿಕಾರಿ ಸಂತೋಷ್ ಕುಮಾರ್.

ವಸತಿ ನಿರ್ಮಾಣ ಯೋಜನೆಗಳು ತಡವಾಗುವುದಕ್ಕೆ ಹಣಕಾಸಿನ ಹರಿವಿನ ಪ್ರಮಾಣದಲ್ಲಾಗುವ ಏರುಪೇರು ಆರಂಭಿಕ ಕಾರಣವಾಗಿದ್ದು, ಇದು ದೇಶದೆಲ್ಲೆಡೆ ಸಾರ್ವತ್ರಿಕವಾಗಿ ಕಂಡು ಬರುತ್ತಿರುವ ಆಂತಕಕಾರಿ ಬೆಳವಣಿಗೆಯಾಗಿದೆ.

ಕಳಪೆ ನಿರ್ವಹಣೆ, ಬದ್ಧತೆಯ ಕೊರತೆ, ಹೂಡಿಕೆದಾರರೇ ಬಂಡವಾಳ ತೊಡಗಿಸುವ ವ್ಯವಸ್ಥೆ ಮತ್ತು ಯೋಜನೆ ಗಳ ಅನುಮತಿಯಲ್ಲಾಗುವ ಕಾಲವ್ಯಯ ಇವು ವಸತಿ ಯೋಜನೆಗಳು ಆಮೆನಡಿಗೆ ಗತಿಯಲ್ಲಿ ಸಾಗುತ್ತಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ.

ದೇಶದಾದ್ಯಂತ ಶೇ 25ಕ್ಕೂ ಅಧಿಕ ವಸತಿ ಯೋಜನೆಗಳನ್ನು ಕೊಟ್ಟ ಮಾತಿನಂತೆ ಅವಧಿಯೊಳಗೆ ಪೂರ್ಣಗೊಳಿಸದೆ, ನಿರ್ಮಾಣದಾರರು ಬದ್ಧತೆ ಮರೆತು ವರ್ತಿಸುತ್ತಿರುವುದು ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಹಂತಕ್ಕೆ ತಲುಪಿದೆ.

2013ನೇ ಸಾಲಿನಲ್ಲಿ ದೇಶದ ಎಲ್ಲ ಪ್ರಮುಖ ನಗರಗಳಿಗೆ ಹೋಲಿಕೆ ಮಾಡಿದಾಗ ರಾಷ್ಟ್ರದ ರಾಜಧಾನಿ ಯಾದ ದೆಹಲಿಯ ಸುತ್ತಲೇ ಸುಳ್ಳು ಭರವಸೆ ನೀಡುವ, ಅವಧಿ ಮುಗಿದ ಮೇಲೆ ಸಬೂಬು ಹೇಳುತ್ತಲೇ ಬರುವ ನಿರ್ಮಾಣದಾರರು ಅಧಿಕವಾಗಿರುವ ಅಂಶ ಸ್ಪಷ್ಟವಾಗಿದೆ.

2013ರಲ್ಲಿ ಗುರಗಾಂವ್‌ನಲ್ಲಿ ಈವರೆಗೂ ನಡೆದಿರುವ ಮುಕ್ಕಾಲು ಭಾಗ ಯೋಜನೆಗಳಲ್ಲಿ ಕೇವಲ ಕಾಲು ಭಾಗದ ಯೋಜನೆಗಳು ಮಾತ್ರ ಗ್ರಾಹಕರಿಗೆ ತಲುಪಿವೆ ಎನ್ನುತ್ತದೆ ಜೆಎಲ್ಎಲ್ ಇಂಡಿಯಾ.

ರಾಜಧಾನಿಯ ಪರಿಧಿಯಲ್ಲೇ ಅತಿ ಹೆಚ್ಚು ನಡೆದಿರುವ ಈ ಕಾಲಹರಣದ ಕಾಟದಿಂದ ಗ್ರಾಹಕರು ಬೇಸತ್ತು ಹೋಗಿದ್ದು, ನೊಯಿಡಾ ಒಂದರಲ್ಲೇ 2013ರಲ್ಲಿ ಈವರೆಗೆ ಐದನೇ ಒಂದು ಭಾಗದಷ್ಟು ಯೋಜನೆಗಳು ಮಾತ್ರ ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ.

ರಾಜಧಾನಿಯ ಸುತ್ತಲೇ ಏಕೆ ವಸತಿ ಯೋಜನೆಗಳು ಜಾಸ್ತಿ ಕುಂಟುತ್ತವೆ ಎನ್ನುವುದನ್ನು ಕೆದಕಿದಾಗ ತಿಳಿದು ಬರುವ ಅಂಶವೆಂದರೆ; ಭೂಮಿಗೆ ಸಂಬಂಧಿಸಿದ ವಿವಾದಗಳು, ತಗಾದೆಗಳು ಅಲ್ಲಿ ಅತಿಯಾಗಿರುವುದು ಕಾರಣ ಎಂಬುದಾಗಿದೆ.
ದೆಹಲಿಯ ಸುತ್ತಲಿನ ಈ ವಿಳಂಬಿತ ಸೂತ್ರವನ್ನು ಕಂಡು ದೇಶದ ಪಶ್ಚಿಮ ಭಾಗದ ನಗರಗಳಾದ ಪುಣೆ ಮತ್ತು ಮುಂಬೈಯತ್ತ ಮುಖ ಮಾಡಿದರೆ ಅಲ್ಲಿ ‘ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂಬ ಮಂತ್ರ ಜಪಿಸುವ ಸ್ವಲ್ಪ ಒಳ್ಳೆಯ ವಸತಿ ಯೋಜನೆ ನಿರ್ಮಾಣದಾರರು ಕಂಡುಬರುತ್ತಾರೆ.

ಈ ನಗರಗಳಲ್ಲಿನ ನಿರ್ಮಾಣದಾರರು 2013ರಲ್ಲಿ ತಮ್ಮ ಯೋಜನೆಗಳಲ್ಲಿ ಶೇ 40ಕ್ಕೂ ಅಧಿಕ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ಹೆಮ್ಮೆ ಯಿಂದಲೇ ಹೇಳುತ್ತಾರೆ.

ವಸತಿ ಯೋಜನೆಗಳಿಗೆ ಹೂಡಿಕೆ ದಾರರೇ ಬಂಡವಾಳ ತೊಡಗಿಸುವುದ ರಿಂದ ಈ ಮೊದಲು ಅವರು ಹೂಡಿಕೆ ಮಾಡಿದ ಪೂರ್ಣಗೊಂಡ ಯೋಜನೆ ಗಳು ನಿರೀಕ್ಷೆಯಂತೆ ಮಾರಾಟ ವಾಗದೇ ಇದ್ದಾಗ ಸಹಜವಾಗಿಯೇ ಹೊಸ ಯೋಜನೆಗಳಿಗೆ ಹಣದ ಹರಿವಿನ ಕೊರತೆ ಕಾಣಿಸಿಕೊಳ್ಳುತ್ತದೆ.

ಇದು ಬಹುತೇಕ ಯೋಜನೆಗಳ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಈ ನಡವಳಿಕೆಯಲ್ಲಿ ಕಳೆದ 14-–15 ತಿಂಗಳ ಅವಧಿಯಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತಿದ್ದು, ಸಮಾಧಾನಕರವಾಗಿದೆ ಎನ್ನುತ್ತದೆ ಜೆಎಲ್ಎಲ್ ಇಂಡಿಯಾ.

(ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಅಕ್ಟೋಬರ್ 09, 2013 ರಂದು ಪ್ರಕಟವಾದ ಲೇಖನ)

No comments:

Post a Comment