Tuesday, August 13, 2013

ವಲಸೆಯಿಂದ ಶುಕ್ರದೆಸೆ

ಹತ್ತು ಹಲವು ಕಾರಣಗಳಿಂದ ಭಾರತದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹೆಚ್ಚುತ್ತಿರುವ ನಗರೀಕರಣ ಪ್ರಕ್ರಿಯೆ ಭವಿಷ್ಯದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬಹುದೊಡ್ಡ ಹೂಡಿಕೆ ಅವಕಾಶಗಳ `ಭಾಗ್ಯದ ಬಾಗಿಲು' ತೆರೆಯಲಿದೆ ಎನ್ನುತ್ತದೆ ಜಾಗತಿಕ ಸ್ಥಿರಾಸ್ತಿಗಳ ಸಲಹಾ ಸಂಸ್ಥೆ `ಸಿಬಿಆರ್‌ಸಿ'ಯ ವರದಿ.

2001ರಿಂದ 2011ರ ನಡುವಿನ ಅವಧಿಯಲ್ಲಿ ಸುಮಾರು 7.10 ಕೋಟಿ ಜನರು ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಬಂದಿದ್ದಾರೆ. ಈ ವಲಸೆ ಪ್ರಮಾಣ ಇದೇ ರೀತಿ ನಾಗಾಲೋಟದ ದಾಟಿಯಲ್ಲಿಯೇ ಮುಂದುವರಿದರೆ 2026ರ ವೇಳೆಗೆ ಭಾರತದ ನಗರ ಪ್ರದೇಶಗಳಲ್ಲಿಯೇ ಸುಮಾರು 53.40 ಕೋಟಿ ಜನರು ವಾಸವಿರುತ್ತಾರೆ!

ನಗರ ಕೇಂದ್ರಿತ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಮುಂಬರುವ ದಿನಗಳಲ್ಲಿ ಇರುವ ಭಾರಿ ಪ್ರಮಾಣದ ಅವಕಾಶಗಳನ್ನು ಅರಿಯಲು ಈ ಅಂಕಿ-ಅಂಶಗಳೇ ಸಾಕು. ಅವಕಾಶಗಳು ಇರುವಂತೆಯೇ ವಸತಿ ನಿರ್ಮಾಣ ಕ್ಷೇತ್ರಕ್ಕೆ ಮೂಲಸೌಕರ್ಯ, ಬಡ್ಡಿದರ ಮತ್ತು ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವ ಪ್ರಕ್ರಿಯೆ...

ಹೀಗೆ ಹಲವು ವಿಷಯಗಳಲ್ಲಿ ಅಡೆತಡೆಗಳಿವೆ. ಇವುಗಳನ್ನು ನಿವಾರಿಸಿದ್ದೇ ಆದರೆ 2025ರ ವೇಳೆಗೆ ದೇಶದ `ಒಟ್ಟಾರೆ ಆಂತರಿಕ ಉತ್ಪನ್ನ'ಕ್ಕೆ (ಜಿಡಿಪಿಗೆ) ರಿಯಲ್ ಎಸ್ಟೇಟ್ ಅಭಿವೃದ್ಧಿ ಕ್ಷೇತ್ರವು ಈಗಿರುವುದಕ್ಕಿಂತ ಎರಡು ಪಟ್ಟು ದೊಡ್ಡ ಪ್ರಮಾಣದ ಕೊಡುಗೆ ನೀಡಲಿದೆ ಎನ್ನುತ್ತದೆ `ಸಿಬಿಆರ್‌ಸಿ' ಸಮೀಕ್ಷೆ.

ಇಂದು ರಿಯಲ್ ಎಸ್ಟೇಟ್ ಕ್ಷೇತ್ರ ದುಬಾರಿ ಬಡ್ಡಿದರ, ನಿಧಾನಗತಿಯ ಪ್ರಗತಿ ಮತ್ತು ಏರುಪೇರಿನ ಮೂಲಸೌಕರ್ಯ ಅಭಿವೃದ್ಧಿ ಮತ್ತು ಅನುಮತಿ ಪಡೆಯಲು ದೀರ್ಘ ಸಮಯ ತೆಗೆದುಕೊಳ್ಳುವುದು ಮೊದಲಾದ ಸವಾಲುಗಳನ್ನು ಎದುರಿಸುತ್ತಿದೆ. ಇವೆಲ್ಲವನ್ನೂ ಉದ್ಯಮ ಕ್ಷೇತ್ರ ಸಮರ್ಥವಾಗಿ ಎದುರಿಸಿದ್ದೇ ಆದರೆ 2013ರಲ್ಲಿ `ಜಿಡಿಪಿ'ಯ ಶೇ 6.3ರಷ್ಟಿರುವ ತನ್ನ ಪಾಲನ್ನು 2025ರ ವೇಳೆಗೆ ಶೇ 13ಕ್ಕೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.

ದೇಶದಲ್ಲಿ ಹೆಚ್ಚುತ್ತಿರುವ ನಗರೀಕರಣ, ಹೊಸ ಮನೆಗಳ ಬೇಡಿಕೆ ಮತ್ತು ಮೊದಲ ಹಾಗೂ ದ್ವಿತೀಯ ದರ್ಜೆ ನಗರಗಳಲ್ಲಿ ವಿಸ್ತಾರಗೊಳ್ಳುತ್ತಿರುವ ಕಟ್ಟಡಗಳ ನಿರ್ಮಾಣ ಕಾರ್ಯದಂತಹ ಮಹತ್ವದ ಅವಕಾಶಗಳ ಲಾಭ ಪಡೆದು ಮುಂಬರುವ ದಶಕದಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಲು ಭಾರತದ ರಿಯಲ್ ಎಸ್ಟೆಟ್ ಕ್ಷೇತ್ರ ಸಿದ್ಧವಾಗಿದೆ ಎನ್ನುತ್ತದೆ ವರದಿ.

ವಸತಿ ನಿರ್ಮಾಣ ಕ್ಷೇತ್ರವು ಆರ್ಥಿಕತೆಯಲ್ಲಿ ದೊಡ್ಡ ಉದ್ಯಮವಾಗಿ ಮುಂದುವರಿಯಲಿದ್ದು, ಸದ್ಯ ಈ ಕ್ಷೇತ್ರದಲ್ಲಿರುವ 76 ಲಕ್ಷ ಉದ್ಯೋಗಾವಕಾಶಗಳು 2025ರ ವೇಳೆಗೆ 1.72 ಕೋಟಿಗೆ ಹೆಚ್ಚುವ ನಿರೀಕ್ಷೆಯಿದೆ.

ಅಲ್ಲದೇ, ಈಗ 3.6 ಲಕ್ಷ ಕೋಟಿ ಚದರಡಿಯಷ್ಟಿರುವ ಭಾರತದ ರಿಯಲ್ ಎಸ್ಟೇಟ್ ನಿರ್ಮಾಣ ಕ್ಷೇತ್ರದ ವಿಸ್ತಾರವು 2025ರ ಹೊತ್ತಿಗೆ 8.2 ಲಕ್ಷ ಕೋಟಿ ಚದರಡಿಗೆ ಹೆಚ್ಚಲಿದೆ. ಇದರಲ್ಲಿ ಬಹುತೇಕ ನಿರ್ಮಾಣ ವಸತಿ ಸೌಕರ್ಯ ವಲಯವನ್ನು ಅವಲಂಬಿಸಿರಲಿದೆ.

ಸದ್ಯ ಎದುರಿಗಿರುವ ಅಡೆತಡೆಗಳನ್ನು ನಿವಾರಿಸಿದರೆ ದೇಶದ ಆರ್ಥಿಕ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡುವಷ್ಟು ಸಾಮರ್ಥ್ಯ ಈ ಕ್ಷೇತ್ರಕ್ಕಿದೆ ಎನ್ನುತ್ತಾರೆ `ಸಿಬಿ ಆರ್‌ಇ' ದಕ್ಷಿಣ ಏಷ್ಯಾ ವಲಯ ಅಧ್ಯಕ್ಷ ಅನ್ಷುಮನ್.


(
ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯ ಕನಸಿನ ಮನೆ ಪುಟದಲ್ಲಿ ಬುಧವಾರ, ಆಗಸ್ಟ್ 14, 2013 ರಂದು ಪ್ರಕಟವಾದ ಲೇಖನ

No comments:

Post a Comment