Thursday, December 15, 2011

ಬಾಳು ಬೆಳಗಿದ ಬಾಳೆ

`ಸಾರ್, ಬಾಳೆ ಬೆಳೆದರೆ ಬಾಳು ಬೆಳಗುತ್ತೆ, ಅದ್ಕೆ ನಾನೇ ಸಾಕ್ಷಿ ಸಾರ್. ಕೆಲ ವರ್ಷದ ಕೆಳಗೆ ಗಾಡಿ ಕ್ಲಿನರ್, ಡ್ರೈವರ್‌ನಾಗಿ ಕೆಲಸ ಮಾಡ್ತಿದ್ದೆ. ಬಾಳೆ ಬೆಳೆದ ನಂತರ ಸ್ವಂತ ಕಾರು ತೆಕ್ಕೊಂಡೆ, ಜತೆಗೆ ಹದಿನೈದು ಮಂದಿಗೆ ಕೆಲಸ ಕೂಡ ನೀಡಿದ್ದೇನೆ ಸಾರ್' ಎಂದು ಮಾತಿಗೆ ಶುರುವಿಟ್ಟರು ರೈತ ಪಂಚಾಕ್ಷರಿ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಗ್ರಾಮದ ಪಂಚಾಕ್ಷರಿ ಓದಿದ್ದು ಹತ್ತನೆಯ ತರಗತಿ ಮಾತ್ರ. ಕಾರಣಾಂತರಗಳಿಂದ ಶಿಕ್ಷಣ ಮುಂದುವರಿಸದೆ ಹೊಟ್ಟೆಪಾಡಿಗಾಗಿ ಆಯ್ದುಕೊಂಡದ್ದು ಕ್ಲೀನರ್ ವೃತ್ತಿ. ನಂತರ ಡ್ರೈವಿಂಗ್ ಕಲಿತು ಮೂರು ವರ್ಷಗಳ ನಂತರ ಟೆಂಪೋ ಖರೀದಿಸಿ ಮಾರುಕಟ್ಟೆಗೆ ಬಾಳೆಕಾಯಿ ಸಾಗಿಸುತ್ತಿದ್ದ ಅವರು ಕೆಲ ವರ್ಷ ಬಾಳೆಕಾಯಿ ವ್ಯಾಪಾರ ಮಾಡ್ದ್ದಿದೂ ಉಂಟು. ಆಗ ತಾನೇಕೆ ಸ್ವಂತ ಜಮೀನಿನಲ್ಲಿ ಬಾಳೆ ಬೆಳೆಯಬಾರದು ಎಂದು ಒಂದು ಕ್ಷಣ ಮಾಡಿದ ಯೋಚನೆ ಇಂದು ಅವರನ್ನು ಒಬ್ಬ ಯಶಸ್ವಿ ಪ್ರಗತಿಪರ ರೈತನಾಗಿಸಿದೆ.


ಚೀಮಂಗಲ ಗ್ರಾಮದಲ್ಲಿ 10 ಎಕರೆ ಜಮೀನು ಹೊಂದಿರುವ ಪಂಚಾಕ್ಷರಿ ಅವರು ಹಳೆ ಬೇಸಾಯ ಪದ್ಧತಿಯಲ್ಲಿ ಬರುವ ಕಡಿಮೆ ಇಳುವರಿ, ಕೂಲಿ ಕಾರ್ಮಿಕರ ಸಮಸ್ಯೆ, ಕೈಗೆಟುಕಲಾರದ ಲಾಭ ಕಂಡು ಜಮೀನಿನತ್ತ ತಲೆ ಹಾಕಿದವರೇ ಅಲ್ಲ.
ಆದರೆ 2009 ರಲ್ಲಿ ಬಾಳೆ ಬೆಳೆಯಲೇ ಬೇಕೆಂದು ಹಟಕ್ಕೆ ಬಿದ್ದು ತಮ್ಮ 8 ಎಕರೆ ಜಮೀನಿನಲ್ಲಿ ದುಡಿಮೆಯ ಹಣದ ಜತೆಗೆ ಸಾಲ ಮಾಡಿ 12 ಲಕ್ಷ ರೂಪಾಯಿ ಖರ್ಚು ಮಾಡಿ ರೊಬಸ್ಟಾ (ಜಿ -9, ಪಚ್ಚ) ಬಾಳೆ ನಾಟಿ ಮಾಡಿದರು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಸಕಾಲಕ್ಕೆ ಮಾಡಬೇಕಾದ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ನಿರ್ವಹಿಸಿದ ಪರಿಣಾಮ ಅವರಿಗೆ ಮೊದಲ ಫಸಲೇ 280 ಟನ್ ಇಳುವರಿ ದೊರೆಯಿತು. 

ಪ್ರತಿ ಕ್ವಿಂಟಲ್ ಬಾಳೆಗೆ 1000 ರೂಪಾಯಿಯಂತೆ ಮಾರಾಟ ಮಾಡಿದಾಗ ಒಟ್ಟು 28 ಲಕ್ಷ ಆದಾಯ ಬಂತು. ಖರ್ಚು ಕಳೆದು ನಿವ್ವಳ ಉಳಿದದ್ದು 16 ಲಕ್ಷ ರೂಪಾಯಿ. ಜತೆಗೆ 8 ಎಕರೆ ಬಾಳೆಯ ನಡುವೆ ಅಂತರ ಬೆಳೆಯಾಗಿ ಬೆಳೆದ ಚೆಂಡು ಹೂವಿನಿಂದ ಒಂದು ಲಕ್ಷ ರೂ ಆದಾಯ ಕೂಡ ಬಂದಿದೆ.

ಚೀಮಂಗಲದ ಯಶಸ್ಸಿನಿಂದ ಉತ್ತೇಜಿತರಾದ ಪಂಚಾಕ್ಷರಿ ಅವರು ಯಲಹಂಕ ಹತ್ತಿರದ ಬಾಗಲೂರು ಕ್ರಾಸ್ ಬಳಿ 15 ಎಕರೆ ಜಮೀನನ್ನು ಗುತ್ತಿಗೆ ಪಡೆದು ಅದರಲ್ಲಿ ಆರು ತಿಂಗಳ ಹಿಂದಷ್ಟೇ ರೊಬಸ್ಟಾ ಬಾಳೆ ಸಸಿ ನಾಟಿ ಮಾಡಿಸಿದ್ದಾರೆ. ಇಲ್ಲಿ ಸುಮಾರು 50 ಲಕ್ಷ ರೂಪಾಯಿ ಆದಾಯ ನಿರೀಕ್ಷೆ ಮಾಡಿದ್ದಾರೆ.

ಬಾಳೆ ಕೃಷಿಯಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ಗುಟ್ಟೇನು ಎಂದು ಕೇಳಿದರೆ, `ಗುಣಮಟ್ಟದಲ್ಲಿ ರಾಜಿಯಾಗದ ನನ್ನ ಸ್ವಭಾವ ಹಾಗೂ ಶ್ರಮ' ಎನ್ನುವ ಪಂಚಾಕ್ಷರಿ, ಕಾಲ ಕಾಲಕ್ಕೆ ತಮಗೆ ಮಾರ್ಗದರ್ಶನ ನೀಡುವ ಸಂಜಯ ನಗರ ನಿವಾಸಿ ಎಂಎಸ್ಸಿ ಪದವೀಧರ ರೈತ ಜಿ. ಮಂಜುನಾಥ ಅವರ ಸಹಕಾರವನ್ನು ನೆನೆಯುತ್ತಾರೆ.

`ಚೀಮಂಗಲ ಜಮೀನಿನಲ್ಲಿ ಎರಡು ಹಾಗೂ ಬಾಗಲೂರು ಕ್ರಾಸ್‌ನ ಜಮೀನಿನಲ್ಲಿ ನಾಲ್ಕು ಕೊಳವೆ ಬಾವಿ ಇದೆ. ಇದನ್ನು ಬಳಸಿಕೊಂಡು ಹನಿ ನೀರಾವರಿ ವ್ಯವಸ್ಥೆಯಲ್ಲಿ ಇಡೀ ಬಾಳೆ ತೋಟಕ್ಕೆ ನೀರಿನ ಜತೆಗೆ ರಸಗೊಬ್ಬರ ಹಾಗೂ ಔಷಧವನ್ನು ನೀಡುತ್ತೇನೆ. ಜತೆಗೆ ಬಾಳೆ ಗಿಡಗಳಿಗೆ ಸಾವಯವ ಪೋಷಕಾಂಶಗಳನ್ನು ಒದಗಿಸಲು ಮಧ್ಯೆ ಅಲಸಂದೆ ಬೆಳೆದು ಅದು ಹೂ ಬಿಡುವ ವೇಳೆ ಕತ್ತರಿಸಿ ಗಿಡದ ಬುಡಕ್ಕೆ ಮುಚ್ಚಿಗೆ ಮಾಡಿಸುತ್ತೇನೆ. ಹೀಗಾಗಿ ನಮ್ಮ ತೋಟದಲ್ಲಿ ಗುಣಮಟ್ಟದ ಬಾಳೆ ಬೆಳೆಯಲು ಸಾಧ್ಯವಾಗಿದೆ. ಚೀಮಂಗಲ ತೋಟದ ಬಾಳೆ ಗೊನೆಯೊಂದು 88 ಕಿಲೊ ತೂಗುತ್ತಿತ್ತು' ಎನ್ನುತ್ತಾರೆ ಪಂಚಾಕ್ಷರಿ. 

ವೈಟ್‌ಫಿಲ್ಡ್‌ನಲ್ಲಿರುವ ಸಫಲ್ ಮಾರುಕಟ್ಟೆಯವರು ಹಾಗೂ ಇತರೆ ವ್ಯಾಪಾರಸ್ಥರು ತೋಟಕ್ಕೇ ನೇರವಾಗಿ ಬಂದು ಬಾಳೆ ಖರೀದಿಸುವುದರಿಂದ ಪಂಚಾಕ್ಷರಿ ಅವರಿಗೆ ಮಾರುಕಟ್ಟೆಯ ಹಾಗೂ ಸಾಗಣೆ ರಗಳೆ ಇಲ್ಲ.

ಇತ್ತೀಚೆಗಷ್ಟೇ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ `ರಾಷ್ಟ್ರೀಯ ಕೃಷಿ ಮೇಳ'ದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಪಂಚಾಕ್ಷರಿ ಅವರ ತೋಟದ 72 ಕಿಲೊ ತೂಕದ ಬಾಳೆಯ ಗೊನೆಯೊಂದು ಆಕರ್ಷಣೆಯ ಕೇಂದ್ರಬಿಂದುಗಳಲ್ಲಿ ಒಂದಾಗಿತ್ತು. 

ರೈತರು ಕಾಟಾಚಾರಕ್ಕೆ ಕೃಷಿ ಮಾಡದೇ, ತಾವು ಬೆಳೆಯುವ ಬೆಳೆಯ ಕಾಲಕಾಲದ ಅಗತ್ಯಗಳನ್ನು ಅರಿತು ಸಕಾಲಕ್ಕೆ ಪೂರೈಸುವುದರಿಂದ ಖರ್ಚು ಕಡಿಮೆ ಮಾಡಬಹುದು ಹಾಗೂ ಗುಣಮಟ್ಟ ಸಹ ಕಾಯ್ದುಕೊಳ್ಳಬಹುದು ಎನ್ನುವ ಪಂಚಾಕ್ಷರಿ ಅವರು ಬಾಳೆ ಕೃಷಿಯಲ್ಲಿಯೇ ಸಾಧನೆ ಮಾಡಬೇಕೆಂಬ ಆಸೆ ಹೊಂದಿದ್ದಾರೆ. ಅದಕ್ಕಾಗಿ ಅವರು ಗುತ್ತಿಗೆ ಆಧಾರದ ಮೇಲೆ 80 ಎಕರೆ ಜಮೀನು ಪಡೆದು, ಬೃಹತ್ ಪ್ರಮಾಣದಲ್ಲಿ ಏಲಕ್ಕಿ ಬಾಳೆ ಬೆಳೆಯುವ ಸುಮಾರು 75 ಲಕ್ಷ ರೂಪಾಯಿಗಳ ಬೃಹತ್ ಯೋಜನೆ ರೂಪಿಸುತ್ತಿದ್ದಾರೆ.  

ಬಾಳೆ ಬೆಳೆಯಬೇಕೆನ್ನುವ ಆಸಕ್ತ ರೈತರು ಪಂಚಾಕ್ಷರಿ ಅವರೊಂದಿಗೆ ಅನುಭವ ಹಂಚಿಕೊಳ್ಳಬಹುದು. ಅವರ ಮೊಬೈಲ್ ನಂಬರ್: 94482 05037.

( ಪ್ರಜಾವಾಣಿ ದಿನಪತ್ರಿಕೆಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಗುರುವಾರ ಡಿಸೆಂಬರ್ 15, 2011ರಂದು ಪ್ರಕಟವಾದ ಲೇಖನ)

No comments:

Post a Comment