Wednesday, November 16, 2011

ಅಣಬೆ ಆಹಾರ

ಕ್ಯಾನ್ಸರ್, ಮಧುಮೇಹ, ರಕ್ತಹೀನತೆ, ಟ್ಯೂಮರ್ ಗಡ್ಡೆ, ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸುವ ಔಷಧೀಯ ಗುಣಗಳು ಅಣಬೆಯಲ್ಲಿವೆ.
ಅಣಬೆಯು ಹೆಚ್ಚು ಪೋಷಕಾಂಶ ಹಾಗೂ ಔಷಧಿಯ ಗುಣಗಳನ್ನು ಹೊಂದಿರುವ  ಶುದ್ದ ಸಸ್ಯಹಾರಿ ತರಕಾರಿ. ಶೀಲಿಂಧ್ರ (ಫಂಗಸ್) ಜಾತಿಗೆ ಸೇರಿದ ಈ ಸಸ್ಯವನ್ನು ಬಹಳ ಹಿಂದಿನಿಂದಲೂ ಮಾಂಸಾಹಾರ ತಯಾರಿಕೆಯಲ್ಲಿ ರುಚಿಗಾಗಿ ಬಳಸುತ್ತ ಬಂದಿರುವುದರಿಂದ ಇದು ಮಾಂಸಾಹಾರ ಎಂಬ ತಪ್ಪು ಕಲ್ಪನೆಯಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಅಣಬೆಯನ್ನು ಆಹಾರ ಮತ್ತು ಔಷಧಿಗಳಿಗಾಗಿ ಬಳಸಲಾಗುತ್ತದೆ.

ವಿವಿಧ ಗಾತ್ರ, ಬಣ್ಣ, ಆಕಾರಗಳಲ್ಲಿ ಕಾಣಸಿಗುವ ಅಣಬೆಯಲ್ಲಿ ಆಹಾರಕ್ಕಾಗಿ, ಔಷಧಿಗಾಗಿ ಬಳಸಬಹುದಾದ್ದು ಮತ್ತು ವಿಷಕಾರಿ ಹೀಗೆ ಮೂರು ವಿಧಗಳಿವೆ. ಅಣಬೆಯ ವೈಜ್ಞಾನಿಕ ಹೆಸರು `ಅಗಾರಿಕಸ್'. ಸುಮಾರು 14,000 ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿರುವ ಅಣಬೆಯ ಪ್ರಭೇದಗಳಲ್ಲಿ ಸುಮಾರು 5000 ಅಣಬೆ ಪ್ರಬೇಧಗಳನ್ನು ಆಹಾರಕ್ಕಾಗಿ ಬಳಸಬಹುದು. ಆದರೂ 31ವಿಭಾಗಗಳಲ್ಲಿ ಹರಿದು ಹಂಚಿಹೋಗಿರುವ ಅವುಗಳಲ್ಲಿ 2000 ಪ್ರಭೇದಗಳು ಮಾತ್ರ ತಿನ್ನಲು ಯೋಗ್ಯವಾಗಿವೆ.

ತಿನ್ನಲು ಯೋಗ್ಯವಾಗಿರುವ ಅಣಬೆ ಪ್ರಭೇದಗಳಲ್ಲಿ 100 ಪ್ರಬೇಧಗಳನ್ನು ಪ್ರಾಯೋಗಿಕವಾಗಿ, 50 ಪ್ರಭೇದಗಳನ್ನು ಖರ್ಚು ವೆಚ್ಚವಿಲ್ಲದೆ, 30 ಪ್ರಭೇದಗಳನ್ನು ವಾಣಿಜ್ಯೋದ್ಯಮ ಉದ್ದೇಶದಿಂದ ಮತ್ತು ಕೇವಲ 6 ಪ್ರಭೇದಗಳನ್ನು ಮಾತ್ರ ಹಲವಾರು ದೇಶಗಳಲ್ಲಿ ಆಹಾರ ಉತ್ಪಾದನಾ ಕೈಗಾರಿಕೆಗಳಿಗಾಗಿ ಬೆಳೆಯಲಾಗುತ್ತದೆ. ಬಟನ್, ಓಯಿಸ್ಟರ್, ಮಿಲ್ಕಿ, ಸೀಟೆಕ್, ಪ್ಯಾಡಿ ಸ್ಟ್ರೇವ್, ಜ್ವೆಸ್ ಇಯರ್, ಸಿಲ್ವರ್ ಇಯರ್, ಮೈಟೆಕ್, ಟರ್ಕಿ ಟೈಲ್, ರೀಶಿ ಇವು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯುವ ಪ್ರಮುಖ ಅಣಬೆ ಪ್ರಭೇದಗಳು.

ಇನ್ನೂ 1800 ಅಣಬೆ ಪ್ರಭೇದಗಳು ಔಷಧಿಯ ಗುಣ ಹೊಂದಿವೆ. ಒಟ್ಟು ಸಂಖ್ಯೆಯ ಅಣಬೆ ಪ್ರಭೇದಗಳನ್ನು ಗಣನೆಗೆ ತೆಗೆದುಕೊಂಡರೆ ವಿಷಕಾರಿ ಅಣಬೆ ಪ್ರಭೇದಗಳ ಸಂಖ್ಯೆ ತುಂಬಾ ಕಡಿಮೆ. ಒಟ್ಟು ಪ್ರಮಾಣದ ಶೇಕಡಾ 10 ರಷ್ಟು ಮಾತ್ರ ಎನ್ನುತ್ತಾರೆ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಅಣಬೆ ಕೃಷಿ ಪ್ರಯೋಗಾಲಯದಲ್ಲಿ ಪ್ರಾಧ್ಯಾಪಕ ವಿಜ್ಞಾನಿಯಾಗಿರುವ ಮೀರಾ ಪಾಂಡೆ.

ಆಧುನಿಕ ವೈದ್ಯಕೀಯ ರಂಗದ ಔಷಧ ವಿಜ್ಞಾನ ಶಾಸ್ತ್ರದ ಸಂಶೋಧನೆಗಳಲ್ಲಿ ಅಣಬೆಯ ಉಪಯೋಗ ಇತ್ತೀಚೆಗೆ ವ್ಯಾಪಕವಾಗಿ ಕಂಡುಬರುತ್ತಿದೆ. ಈವರೆಗೆ ನಡೆಸಲಾದ ಅನೇಕ ಸಂಶೋಧನೆಗಳಿಂದ ಅಣಬೆಯಲ್ಲಿ  ಕ್ಯಾನ್ಸರ್, ಮಧುಮೇಹ, ರಕ್ತಹೀನತೆ, ಟ್ಯೂಮರ್ ಗಡ್ಡೆ, ಅತಿಯಾದ ಬೊಜ್ಜು, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳನ್ನು ಗುಣಪಡಿಸುವ ಗುಣಗಳಿರುವುದು ಕಂಡು ಬಂದಿದೆ.

ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅಣಬೆ ಅತ್ಯುತ್ತಮ ಆಹಾರ. ಇದರಲ್ಲಿರುವ  `ಬೀಟಾ ಗ್ಲುಕಾನ್' ಹಾಗೂ `ಅನೋಲಿಕ್' ಆಮ್ಲಗಳು ಕ್ಯಾನ್ಸರ್ ಕಾಯಿಲೆಯನ್ನು ಪರಿಣಾಮಕಾರಿಯಾಗಿ ತಡೆಯಬಲ್ಲವು. ಅಲ್ಲದೇ ಮಧುಮೇಹ ಕಾಯಿಲೆಗೆ ರಾಮಬಾಣವಾದ ಇನ್ಸುಲಿನ್ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಉತ್ಪತ್ತಿಯಾಗುವಂತೆ ಇದರಲ್ಲಿನ ನೈಸರ್ಗಿಕ ಇನ್ಸುಲಿನ್ ಅಂಶ ಸಹಕರಿಸುತ್ತದೆ.

ಅಣಬೆಯು ಕಡಿಮೆ ಶರ್ಕರ ಪಿಷ್ಟ, ಕಡಿಮೆ ಕೊಬ್ಬಿನ ಅಂಶ, ಹೆಚ್ಚು ಪ್ರೊಟೀನ್, ವಿಟಮಿನ್ ಬಿ-1, ಬಿ-2 , ಕಬ್ಬಿಣಾಂಶ, ಪೊಟ್ಯಾಶಿಯಂ,  ಸೋಡಿಯಂ ಹಾಗೂ ಅಮೈನೋ ಆಮ್ಲಗಳು, ಆ್ಯಂಟಿಬಯೋಟಿಕ್ ಕಿಣ್ವಗಳು, ಆ್ಯಂಟಿ ಆಕ್ಸಿಡೆಂಟ್‌ಗಳ ಜತೆಗೆ ಶೇಕಡಾ 80-90 ನೀರಿನಂಶ, ಶೇಕಡಾ 8-10ರಷ್ಟು ನಾರಿನಂಶ ಹೊಂದಿದೆ. ಒಣಗಿದ ಅಣಬೆಯಲ್ಲಿ ವಿಶೇಷವಾಗಿ ವಿಟಾಮಿನ್ ಬಿ1,ಬಿ2,ಬಿ5, ಬಿ6, ಮತ್ತು ಬಿ7 ಅಂಶ ಹೆಚ್ಚಾಗಿ ಇರುತ್ತದೆ.

ಅಣಬೆಯಲ್ಲಿರುವ ಕ್ಯಾಲ್ಸಿಯಂ ಅಂಶ ಮೂಳೆಗಳ ಬೆಳವಣಿಗೆಗೆ, ಕಬ್ಬಿಣದ ಅಂಶವು ರಕ್ತಹೀನತೆ ನಿವಾರಣೆಗೆ, ಪೊಟ್ಯಾಷಿಯಂ ಅಂಶವು ರಕ್ತದೊತ್ತಡ ನಿಯಂತ್ರಣಕ್ಕೆ, ತಾಮ್ರದ ಅಂಶ ಬ್ಯಾಕ್ಟೀರಿಯಾ ನಾಶಕ್ಕೆ, ಸೆಲಿನಿಯಮ್ ಅಂಶವು ಹಲ್ಲು, ಮೂಳೆ, ಉಗುರು ಹಾಗೂ ಕೂದಲಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಅಣಬೆಯಿಂದ ಸಾರು, ಬಿರಿಯಾನಿ, ಪಕೋಡ, ಸೂಪ್, ಕಟ್‌ಲೆಟ್, ಮಂಚೂರಿ, ಪಲ್ಯ, ಸಲಾಡ್, ಪಿಜ್ಜಾ, ಬರ್ಗರ್ ತಯಾರಿಸಬಹುದು. ಜತೆಗೆ ಒಣ ಅಣಬೆಯನ್ನು ಪೌಡರ್ ಮಾಡಿ ಅಕ್ಕಿಯ ಜತೆ ಬೆರೆಸಿ ತಯಾರಿಸಿದ ಅನ್ನ ಮಕ್ಕಳಿಗೆ ಅತ್ಯುತ್ತಮ ಆಹಾರ.

( ಪ್ರಜಾವಾಣಿ ದಿನಪತ್ರಿಕೆಯ ಭೂಮಿಕಾ ಪುರವಣಿಯಲ್ಲಿ ಶನಿವಾರ ನವೆಂಬರ್ 5, 2001 ರಂದು ಪ್ರಕಟವಾದ ಲೇಖನ)

No comments:

Post a Comment