Tuesday, December 3, 2013

ಬೆಳೆಗಳಿಗೆ ಮಾರಿ ಅಂಗಮಾರಿ

ಬೋರ್ಡಾಕ್ಸ್ ಮಿಶ್ರಣ ಸಿಂಪರಣೆ ಮಾಡಿದ ಬೆಳೆ,
ಅಂಗಮಾರಿ ರೋಗ ಪೀಡಿತ ಟೊಮೆಟೊ ಬೆಳೆ
ಹತ್ತು ಹಲವು ಸಮಸ್ಯೆಗಳ ಮಧ್ಯೆ ಕೃಷಿಯನ್ನೇ ನಂಬಿ ಬದುಕುವ ರೈತರನ್ನು ಪರೀಕ್ಷೆಗೆ ಒಳಪಡಿಸುವಂತೆ ಹಠಾತ್ ಆಗಿ ದಾಳಿ ಮಾಡುವ ಕೀಟ ಮತ್ತು ರೋಗ ಬಾಧೆಗಳು ಅವರನ್ನು ಹೈರಾಣು ಮಾಡುವ ಜತೆಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿ ಅಪಾರ ನಷ್ಟ ಉಂಟು ಮಾಡುತ್ತವೆ.
ನಾಲ್ಕೈದು ವರ್ಷಗಳಿಂದ ರಾಜ್ಯದಲ್ಲಿ ಹೆಚ್ಚುತ್ತಿರುವ ಅಂಗಮಾರಿ ರೋಗದ ಹಾವಳಿಯಿಂದ ರೈತರು ನಷ್ಟ ಅನುಭವಿಸುವ ಜತೆಗೆ ತರಕಾರಿ ಬೆಳೆಗಳಿಂದಲೇ ವಿಮುಖರಾಗುತ್ತಿದ್ದಾರೆ.
ಯುರೋಪ್ ಮೂಲದ 13-A2 ‘ಪೆಟೊಫ್‌ಥರಾ ಇನ್‌ಪೆಸ್ಟನ್ಸ್ ಜೀನ್’ ನಮೂನೆಯ ಪ್ರಜಾತಿಗೆ ಸೇರಿದ ಶೀಲಿಂಧ್ರದಿಂದ ಹರಡುವ ಈ ಅಂಗಮಾರಿ ರೋಗದಿಂದ ಬೆಳೆ ಸಂಪೂರ್ಣವಾಗಿ ಒಂದೆರಡು ದಿನ ಗಳಲ್ಲೇ ನಾಶ ಹೊಂದುತ್ತದೆ ಎನ್ನುತ್ತಾರೆ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಸಸ್ಯ ರೋಗ ವಿಭಾಗದ ಪ್ರಧಾನ ವಿಜ್ಞಾನಿಯಾದ ಡಾ.ಪಿ.ಚೌಡಪ್ಪ.
2005-06ರಲ್ಲಿ ನೆದರ್‌ಲ್ಯಾಂಡ್‌ನಿಂದ ಆಲೂಗಡ್ಡೆ ಯನ್ನು ಆಮದು ಮಾಡಿಕೊಂಡ ವೇಳೆ ಭಾರತವನ್ನು ಪ್ರವೇಶಿಸಿದ ಈ ಘಾತುಕ ಶೀಲಿಂಧ್ರ ಹಾವಳಿಯು ಕರ್ನಾಟಕದಲ್ಲಿ 2008ರಿಂದ ಈಚೆಗೆ ಅಧಿಕವಾಗಿದೆ.
ಕರ್ನಾಟಕದಲ್ಲಿ ಮೊದಲ ಬಾರಿಗೆ ಅಂಗಮಾರಿ ರೋಗವು ಹಾಸನ ಜಿಲ್ಲೆಯಲ್ಲಿ ಕಾಣಿಸಿಕೊಂಡಾಗ ಅಲ್ಲಿನ ಆಲೂಗಡ್ಡೆ ಬೆಳೆಯುತ್ತಿದ್ದ ಪ್ರದೇಶವು 57 ಸಾವಿರ ಹೆಕ್ಟೇರ್‌ಗಳಷ್ಟಿತ್ತು. ಆದರೆ ಈ ಮಹಾಮಾರಿಗೆ ರೈತರು ರೋಸಿ ಹೋದ ಪರಿಣಾಮ ಇಂದು ಅದರ ಪ್ರಮಾಣವು ಜಿಲ್ಲೆಯಲ್ಲಿ 15 ಸಾವಿರ ಹೆಕ್ಟೇರ್‌ಗೆ ಕುಸಿದಿದೆ. ಅದೇ ರೀತಿ 2008ರಲ್ಲಿ ಬೆಂಗಳೂರಿನಲ್ಲಿ ಅಂಗಮಾರಿ ರೋಗವು ಟೊಮೆಟೊ ಬೆಳೆಯಲ್ಲಿ ಮೊದಲ ಬಾರಿಗೆ ಕಂಡುಬಂತು. ಸದ್ಯ ಭಾರತದಲ್ಲಿ 5.75ಲಕ್ಷ ಹೆಕ್ಟೇರ್‌, ರಾಜ್ಯದಲ್ಲಿ 87 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ.
ಇದರಲ್ಲಿ ಅಂಗಮಾರಿ ರೋಗದಿಂದ ಶೇ.20ರಷ್ಟು ನಷ್ಟ ಉಂಟಾಗಿದೆ ಎಂದು ಲೆಕ್ಕ ಹಾಕಿದರೂ ವಾರ್ಷಿಕ ಸಾವಿರಾರು ಕೋಟಿ ನಷ್ಟ ಉಂಟಾಗುತ್ತಿದೆ. ಸಾಮಾನ್ಯವಾಗಿ ಮಳೆಗಾಲದ ಸಮಯವಾದ ಜುಲೈನಿಂದ ನವೆಂಬರ್ ಅವಧಿಯಲ್ಲಿ ತರಕಾರಿ ಬೆಳೆಗಳ ಮೇಲೆ ದಾಳಿ ಮಾಡುವ ಅಂಗಮಾರಿ ರೋಗವು, ಮೋಡ ಕವಿದ ವಾತಾವರಣ, ತುಂತುರು ಮಳೆ, ಗಾಳಿಯಲ್ಲಿ ಉಷ್ಣಾಂಶದ ಪ್ರಮಾಣವು 20-22 ಡಿಗ್ರಿ ಸೆಂಟಿಗ್ರೇಡ್ ಇರುವಾಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಈ ರೋಗದ ಲಕ್ಷಣವೆಂದರೆ ಬೆಳೆಯ ಕೆಳಗಿನ ಎಲೆಗಳಲ್ಲಿ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು ನಂತರ ಅವು ಕಪ್ಪಾಗಿ ಎಲ್ಲ ಎಲೆಗಳಿಗೂ ಹರಡಿ ಒಂದೆರಡು ದಿನಗಳಲ್ಲೇ ಸಂಪೂರ್ಣ ವಾಗಿ ಗಿಡವನ್ನೇ ನಾಶ ಮಾಡುತ್ತದೆ. ಮಾರುಕಟ್ಟೆಗಳಲ್ಲಿ ಈ ರೋಗ ನಿಯಂತ್ರಣಕ್ಕೆ ಹತ್ತು ಹಲವು ಕೀಟ ನಾಶಕಗಳು ದೊರೆಯುತ್ತವೆಯಾದರೂ ಖರ್ಚಿನ ದೃಷ್ಟಿಯಿಂದ ದುಬಾರಿ ಯಾಗುವ ಜತೆಗೆ ಆರೋಗ್ಯದ ದೃಷ್ಟಿ ಯಿಂದ ಇವುಗಳ ಬಳಕೆ ಒಳ್ಳೆಯದಲ್ಲ.
ಈ ನಿಟ್ಟಿನಲ್ಲಿ ಶುದ್ಧ ಸಾವಯವ ಪದ್ಧತಿಯಲ್ಲಿ ಕಡಿಮೆ ಖರ್ಚಿನಲ್ಲಿ ರೈತರೇ ಸಿದ್ಧಪಡಿಸಿ­ಕೊಳ್ಳ­ಬಹುದಾದ ಬೋರ್ಡಾಕ್ಸ್ ಮಿಶ್ರಣದ ಬಳಕೆಯು ಜನರ ಆರೋಗ್ಯ ದೃಷ್ಟಿಯಿಂದ, ಕೀಟನಾಶಕಗಳ ವೆಚ್ಚವನ್ನು ಕಡಿಮೆಗೊಳಿಸುವುದು ಸೇರಿದಂತೆ ಅಂಗಮಾರಿ ರೋಗವನ್ನು ಪರಿಣಾಮಕಾರಿ­ಯಾಗಿ ನಿರ್ವಹಿಸುತ್ತದೆ ಎನ್ನುತ್ತಾರೆ ಚೌಡಪ್ಪ.
ಬೋರ್ಡಾಕ್ಸ್ ಮಿಶ್ರಣ ತಯಾರಿಸುವ ವಿಧಾನ
50 ಲೀಟರ್ ನೀರಿನಲ್ಲಿ ಒಂದು ಕೆ.ಜಿ ಮೈಲುತುತ್ತು (ಕಾಫರ್ ಸಲ್ಫೇಟ್) ಕರಗಿಸಿ ಮಿಶ್ರಣ ತಯಾರಿಸಬೇಕು. ಅದೇ ರೀತಿ 50 ಲೀಟರ್ ನೀರಿನಲ್ಲಿ ಒಂದು ಕೆ.ಜಿ ಕಪ್ಪೆ ಚಿಪ್ಪಿನ ಸುಣ್ಣವನ್ನು ಕರಗಿಸಿ ಮಿಶ್ರಣ ಮಾಡಬೇಕು. ಹೀಗೆ ಪ್ರತ್ಯೇಕವಾಗಿ ಸಿದ್ಧಪಡಿಸಿದ ಎರಡು ಮಿಶ್ರಣಗಳನ್ನು ಒಂದಾಗಿ ಬೆರೆಸಬೇಕು. ಹೀಗೆ ಬೆರೆಸುವಾಗ ಕಡ್ಡಾಯವಾಗಿ ಮೈಲುತುತ್ತು ಮಿಶ್ರಣದ ನೀರಿಗೆ ಸುಣ್ಣದ ನೀರನ್ನು ಸೇರಿಸುವುದನ್ನು ಮರೆಯಬಾರದು.
ಒಂದು ಎಕರೆ ತರಕಾರಿ ಬೆಳೆಗೆ 250 ಲೀಟರ್ ಬೋರ್ಡಾಕ್ಸ್ ದ್ರಾವಣ ಸಿಂಪರಣೆ ಸಾಕಾಗುತ್ತದೆ. 100 ಲೀಟರ್ ಬೋರ್ಡಾಕ್ಸ್ ದ್ರಾವಣ ತಯಾರಿಕೆಗೆ ತಗಲುವ ವೆಚ್ಚ ಕೇವಲ 160 ರೂಪಾಯಿ ಮಾತ್ರ.
ಈ ದ್ರಾವಣವನ್ನು ತೆಂಗು, ದ್ರಾಕ್ಷಿ ಸೇರಿದಂತೆ ಎಲ್ಲ ಬಗೆಯ ತರಕಾರಿಗಳಿಗೆ ಸಿಂಪಡಿಸಬಹುದಾದರೂ ಹೀರೆ, ಸೌತೆ ಯಂತಹ ಬಳ್ಳಿಗಳನ್ನು ಹೊಂದಿರುವ ತರಕಾರಿಗಳಿಗೆ ಇದು ಅಷ್ಟೊಂದು ಸೂಕ್ತವಲ್ಲ ಎನ್ನುತ್ತಾರೆ ಚೌಡಪ್ಪ.
ಸದ್ಯ ಮಾರುಕಟ್ಟೆಯಲ್ಲಿ ಅಂಗಮಾರಿ ಶೀಲಿಂಧ್ರ ನಿರೋಧಕ ಶಕ್ತಿಯುಳ್ಳ ಯಾವುದೇ ತಳಿಗಳು ಲಭ್ಯವಿಲ್ಲವಾದ್ದರಿಂದ ರೈತರು ಇಂತಹ ದ್ರಾವಣಗಳ ಮೊರೆಹೋಗುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಅವರು.
ಅಂಗಮಾರಿ ರೋಗಕ್ಕೆ ಬೋರ್ಡಾಕ್ಸ್ ದ್ರಾವಣ ಮಾತ್ರವಲ್ಲದೇ ಐಐಎಚ್‌ಆರ್‌ನ ವಿಜ್ಞಾನಿಗಳು ಎಣ್ಣೆ ಮಾಧ್ಯಮದಲ್ಲಿ ಅಭಿವೃದ್ಧಿಪಡಿಸಿರುವ ಟ್ರೈಕೋಡರ್ಮ ಹಾರ್ಜಿಯಾನಮ್ ಒಟಿಪಿಬ್-3 ಎಂಬ ದ್ರಾವಣ ಕೂಡ ಲಭ್ಯವಿದೆ. ಮಾಹಿತಿಗೆ: ಚೌಡಪ್ಪ ಅವರ ಸಂಪರ್ಕ ಸಂಖ್ಯೆ -99163 55932.
(ಪ್ರಜಾವಾಣಿ ದಿನಪತ್ರಿಕೆ ಕರ್ನಾಟಕ ದರ್ಶನ ಪುರವಣಿಯಲ್ಲಿ ಮಂಗಳವಾರ, ಡಿಸೆಂಬರ್ 03, 2013 ರಂದು ಪ್ರಕಟವಾದ ಲೇಖನ)

No comments:

Post a Comment