Wednesday, October 16, 2013

ಸಿಡಿಲಿನಿಂದ ಸೆಲ್‌ಫೋನ್ ಚಾರ್ಜ್ !


ತಲೆಬರಹ ಓದುತ್ತಲೇ ಬರಸಿಡಿಲು ಬಡಿದವರಂತಾಗದಿರಿ! ಏಕೆಂದರೆ, ಇದು ನಿಜವಾದ ಸಂಗತಿಯೇ ಆಗಿದೆ ಎನ್ನುತ್ತಾರೆ, ಅನಿರೀಕ್ಷಿತವಾಗಿ, ಆದರೆ ಮೊಟ್ಟ ಮೊದಲ ಬಾರಿಗೆ ಈ ಕಲ್ಪನೆಯನ್ನು ವಾಸ್ತವಕ್ಕಿಳಿಸಿದ ವಿಜ್ಞಾನಿಗಳು. ಇಂತಹದೊಂದು ವಿಚಿತ್ರ ಕಲ್ಪನೆಯ ಸುಳಿವನ್ನು 200 ವರ್ಷಗಳ ಹಿಂದೆಯೇ ನೀಡಿದವರು ಜನಪ್ರಿಯ ಇಂಗ್ಲಿಷ್ ಕತೆಗಾರ್ತಿ ಮೇರಿ ಶೆಲ್ಲಿ.

‘Frankenstein’ ಎಂಬ ತಮ್ಮ ಕಾದಂಬರಿಯಲ್ಲಿ ಮೇರಿ ಅವರು, ಮಾನವ ದೇಹದಲ್ಲಿ ನಿಂತುಹೋಗಿದ್ದ ಉಸಿರಾಟ ಸಿಡಿಲಿನ ಆಘಾತದ ಮೂಲಕ ಪುನಃ ಪ್ರಾರಂಭಗೊಳ್ಳುವ ಚಿತ್ರಣವೊಂದನ್ನು ಕಟ್ಟಿಕೊಟ್ಟಿದ್ದರು.

ಇದೇ ಜಾಡಿನಲ್ಲಿ ಇದೀಗ ಮುಂದು ವರಿದಿರುವ ಲಂಡನ್‌ನ ಸೌತಾಂಪ್ಟನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನೋಕಿಯಾ ಮೊಬೈಲ್ ಕಂಪೆನಿಯ ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ ಮಿಂಚಿನ ಶಕ್ತಿಯನ್ನು ವೈಯಕ್ತಿಕ ಉಪಯೋಗಕ್ಕಾಗಿ ಹಾಗೂ ಉದ್ಯಮ ಕ್ಕಾಗಿ ಬಳಸುವ ಸಾಹಸಕ್ಕೆ ಮುಂದಾಗಿದ್ದಾರೆ.

ಪ್ರಕೃತಿಯಲ್ಲಿರುವ ಮಹತ್ವದ ಶಕ್ತಿ ಸಂಪನ್ಮೂಲಗಳಲ್ಲಿ ಒಂದಾಗಿರುವ ಹಾಗೂ ಸುಲಭದಲ್ಲಿ ದೊರೆಯುವ ಈ ಶಕ್ತಿಯನ್ನು ಗ್ರಾಹಕರು ತಮ್ಮ ಸಾಧನಗಳ ಉಪಯೋಗಕ್ಕಾಗಿ ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಲಿ ಎನ್ನುವುದೇ ನಮ್ಮ ಉದ್ದೇಶ ಎನ್ನುತ್ತಾರೆ ಸಂಶೋಧಕರು.

ನೈಸರ್ಗಿಕ ಶಕ್ತಿ ಸಂಪನ್ಮೂಲಗಳನ್ನು ಬಳಸಿ ಹೇಗೆ ಮೊಬೈಲ್ ಫೋನ್ ಚಾರ್ಜ್ ಮಾಡಬಹುದು ಎಂಬ ಅಧ್ಯ ಯನ ಕೈಗೊಂಡ ವೇಳೆ ಸಂಶೋಧಕರಿಗೆ ಸಿಡಿಲಿನ ಅಗಾಧ ಶಕ್ತಿಯ ಬಳಕೆ ಕುರಿತ ಸಂಶೋಧನೆಯತ್ತ ಗಮನ ಹರಿಯಿತು.

‘ಸಿಡಿಲಿನಿಂದ ಹೊರಡುವ ಶಕ್ತಿಯ ರೀತಿಯಲ್ಲಿಯೇ ಪ್ರತಿ 300ಎಂಎಂ ಅಂತರದಲ್ಲಿ ಸುಮಾರು 2ಲಕ್ಷಕ್ಕೂ ಅಧಿಕ ವೋಲ್ಟ್ ವಿದ್ಯುತ್ ಶಾಖವನ್ನು ವಿದ್ಯುತ್ ಪರಿವರ್ತಕದ ಮೂಲಕ ಪರ್ಯಾಯ ವಿದ್ಯುತ್ ಆಗಿ ಪರಿವರ್ತಿಸಿ, ಸಂಗ್ರಹಿಸಿ ಫೋನ್ ಬ್ಯಾಟರಿ ಚಾರ್ಜ್ ಮಾಡಲು ಉಪಯೋಗಿಸಬಹುದಾಗಿದೆ. ಈ ಸವಾಲನ್ನು ನಾವು ನೋಕಿಯಾ ಮೂಲಕ ಪ್ರಸ್ತುತಪಡಿಸಲು ಹರ್ಷಿಸುತ್ತೇವೆ’ ಎನ್ನುತ್ತಾರೆ ವಿಶ್ವದ ಹೈವೋಲ್ಟೇಜ್ ಪ್ರಯೋ ಗಾಲಯಗಳಲ್ಲಿ ಪ್ರಮುಖವಾದ ವಿಶ್ವ ವಿದ್ಯಾಲಯದ ‘ಟೋನಿ ಡೇವಿಸ್ ಹೈ ವೋಲ್ಟೇಜ್ ಪ್ರಯೋಗಾಲಯ’ದ ಮುಖ್ಯಸ್ಥ ನೀಲ್ ಪಾಮರ್.

‘ಈ ಸಂಶೋಧನೆಯಲ್ಲಿ ಗಾಳಿಯ ಮೂಲಕ ಹರಿಯುವ ವಿದ್ಯುತ್ ಸಹಾ ಯದಿಂದ ವಿವಿಧ ಸಾಧನಗಳ ವಿದ್ಯುತ್ ಕೋಶಗಳನ್ನು ಮರುಪೂರಣ ಮಾಡುವ ಅಂಶವು ದೃಢಪಟ್ಟಿದ್ದು, ನೈಸರ್ಗಿಕ ಶಕ್ತಿ ಸಂಪನ್ಮೂಲಗಳ ಬಳಕೆಯ ಮಾರ್ಗದಲ್ಲಿ ಇದು ಕೂಡ ಒಂದು ಮಹತ್ವದ ಹೆಜ್ಜೆ ಯಾಗಿದೆ’ ಎನ್ನುತ್ತಾರೆ ನೀಲ್ ಪಾಮರ್.

‘ಈ ರೀತಿಯ ತಂತ್ರಜ್ಞಾನದ ಪ್ರಯೋಗ ಯಾವುದೇ ಮೊಬೈಲ್ ಫೋನ್ ಕಂಪೆನಿಗಳಿಗೆ ಮೊದಲನೆಯದಾ ಗಿದೆ. ಈ ಪ್ರಯೋಗವನ್ನು ಜನರು ಮನೆಯಲ್ಲಿ ಮಾಡಲು ಪ್ರಯತ್ನಿಸಬಾರದೆಂದು ನಾವು ಸ್ಪಷ್ಟವಾಗಿ ಶಿಫಾರಸು ಮಾಡಿದ್ದೇವೆ. ಆದರೂ ನಾವು ಮುಂದೆ ಬರಲಿರುವ ಅಡ್ಡಿ–ಆತಂಕಗಳನ್ನು ಎದುರು ನೋಡುತ್ತಿದ್ದೇವೆ.

ನಮ್ಮ ಉತ್ಪನ್ನಗಳ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಹೊಸ ಹೊಸ ಸಂಶೋಧನೆಗಳಿಗೆ ನಾವು ಒತ್ತು ನೀಡುತ್ತೇವೆ’ ಎನ್ನುತ್ತಾರೆ ಈ ಸಂಶೋಧನೆಗೆ ಸಹಕಾರ ನೀಡಿದ ನೋಕಿಯಾ ಮೊಬೈಲ್ ಕಂಪೆನಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗ ದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಕ್ರಿಸ್ ವೆಬರ್.

(ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಅಕ್ಟೋಬರ್ 16, 2013 ರಂದು ಪ್ರಕಟವಾದ ಲೇಖನ)

No comments:

Post a Comment